ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ಅಳಗಂಚಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿದ್ದ ಪುರಾತನ ಕಾಲದ ಕೆರೆ ಅಥವಾ ಕಲ್ಯಾಣಿಯನ್ನು ನೀರು ನಿಲ್ಲುವುದಿಲ್ಲ ಎಂಬ ನೆಪವೊಡ್ಡಿ ಪುರಾತತ್ವ ಇಲಾಖೆಯ ಅನುಮತಿ ಪಡೆಯದೆ ಗ್ರಾಪಂ ಅಧಿಕಾರಿಗಳು ಮುಚ್ಚಿ, ಆಟದ ಮೈದಾನ ನಿರ್ಮಿಸಲು ಮುಂದಾಗಿದ್ದು, ಪುರಾತನ ಕೆರೆಯನ್ನು ಉಳಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆರೆ ನಿರ್ಮಾಣವಾಗಿ ಸುಮಾರು 692 ವರ್ಷಅಳಗಂಚಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯ ಮತ್ತು ಕಲ್ಯಾಣಿ ಕೆರೆಯನ್ನು 1333ರಲ್ಲಿ ನಿರ್ಮಿಸಿರುವ ಬಗ್ಗೆ ದೇವಾಲಯದ ಮುಂಭಾಗ ಶಾಸನವಿದೆ. ದೇವಾಲಯದ ಪಕ್ಕದಲ್ಲಿ ಒಂದು ಕಾಲು ಎಕರೆಯಷ್ಟು ಪ್ರದೇಶವನ್ನು ದಾನಿ ಚಾಮಯ್ಯ ಎಂಬುವರು ದೇವಸ್ಥಾನದ ಕಲ್ಯಾಣಿ ನಿರ್ಮಾಣ, ನೀರಿನ ಸೌಲಭ್ಯ ಕಲ್ಪಿಸಲು ದಾನವಾಗಿ ನೀಡಿರುತ್ತಾರೆ.ಈ ಪ್ರದೇಶದಲ್ಲಿ ಕೆರೆ ನಿರ್ಮಾಣವಾಗಿ ಸುಮಾರು 692 ವರ್ಷಗಳೇ ಕಳೆದಿವೆ. ಅಲ್ಲದೆ ದೇವಸ್ಥಾನದ ಸ್ವಚ್ಛತೆಗಾಗಿ, ನೈವೇದ್ಯಕ್ಕಾಗಿ, ಜನರು ಕುಡಿಯುವ ನೀರು ಮತ್ತು ದನಕರುಗಳಿಗೆ ನೀರಿನ ಸೌಲಭ್ಯಕ್ಕಾಗಿ ಈ ಕೆರೆಕಟ್ಟೆಯನ್ನೇ ಅವಲಂಬಿಸಿದ್ದರು. ಜೊತೆಗೆ ಇದು ಮುಜರಾಯಿ ಇಲಾಖೆಗೆ ಸೇರ್ಪಡೆಗೊಂಡಿದೆ. ಆದರೆ ಮಳೆಯ ಭಾವದಿಂದಾಗಿ ನೀರಿನ ಮಾರ್ಗಗಳು ತಪ್ಪಿ ಹೋಗಿ ಕೆರೆ ಬತ್ತಿ ಹೋಗಿತ್ತು. ಕೆರೆ ಪುನರುಜ್ಜೀವನಗೊಳಿಸುವ ಸಲುವಾಗಿ ಕಳೆದ 8 ವರ್ಷದ ಹಿಂದೆ ಮಲ್ಲೂಪುರ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕಾಮಗಾರಿಯನ್ನು ನಡೆಸಿ ಕಲ್ಯಾಣಿ ಸುತ್ತಲೂ ಕಲ್ಲುಗಳಿಂದ ಕಟ್ಟೆ ಕಟ್ಟಿಸಿ ಪುನರು ಜೀವನ ಗೊಳಿಸಲಾಗಿತ್ತು.