ಸಾರಾಂಶ
ಅಸ್ಪೃಶ್ಯತೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಬಸವಣ್ಣ ಮೂಕಹಳ್ಳಿ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಅಸ್ಪೃಶ್ಯತೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಬಸವಣ್ಣ ಮೂಕಹಳ್ಳಿ ತಿಳಿಸಿದರು.ನಗರದ ಹೊರ ವಲಯದಲ್ಲಿರುವ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ನಾವು ಮನಜರು- ಗಾಂಧಿ ಭಾರತ ಪರಿಕಲ್ಪನೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಅಸ್ಪೃಶ್ಯತೆ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ನಿಲುವುಗಳು ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಾತುರ್ವರ್ಣ ಪದ್ಧತಿಯು ರೂಪಿಸಿರುವ ವರ್ಣವ್ಯವಸ್ಥೆಯಿಂದಾಗಿ ಅಸ್ಪೃಶ್ಯತೆ ನಿರ್ಮಾಣವಾಗಿದ್ದು, ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಈ ಅಸ್ಪೃಶ್ಯತೆಯನ್ನ ಅಳಿಸಿ ಹಾಕಲು ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ನಿರಂತರವಾಗಿ ಹೋರಾಟ ಮಾಡಿದ್ದಾರೆ. ಗಾಂಧೀಜಿಯವರು ಶೋಷಿತ ಸಮುದಾಯಗಳನ್ನು ಹರಿಜನ ಎಂದು ಕರೆದು ಅವರನ್ನು ದೇವರ ಮಕ್ಕಳು ಎಂದು ಭಾವಿಸುವಂತೆ ಆಧ್ಯಾತ್ಮದ ನೆಲೆಯಲ್ಲಿ ವಿಶ್ಲೇಷಣೆ ಮಾಡಿದರು ಮತ್ತು ಈ ಅಸ್ಪೃಶ್ಯತೆಯನ್ನು ಅಳಿಸಲು ಹರಿಜನ ಸೇವಾ ಸಂಘ ಸ್ಥಾಪಿಸಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಜೊತೆಗೆ ಹರಿಜನ ಬಂದು ಎಂಬ ಪತ್ರಿಕೆಯನ್ನು ಸ್ಥಾಪಿಸಿ ಶೋಷಿತ ಪರವಾದಂತಹ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದ್ದರು. ಮತ್ತು ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಅಂಟಿದ ಕಳಂಕ ಎಂದು ನಂಬಿದ್ದರು. ಬಸವಾದಿ ಶರಣರು ಅಸ್ಪೃಶ್ಯತೆಯನ್ನ ಅಳಿಸಲು ದುಡಿದಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗನ್ನ ಹೋಗಲಾಡಿಸಲು ಇಂದಿಗೂ ಆಗಿಲ್ಲ ಇದು ವಿಪರ್ಯಾಸದ ಸಂಗತಿ,ಅಸ್ಪೃಶ್ಯತೆಯ ನೋವನ್ನು ಸ್ವತಹ ಅನುಭವಿಸಿದ್ದ ಅಂಬೇಡ್ಕರ್ ಅವರು ಅಸ್ಪೃಶ್ಯತೆ ಜಾತಿಯ ಮೂಲದಿಂದ ಹುಟ್ಟಿಕೊಂಡದ್ದಾಗಿದ್ದು, ಜಾತಿಯ ವಿನಾಶವಿಲ್ಲದೆ ಅಸ್ಪೃಶ್ಯತೆಯ ವಿನಾಶ ಅಸಾಧ್ಯ ಎಂದು ನಂಬಿದ್ದರು. ಇಂತಹ ಅಸ್ಪೃಶ್ಯತೆಯನ್ನ ತಡೆಗಟ್ಟಲು ಸಂವಿಧಾನ ರಚನೆಯ ಸಂದರ್ಭದಲ್ಲಿ 17ನೇ ವಿಧಿಯನ್ನು ರೂಪಿಸಿದ್ದಾರೆ. ಇದು ಅಸ್ಪೃಶ್ಯತೆಯ ವಿರುದ್ಧದ ಮೊದಲನೇ ಕಾನೂನು ಆಗಿದೆ.ಈ ಕಾನೂನಿನ ಅನ್ವಯ ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧವಾಗಿದ್ದು ಜನರು ಜಾಗೃತವಾಗಬೇಕಿದೆ. ಗಾಂಧೀಜಿ ಹಾಗೂ ಅಂಬೇಡ್ಕರ್ ಈ ದೇಶದಲ್ಲಿ ರಾಜಕೀಯ ಕಾರಣಕ್ಕಾಗಿ ಬಳಕೆಯಾಗುವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಆ ಎರಡು ಮುಖಗಳು ಒಂದಕ್ಕೊಂದು ನೋಡದಂತೆ ಮತ್ತು ಸಂಧಿಸದಂತೆ ಇವತ್ತಿನ ಒಂದು ವಲಯ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ಮಧು, ಕುಲಸಚಿವ ಮಹದೇವ ಜೆ ಮತ್ತು ಪ್ರಾಧ್ಯಾಪಕರಾದ ಡಾ ಶ್ರೀನಿವಾಸ್, ಡಾ. ರೇಖಾ ಹಾಜರಿದ್ದರು.