ಸಾರಾಂಶ
- ಅಖಿಲ ಭಾರತ ಹಿಂದು ಮಹಾಸಭಾ ಅರುಣಕುಮಾರ ಕಿಡಿ- - - ದಾವಣಗೆರೆ: ಖಾಸಗಿ ಶಾಲಾ-ಕಾಲೇಜುಗಳ ಪೈಕಿ ಅನೇಕ ಕಡೆ ಶಿಕ್ಷಕರು, ಬೋಧಕರು ಮತ್ತು ಪ್ರಾಚಾರ್ಯರ ನೇಮಕಾತಿಯಲ್ಲಿ ಸಮಗ್ರ ದಾಖಲಾತಿಗಳನ್ನೇ ಪರಿಶೀಲಿಸದೇ ವಿದ್ಯಾರ್ಹತೆ ಮತ್ತು ಅನುಭವವೇ ಇಲ್ಲದವರನ್ನು ನೇಮಕ ಮಾಡುವ ಕೆಲಸವಾಗುತ್ತಿದೆ ಎಂದು ಅಖಿಲ ಭಾರತ ಹಿಂದು ಮಹಾಸಭಾ ಜಿಲ್ಲಾಧ್ಯಕ್ಷ ಜೆ. ಅರುಣಕುಮಾರ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ಬೋಧಕರು, ಪ್ರಾಚಾರ್ಯರ ನೇಮಕಾತಿ ವೇಳೆ ವಿದ್ಯಾರ್ಹತೆ, ಅನುಭವ ಇಲ್ಲದವರನ್ನು ನೇಮಿಸಿಕೊಳ್ಳುವ ಆಡಳಿತ ಮಂಡಳಿಗಳ ನಿರ್ಧಾರ ಸರಿಯಲ್ಲ ಎಂದು ದೂರಿದರು.ವಿದ್ಯಾರ್ಹತೆ, ಅನುಭವ ಇಲ್ಲದ ಶಿಕ್ಷಕರು ತಮ್ಮ ಶೈಕ್ಷಣಿಕ ಕಾರ್ಯ ನಿರ್ವಹಣೆಯನ್ನು ಅವೈಜ್ಞಾನಿಕವಾಗಿ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪೋಷಕರು ಹಾಗೂ ಉಪನ್ಯಾಸಕರ ಮೇಲೆ ಆಡಳಿತ ಮಂಡಳಿ ಒಂದು ರೀತಿ ನಿರಂಕುಶ ಆಳ್ವಿಕೆ ನಡೆಸುತ್ತಿದೆ. ಅಲ್ಲದೇ, ಶೈಕ್ಷಣಿಕ ಚಟುವಟಿಕೆಗಳಲ್ಲಿ ರಾಜಕೀಯ ಮಾಡಿ, ಶಿಕ್ಷಣ ವ್ಯವಸ್ಥೆಯನ್ನೇ ಹದಗೆಡಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ ದಾಖಲೆಗಳನ್ನು ಮನಸ್ಸಿಗೆ ಬಂದಂತೆ ನಿರ್ವಹಿಸುತ್ತಿದ್ದಾರೆ. ಶಾಲಾ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ಶಾಲಾ-ಕಾಲೇಜುಗಳಿಗೆ ವಿಚಾರಣಾ ಭೇಟಿ ನೀಡಿ ದಾಖಲಾತಿ, ಹಾಜರಿ ಪುಸ್ತಕ, ವಿದ್ಯಾರ್ಹತೆ ಮತ್ತು ವಿದ್ಯಾರ್ಥಿಗಳ ಸಂಚಿತ ದಾಖಲೆಗಳನ್ನು ಪರಿಶೀಲಿಸಬೇಕು. ಸರಿಯಾಗಿ ನಿರ್ವಹಣೆ ಮಾಡದ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮುಂಬರುವ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ದಾವಣಗೆರೆಯಲ್ಲಿ ಶಿಕ್ಷಣ ಮಾಫಿಯಾ ಹೆಚ್ಚುತ್ತಿದೆ. ಲಕ್ಷಾಂತರ ರು. ಶುಲ್ಕ, ವಂತಿಗೆ ಕೇಳುವ ಖಾಸಗಿ, ಶಾಲಾ- ಕಾಲೇಜುಗಳಲ್ಲಿ ಮಾತ್ರ ತರಬೇತಿ ಪಡೆಯದ ಶಿಕ್ಷಕರು ಮತ್ತು ಬೋಧಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸಂಬಂಧಿಸಿದ ಜಿಲ್ಲಾಧಿಕಾರಿ, ಸಾ.ಶಿ.ಇ. ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಈ ಹಿಂದಿನಿಂದಲೂ ಹಲವಾರು ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿ ಉದಾಸೀನ ಮಾಡಿದರೆ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಜೆ. ಅರುಣಕುಮಾರ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಅರುಣಕುಮಾರ, ವಕ್ತಾರ ಕೆ.ಜಿ. ಚಂದ್ರು, ಉಪಾಧ್ಯಕ್ಷ ಪ್ರಕಾಶ, ಎಸ್. ಅರವಿಂದಾಕ್ಷ ಇತರರು ಇದ್ದರು.---- -7ಕೆಡಿವಿಜಿ11:
ದಾವಣಗೆರೆಯಲ್ಲಿ ಅಖಿಲ ಭಾರತ ಹಿಂದು ಮಹಾಸಭಾ ಜಿಲ್ಲಾಧ್ಯಕ್ಷ ಜೆ.ಅರುಣಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.