ಆದರೂ ಸಹ ನೀರಿನ ಮಾರ್ಗಗಳು ತಪ್ಪಿದ್ದರಿಂದ ಈ ಕಲ್ಯಾಣಿಯಲ್ಲಿ ನೀರು ನಿಲ್ಲದೆ ಇದ್ದರಿಂದ ಹಾಗೂ ಈ ಕೆರೆ ಪ್ರದೇಶ ಗ್ರಾಮದ ಮುಖ್ಯರಸ್ತೆಯಲ್ಲಿ ಇರುವ ಕಾರಣ ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳು ಯಾವ ಇಲಾಖೆಯಿಂದ ಅನುಮತಿಯನ್ನು ಪಡೆಯದೆ ಕೆರೆ ಮುಚ್ಚಲು ಮುಂದಾಗಿದ್ದರು. ಜೊತೆಗೆ ಗ್ರಾಮದ ಕೆಲವು ವ್ಯಕ್ತಿಗಳು ಜೊತೆಗೂಡಿ ಬಣ್ಣಾರಿ ಅಮ್ಮನ್ ಶುಗರ್ ಲಿಮಿಟೆಡ್ ಕಾರ್ಖಾನೆ ವತಿಯಿಂದ ಸಿಎಸ್.ಆರ್. ಅನುದಾನದಲ್ಲಿ ಈ ಕೆರೆಯನ್ನು ಮುಚ್ಚಿ ಶಾಲಾ ಮಕ್ಕಳ ಉಪಯೋಗಕ್ಕಾಗಿ ಆಟದ ಮೈದಾನವನ್ನು ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದರಿಂದಾಗಿ ಕಾರ್ಖಾನೆ ವತಿಯಿಂದ ಕಾಮಗಾರಿಯನ್ನು ಕೈಗೊಂಡು ಕೆರೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದರಿಂದ ಆಕ್ರೋಶಗೊಂಡ ಅಳಗಂಚಿ ಗ್ರಾಮದ ಪರಿಸರ ಪ್ರೇಮಿಗಳು ಮತ್ತು ಗ್ರಾಮಸ್ಥರು, ಗ್ರಾಮದ ಇತಿಹಾಸದ ಕುರುಹು ಇರುವ ಮತ್ತು ದೇವಾಲಯದ ಶಾಸನದಲ್ಲಿ ಉಲ್ಲೇಖವಾಗಿರುವ 692 ವರ್ಷದ ಹಳೆಯ ಕಲ್ಯಾಣಿ ಕೆರೆಯನ್ನು ಹಾಗೆ ಸುಸ್ಥಿತಿಯಲ್ಲಿ ಮರು ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮದ ಮುಖ್ಯಸ್ಥ ಹಾಗೂ ಶಿಕ್ಷಕ ಉಮೇಶ್ ಮಾತನಾಡಿ, ಗ್ರಾಮದಲ್ಲಿರುವ ಕಲ್ಯಾಣಿ ಕೆರೆ ಸುಮಾರು 700 ವರ್ಷಗಳ ಇತಿಹಾಸವುಳ್ಳದಾಗಿದ್ದು, ಇದು ಮುಜರಾಯಿ ಇಲಾಖೆಗೆ ಒಳಪಡುವುದರಿಂದ ಈ ಕೆರೆಯನ್ನು ಸರ್ಕಾರದ ಅನುಮತಿ ಪಡೆಯದೆ ಮುಚ್ಚಬಾರದು ಎಂದು ಕಾನೂನು ಇರುವುದರಿಂದ ಈ ಕೆರೆಯನ್ನು ಮುಚ್ಚಬಾರದೆಂದು ಕೆಲ ಗ್ರಾಮಸ್ಥರು ನ್ಯಾಯ ಕೇಳಲು ಹೋದರೆ ಅವರು ನಮ್ಮನ್ನೇ ಬೆದರಿಸಿ, ಕಳುಹಿಸಿದ್ದಾರೆ. ಪ್ರಭಾವಿಗಳಿಗೆ ಮಣೆ ಹಾಕಿ ಕೆರೆ ಮುಚ್ಚಿ ಹಾಕಿದ್ದಾರೆಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಕಚೇರಿಗೆ ದೂರು ನೀಡಲಾಗಿದೆ. ಜೊತೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ನಮ್ಮ ಮನವಿಯನ್ನು ಪುರಸ್ಕರಿಸದೆ ಪ್ರಭಾವಿಗಳಿಗೆ ಮಣೆ ಹಾಕಿ ಕೆರೆಯನ್ನು ಮುಚ್ಚಿ ಹಾಕಿದ್ದಾರೆ. ಕೆರೆಯನ್ನು ಮುಚ್ಚುವುದಾಗಿದ್ದರೆ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕಲ್ಲುಗಳಿಂದ ಏಕೆ ಕಟ್ಟೆ ನಿರ್ಮಾಣ ಮಾಡಬೇಕಿತ್ತು, ಇದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳ ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ, ಅಲ್ಲದೆ ಈಕೆರೆಯನ್ನು ಮುಚ್ಚುವುದರಿಂದ ಇತಿಹಾಸದ ಕುರುಹು ನಾಶವಾಗುವ ಜೊತೆಗೆ ಗ್ರಾಮದಲ್ಲಿ ಈ ಜಾಗ ನಮ್ಮ ಸಮುದಾಯಕ್ಕೆ ಸೇರಿದ್ದು, ಎಂಬ ಬಗ್ಗೆ ಗ್ರಾಮದಲ್ಲಿ ಜಗಳವಾಗಿ ಕೋಮುಗಲಭೆ ಉಂಟಾಗುವ ಸಾಧ್ಯತೆಯೂ ಹೆಚ್ಚಿದೆ. ಆದ್ದರಿಂದ ಈ ಗ್ರಾಮ ವರುಣ ವಿಧಾನಸಭಾ ವ್ಯಾಪ್ತಿಗೆ ಒಳಪಡುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೆರೆ ಮುಚ್ಚಿರುವವರ ಮೇಲೆ ಕ್ರಮ ಕೈಗೊಂಡು ಈ ಕಲ್ಯಾಣಿಕೆರೆಯನ್ನು ಮೊದಲಿನ ಸ್ಥಿತಿಯಲ್ಲಿ ಗ್ರಾಮಕ್ಕೆ ಉಳಿಸಿಕೊಡುವ ಮೂಲಕ ಇತಿಹಾಸದ ಸಂರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತಿಹಾಸದ ಹಿನ್ನೆಲೆಯುಳ್ಳ ಗ್ರಾಮದ ಕೆರೆಯನ್ನು ಮುಚ್ಚಿ ಹಾಕಿ ಇತಿಹಾಸವನ್ನೇ ನಾಶಪಡಿಸಲು ಮುಂದಾಗಿರುವ ತಪ್ಪಿತಸ್ಥ ಅಧಿಕಾರಿಗಳು ಮತ್ತು ಪ್ರಭಾವಿಗಳ ಮೇಲೆ ಕ್ರಮ ಕೈಗೊಂಡು ಕೆರೆ ಸಂರಕ್ಷಣೆಗೆ ಮುಂದಾಗುವರೇ ಅಥವಾ ಪ್ರಭಾವಿಗಳಿಗೆ ಮಣೆ ಹಾಕುವರೇ ಎಂಬುದನ್ನು ಕಾದು ನೋಡಬೇಕಿದೆ.-----------ಗ್ರಾಮದ ಮಹಾಲಿಂಗೇಶ್ವರ ದೇವಾಲಯದ ಪಕ್ಕದಲ್ಲಿರುವ ಜಾಗದಲ್ಲಿ ಹಳ್ಳವಿದ್ದು, ಚರಂಡಿ ನೀರು ಸಂಗ್ರಹಣೆಗೊಂಡಿತ್ತು, ಈ ಜಾಗ ದಿಶಾ ಆಪ್ ನಲ್ಲಿ ಗ್ರಾಮ ಠಾಣಾ (ಸೆಟಲ್ಮೆಂಟ್) ಎಂದು ನಮುದಾಗಿರುವುದರಿಂದ ಗ್ರಾಮಸ್ಥರ ಮನವಿ ಮೇರೆಗೆ ಗ್ರಾಪಂನಿಂದ ಅನುಮತಿ ನೀಡಿ ಬಣ್ಣಾರಿ ಅಮ್ಮನ್ ಶುಗರ್ ಲಿಮಿಟೆಡ್ ಕಾರ್ಖಾನೆಯ ಸಿಎಸ್.ಆರ್. ಅನುದಾನದಿಂದ ಹಳ್ಳಕ್ಕೆ ಮಣ್ಣು ಹಾಕಿ ಗುಂಡಿಯನ್ನು ಮುಚ್ಚಿ ಗ್ರಾಮದ ಶಾಲಾ ಮಕ್ಕಳ ಉಪಯೋಗಕ್ಕಾಗಿ ಆಟದ ಮೈದಾನವನ್ನು ನಿರ್ಮಿಸಲಾಗುತ್ತಿದೆ ಎಂದರು.- ಗೀತಾ, ಮಲ್ಲೂಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ.