ಸಾಹಿತ್ಯಕ್ಕಿರುವ ಶಕ್ತಿ ರಾಜಕಾರಣಿಗಳಿಗೆ ತೋರಿಸಬೇಕು

| Published : Dec 27 2023, 01:32 AM IST / Updated: Dec 27 2023, 01:33 AM IST

ಸಾರಾಂಶ

ಸಾಹಿತ್ಯಕ್ಕಿರುವ ಶಕ್ತಿ ರಾಜಕಾರಣಿಗಳಿಗೆ ತೋರಿಸಬೇಕು ಎಂದು ಮರಣ ಮೃದಂಗ ನಾಟಕ ಪ್ರದರ್ಶನದಲ್ಲಿ ಸಾಹಿತಿ ಯ.ರು. ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜಕೀಯ ಪುಡಾರಿಗಳು ತಿಳಿದುಕೊಳ್ಳಬೇಕಾದಂತಹ ಹಲವಾರು ವಿಷಯಗಳನ್ನೊಳಗೊಂಡಿರುವ ಮರಣ ಮೃದಂಗ ನಾಟಕವನ್ನು ಮೊದಲು ರಾಜಕಾರಣಿಗಳು ನೋಡಬೇಕು. ರಾಜಕಾರಣಿಗಳಿಗಾಗಿಯೇ ಈ ನಾಟಕ ಪ್ರದರ್ಶನವೊಂದನ್ನು ರಂಗಸಂಪದದವರು ಆಯೋಜಿಸಬೇಕು. ಸಾಹಿತ್ಯಕ್ಕಿರುವ ಶಕ್ತಿಯನ್ನು ರಾಜಕಾರಣಿಗಳಿಗೆ ತೋರಿಸಬೇಕು ಎಂದು ಹಿರಿಯ ಸಾಹಿತಿ ಯ.ರು. ಪಾಟೀಲ ಹೇಳಿದರು.

ನಗರದ ಕನ್ನಡ ಭವನದಲ್ಲಿ ರಂಗಸಂಪದದವರು ಕಾರಂತ ನಾಟಕೋತ್ಸವದ ಹಿನ್ನೆಲೆ ಆಯೋಜಿಸಿದ್ದ ಡಾ.ಅರವಿಂದ ಕುಲಕರ್ಣಿ ನಿರ್ದೇಶನದ ರಾಜೇಂದ್ರ ಕಾರಂತ ರಚನೆಯ ಮರಣ ಮೃದಂಗ ನಾಟಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ಗಟ್ಟಿ ಕಥೆ, ಉತ್ತಮ ನಿರ್ದೇಶನ, ಅತ್ಯುತ್ತಮ ಅಭಿನಯ, ಸುಮಧುರ ಸಂಗೀತ ಇವುಗಳ ಸಮ್ಮಿಲನವೇ ಇಂದಿನ ರಾಜೇಂದ್ರ ಕಾರಂತ ರಚನೆಯ ಮರಣ ಮೃದಂಗ ನಾಟಕ. ಇದು ಶ್ರೇಷ್ಠ ನಾಟಕ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಮಾತನಾಡಿ, ರಾಜಕಾರಣ ವಿಡಂಬನೆಗಳ ನಾಟಕ, ದೂರದರ್ಶನ ಧಾರಾವಾಹಿಗಳಲ್ಲಿ ನೋಡಿ, ಪತ್ರಿಕೆಗಳಲ್ಲಿಯ ಲೇಖನಗಳನ್ನು ನೋಡಿದರೂ ಸಹ ರಾಜಕೀಯ ದಾಹವೇಕೆ ಕಡಿಮೆಯಾಗುತ್ತಿಲ್ಲ. ಇಂದಿನ ನಾಟಕ ಮರಣ ಮೃದಂಗ ಹೇಳುವಂತೆ ಮನುಷ್ಯನ ಅಂತ್ಯಕಾಲದಲ್ಲಿ ಸಿಗುವ ಸುಖ ಶಾಂತಿಯೇ ನಿಜವಾದ ಆಸ್ತಿ ಎಂದರು.

ನಿರ್ದೇಶಕ ಡಾ. ಅರವಿಂದ ಕುಲಕರ್ಣಿ ಮಾತನಾಡಿ, ಮುದ್ದಣ್ಣನ ಪ್ರಮೋಷನ್ ಪ್ರಸಂಗ ಹಾಸ್ಯನಾಟಕದಲ್ಲಿ ತಮ್ಮ ಅಭಿನಯದಿಂದ ಹೊಟ್ಟೆ ಹುಣ್ಣಾಗುವಂತೆ ನಗೆಸಿದ ಕಲಾವಿದರೇ ಇಂದು ರಾಜಕೀಯ ವಿಡಂಬನೆಯ ಮರಣ ಮೃದಂಗ ಗಂಭೀರ ನಾಟಕದಲ್ಲಿ ಅಷ್ಟೇ ಸಮರ್ಥವಾಗಿ ಅಭಿನಯಿಸಿದ್ದಾರೆ. ಇದುವೇ ಕಲಾವಿದನ ನಿಜವಾದ ಕೌಶಲ್ಯವೆಂದು ಹೇಳಿದರು.

ಈ ವೇಳೆ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ನರರೋಗ ತಜ್ಞ ಡಾ. ಜಿ.ಎಂ.ವಾಲಿ, ಚಿದಾನಂದ ವಾಳಕೆ ಮುಂತಾದವರು ಇದ್ದರು.