ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು

| Published : Jan 30 2025, 12:31 AM IST

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ಕುತೂಹಲ ಕೆರಳಿಸಿದ್ದ ಕಿತ್ತೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಬುಧವಾರ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರೆಡು ಕಾಂಗ್ರೆಸ್ ಪಕ್ಷದ ಪಾಲಾಗಿದೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಕುತೂಹಲ ಕೆರಳಿಸಿದ್ದ ಕಿತ್ತೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಬುಧವಾರ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರೆಡು ಕಾಂಗ್ರೆಸ್ ಪಕ್ಷದ ಪಾಲಾಗಿದೆ.

ಪಟ್ಟಣ ಪಂಚಾಯತಿಯ ಸಭಾ ಭವನದಲ್ಲಿ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೈಸಿದ್ದರಾಮ (ಸಿದ್ದು ) ಮಾರಿಹಾಳ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಮೀರಾಬಾನು ಸುತಗಟ್ಟಿ ಆಯ್ಕೆಯಾಗಿ ಗೆಲುವಿನ ನಗೆ ಬೀರಿದರು. ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ‌ ಸಂಭ್ರಮಿಸಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಸರಾಗವಾಗಿ ನಡೆದವು. ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿಗೆ ಒಳಪಟ್ಟಿತ್ತು. ಈ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಜೈಸಿದ್ದರಾಮ (ಸಿದ್ದು) ಮಾರಿಹಾಳ ಹಾಗೂ ಬಿಜೆಪಿಯಿಂದ ನಾಗರಾಜ ಅಸುಂಡಿ ಉಮೇದುವಾರಿಕೆ ಸಲ್ಲಿಸದ್ದರೇ, ಉಪಾಧ್ಯಕ್ಷ ಸ್ಥಾನವೂ ಸಾಮಾನ್ಯ ಮಹಿಳೆ ಮೀಸಲಾತಿಗೆ ಒಳಪಟ್ಟಿದ್ದಿತ್ತು. ಈ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸಮೀರಾಬಾನು ಸುತಗಟ್ಟಿ ಹಾಗೂ ಬಿಜೆಪಿಯಿಂದ ಲಕ್ಷ್ಮೀ ಬಡಿಗೇರ ಉಮೇದುವಾರಿಕೆ ಸಲ್ಲಿಸಿದ್ದರು.ಎರೆಡು ಪಕ್ಷಗಳಲ್ಲಿ ಸಮಬಲವಿರುವ ಕಾರಣ ಎಲ್ಲರ ನಿರೀಕ್ಷೆಯಂತೆ ಚೀಟಿ ಎತ್ತುವ ಮೂಲಕ ಚುನಾವಣೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಮೊದಲು ಕೈ ಎತ್ತುವ ಮೂಲಕ ಮತ ಚಲಾಯಿಸುವಂತೆ ಎಲ್ಲ ಸದಸ್ಯರಿಗೂ ಚುನಾವಣಾಧಿಕಾರಿಗಳು ಸೂಚನೆ ನೀಡಿದರು.

ನಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಾಗಿ ಶಾಸಕ ಬಾಬಾಸಾಹೇಬ ಪಾಟೀಲ ಮತ ಸೇರಿದಂತೆ ಒಟ್ಟು ೧೦ ಮತಗಳು ಚಲಾವಣೆಗೊಂಡವು. ಇದರಂತೆಯೇ ಬಿಜೆಪಿ ಅಭ್ಯರ್ಥಿಗಳ ಪರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ ಸೇರಿದಂತೆ ಒಟ್ಟು ೧೦ ಮತಗಳು ಬಿಜೆಪಿ ಅಭ್ಯರ್ಥಿಗಳ ಪರ ಚಲಾವಣೆಗೊಂಡವು.

ಈ ಪ್ರಕಾರ ಸಮಬಲವಿರುವ ಕಾರಣದಿಂದಾಗಿ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮುಂದಾದರೂ ಇದಕ್ಕೆ ಎಲ್ಲ ಸದಸ್ಯರೂ ಬೆಂಬಲ ಸೂಚಿಸಿದರು.ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿ ಸಲ್ಲಿಸಿದ್ದ ಇಬ್ಬರ ಅಭ್ಯರ್ಥಿಗಳ ಹೆಸರನ್ನು ಬರೆದು ಚೀಟಿ ಎತ್ತುವಂತೆ ಸದಸ್ಯರಿಗೆ ತಿಳಿಸಿದರು. ಯಾರೊಬ್ಬರೂ ಬಂದು ಚೀಟಿ ಎತ್ತದೆ ತಟಸ್ಥ ನೀತಿ ಕಾಯ್ದುಕೊಂಡ ಪರಿಣಾಮ ಈ ಚೀಟಿ ಎತ್ತುವ ಪ್ರಕ್ರಿಯೆಗೆ ಸಂಸದ ಕಾಗೇರಿ ಮುಂದಾಗಿ ಚೀಟಿ ಎತ್ತಿದರು. ನಂತರ ಉಪಾಧ್ಯಕ್ಷ ಸ್ಥಾನಕ್ಕೂ ಇದೇ ಪ್ರಕ್ರಿಯೆ ಮುಂದುವರೆಯಿತು. ಆಗ ೬ನೇ ವಾರ್ಡ್‌ ಸದಸ್ಯೆ ಶಾರದಾ ಜಕ್ಕಣ್ಣಗೌಡರ ಚೀಟಿ ಎತ್ತಿ ಉಪಾಧ್ಯಕ್ಷರ ಆಯ್ಕೆ ಮಾಡಿದರು. ಸೂಕ್ತ ಪೊಲೀಸ್ ಬಂದೂಬಸ್ತ ಒದಗಿಸಲಾಗಿತ್ತು.ಚುನಾವಣಾಧಿಕಾರಿಯಾಗಿ ತಹಸೀಲ್ದಾರ್‌ ರವೀಂದ್ರ ಹಾದಿಮನಿ ಕಾರ್ಯ ನಿರ್ವಹಿಸಿದರು. ಸಿಪಿಐ ಶಿವಾನಂದ ಗುಡುಗನಟ್ಟಿ, ಪಿಎಸೈ ಪ್ರವೀಣ ಗಂಗೋಳ, ಪಪಂ ಮುಖ್ಯಾಧಿಕಾರಿ ಎಂ.ವಿ.ಹಿರೇಮಠ, ಬಾಲರಾಜ ಸಾಣಿಕೊಪ್ಪ ಸೇರಿದಂತೆ ಪಟ್ಟಣ ಪಂಚಾಯತಿಯ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.