ಬಾಲ್ಯ ವಿವಾಹ ಪದ್ಧತಿ ಬೇರು ಸಮೇತ ನಿರ್ಮೂಲನೆ ಆಗಬೇಕು: ಬೆನ್ನೂರ

| Published : Jul 10 2025, 12:45 AM IST

ಸಾರಾಂಶ

ಹೆಣ್ಣು ಮಕ್ಕಳಿಗೆ 18, ಗಂಡು ಮಕ್ಕಳಿಗೆ 21 ವರ್ಷದೊಳಗೆ ಮದುವೆ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹ ಮಾಡಿದಲ್ಲಿ 2 ವರ್ಷ ಜೈಲು, 1 ಲಕ್ಷ ರು. ದಂಡ ವಿಧಿಸಬಹುದು. ಇದನ್ನು ತಡೆಗಟ್ಟಿ ಮಕ್ಕಳ ಬಾಳು ಬೆಳಗಿಸುವ ಮೂಲಕ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಾಲ್ಯ ವಿವಾಹ ಪದ್ಧತಿಯನ್ನು ಬೇರು ಸಮೇತ ನಿರ್ಮೂಲನೆ ಮಾಡಲು ಸಾರ್ವಜನಿಕರಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಅವಶ್ಯಕ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.

ತಾಲೂಕಿನ ಬೆಳವಾಡಿ ಗ್ರಾಮದ ಉಮಾ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಮಹದೇವಪುರ ಆರೋಗ್ಯ ಕೇಂದ್ರ, ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ 18, ಗಂಡು ಮಕ್ಕಳಿಗೆ 21 ವರ್ಷದೊಳಗೆ ಮದುವೆ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹ ಮಾಡಿದಲ್ಲಿ 2 ವರ್ಷ ಜೈಲು, 1 ಲಕ್ಷ ರು. ದಂಡ ವಿಧಿಸಬಹುದು. ಇದನ್ನು ತಡೆಗಟ್ಟಿ ಮಕ್ಕಳ ಬಾಳು ಬೆಳಗಿಸುವ ಮೂಲಕ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದರು.

ಮುಖ್ಯ ಶಿಕ್ಷಕ ದಿನೇಶ್ ಮಾತನಾಡಿ, ಪಾಲಕರು ತಮ್ಮ ಸ್ವ-ಇಚ್ಚೆಯಂತೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಮಕ್ಕಳಿಗೆ ನಡುವಳಿಕೆ ಪಾಠ ಮನೆಯಿಂದಲೇ ಅದು ತಾಯಿಯಿಂದಲೇ ಆಗಬೇಕು. ಗ್ರಾಮ ಉತ್ತಮವಾಗಿ ಬೆಳೆಯಬೇಕಾದರೆ ಶಿಕ್ಷಣ ಅತೀ ಅವಶ್ಯಕ ಎಂದರು.

ಇದಕ್ಕೂ ಮುನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಜನಜಾಗೃತಿ ಜಾಥಾ ನಡೆಯಿತು. ಗ್ರಾಪಂ ಅಧ್ಯಕ್ಷ ಜವರಪ್ಪ ಜಾಥಾಗೆ ಹಸಿರು ನಿಶಾನೆ ತೋರಿದರು. ನಂತರ ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳೊಂದಿಗೆ, ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಈ ವೇಳೆ ಗ್ರಾಪಂ ಮಾಜಿ ಸದಸ್ಯೆ ಗೌರಮ್ಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತ ರಾಮು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿನಯ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಸಮುದಾಯ ಆರೋಗ್ಯ ಅಧಿಕಾರಿ ಮೌಲ್ಯ, ಅಂಗನವಾಡಿ ಕಾರ್ಯಕರ್ತೆ ಪ್ರತಿಭಾ, ಆಶಾ ಕಾರ್ಯಕರ್ತೆ ಅನಿತಾ, ಸುಜಾತ ಹಾಗೂ ಗ್ರಾಮದ ಮುಖಂಡರು ಇದ್ದರು.