ಸಾರಾಂಶ
ನೀರು ಕಲ್ಲಿಗಿಂತ ಮೆದುವಾದರೂ ನಿರಂತರತೆಯಿಂದ ಕಲ್ಲನ್ನೂ ಕೊರೆಯಬಲ್ಲದು.
ಗೋಕರ್ಣ: ನೀರು ಕಲ್ಲಿಗಿಂತ ಮೆದುವಾದರೂ ನಿರಂತರತೆಯಿಂದ ಕಲ್ಲನ್ನೂ ಕೊರೆಯಬಲ್ಲದು. ಜೀವನದಲ್ಲೂ ಪ್ರತಿದಿನ ಒಂದೊಂದೇ ಸತ್ಕಾರ್ಯಗಳನ್ನು ಮಾಡಿದರೆ ಅದ್ಭುತ ಶಕ್ತಿ ಬರುತ್ತದೆ ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ಶುಕ್ರವಾರ ''''''''ದಿನಚರ್ಯ'''''''' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಜೀವನದಲ್ಲಿ ನಿರಂತರತೆಗೆ ಇರುವ ಶಕ್ತಿ ಯಾವುದಕ್ಕೂ ಇಲ್ಲ ಎಂದು ವಿಶ್ಲೇಷಿಸಿದರು.ಒಂದು ಒಳ್ಳೆಯ ಅಭ್ಯಾಸ ನಮ್ಮನ್ನು ಉದ್ಧರಿಸುತ್ತದೆ ಅಂತೆಯೇ ಒಂದು ದುರಭ್ಯಾಸ ನಮ್ಮನ್ನು ನರಕಕ್ಕೆ ಇಳಿಸೀತು. ಕುಂದು ಇಲ್ಲದ ದಿನಚರ್ಯೆ ಇರಬೇಕು ಎಂದು ಸಲಹೆ ನೀಡಿದರು.
ಜೀವನದಲ್ಲಿ ಒಂದು ಕೆಡುಕು ಮಾಡಿದರೂ ಸತ್ಕಾರ್ಯಗಳ ದಿನಚರಿಯಲ್ಲಿ ಒಂದು ದಿನ ಲೋಪವಾದರೂ ಅದು ಕಪ್ಪುಚುಕ್ಕೆಯಾಗಿಯೇ ಉಳಿಯುತ್ತದೆ. ಒಂದು ದಿನವನ್ನು ವ್ಯರ್ಥ ಮಾಡಿದರೂ ಬಟ್ಟೆಯಲ್ಲಿ ರಂಧ್ರವಾದಂತೆ ಆಗುತ್ತದೆ. ಕೆಲವೊಮ್ಮೆ ಇದು ದೊಡ್ಡ ಅನಾಹುತಕ್ಕೂ ಕಾರಣವಾಗಬಹುದು ಎಂದು ಎಚ್ಚರಿಸಿದರು.ಜೀವನ ಒಂದು ಹಳ್ಳವಾದರೆ ಅದರಲ್ಲಿ ದಿನ ಒಂದು ಹನಿ ಇದ್ದಂತೆ. ಜೀವನ ಒಂದು ಭವನವಾದರೆ ದಿನ ಇಟ್ಟಿಗೆ ಇದ್ದಂತೆ. ಒಂದು ಇಟ್ಟಿಗೆ ಓರೆಯಾದರೆ ಗೋಡೆ ಡೊಂಕಾಗುತ್ತದೆ. ಜೀವನ ಒಂದು ಪಯಣವಾದರೆ ದಿನ ಒಂದು ಹೆಜ್ಜೆ. ಒಂದು ಹೆಜ್ಜೆ ತಪ್ಪಿದರೂ ಗುರಿ ತಲುಪಲು ಸಾಧ್ಯವಾಗದು ಎಂಬ ಉದಾಹರಣೆ ನೀಡಿದರು.
ಪ್ರತಿದಿನವೂ ಕೆಡುಕು ಮಾಡುವುದಿಲ್ಲ ಎಂಬ ಸಂಕಲ್ಪ ತೊಟ್ಟರೆ ಜೀವನದಲ್ಲಿ ಒಳಿತು ಸಾಧಿಸಬಹುದು ಎಂದರು. ಗಂಗಾಜಲ ಪಾನ ಮಾಡಿದರೆ ಅದರ ಪರಿಣಾಮ ಒಂದು ವರ್ಷ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ಪ್ರತಿದಿನ ಒಂದೊಂದು ಗುಟುಕು ಗಂಗಾಜಲ ಸೇವಿಸಿದರೆ ಶುದ್ಧವಾಗಿರಬಹುದು. ಜೀವನದಲ್ಲೂ ಪ್ರತಿದಿನ ಒಂದು ಒಳ್ಳೆಯ ಕೆಲಸ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ವಿಶ್ಲೇಷಿಸಿದರು.ರಾಮಚಂದ್ರಾಪುರ ಮಂಡಲದ ಹೊಸನಗರ, ಸಂಪೆಕಟ್ಟೆ, ನಿಟ್ಟೂರು, ತುಮರಿ ಮತ್ತು ಹೊಸಕೊಪ್ಪ ವಲಯಗಳ ಶಿಷ್ಯರಿಂದ ಸರ್ವಸೇವೆ ನೆರವೇರಿತು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿದ್ವಾನ್ ಸತ್ಯನಾರಾಯಣ ಶರ್ಮಾ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಶಾಂತಾರಾಮ ಹೆಗಡೆ ಹಿರೇಮನೆ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ. ಪ್ರಸನ್ನಕುಮಾರ್, ರಾಮಚಂದ್ರಾಪುರ ಮಂಡಲದ ಅಧ್ಯಕ್ಷ ಪ್ರಕಾಶ್ ಜೆ.ಎನ್, ಕಾರ್ಯದರ್ಶಿ ಜಿ.ಕೆ.ಮಧು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))