ಸಾರಾಂಶ
ಕೆರೂರ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ನಿರ್ಮಲಾ ಮದಿ ಅಧ್ಯಕ್ಷರಾಗಿ, ಕಾಂಗ್ರೆಸ್ನ ಮೋದಿನಸಾಬ ಚಿಕ್ಕೂರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಕನ್ನಡಪ್ರಭವಾರ್ತೆ ಕೆರೂರ
ಕೆರೂರ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ನಿರ್ಮಲಾ ಮದಿ ಅಧ್ಯಕ್ಷರಾಗಿ, ಕಾಂಗ್ರೆಸ್ನ ಮೋದಿನಸಾಬ ಚಿಕ್ಕೂರ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಬಿಜೆಪಿಯಿಂದ ಬಂಡಾಯ ಎದ್ದ ಪ.ಪಂ ಸದಸ್ಯೆ ನಿರ್ಮಲಾ ಮದಿ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರ ಸಹಾಯ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಮೋದಿನಸಾಬ ಚಿಕ್ಕೂರ ಕಾಂಗ್ರೆಸ್ಸಿನವರೆ ಆಗಿದ್ದರಿಂದ ಅವರ ಆಯ್ಕೆ ಸುಲಭವಾಯಿತು.
ಕಾಂಗ್ರೆಸ್ ಅಭ್ಯರ್ಥಿಗೆ ಜೈ ಎಂದ ಸಂಸದರು:ಬಿಜೆಪಿಯಿಂದ ಗೆದ್ದು ಕೊನೆಯ ಹಂತದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಿರ್ಮಲಾ ಮದಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರಿಂದ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಪ್ಪ ಹಡಪದ ಅವರ ಆಯ್ಕೆಗೆ ಕೈ ಎತ್ತಿದರು.
ಆಯ್ಕೆಯ ಪ್ರಕಟಣೆಯನ್ನು ಪ.ಪಂ ಆಡಳಿತಾಧಿಕಾರಿ, ತಹಸೀಲ್ದಾರ್ ಜೆ.ಬಿ.ಮಜ್ಜಗಿ ಪ್ರಕಟಿಸಿದರು. ಈ ವೇಳೆ ಮುಖ್ಯಾಧಿಕಾರಿ ರಮೇಶ ಮಾಡಬಾಳ ಇದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಗುಲಾಲು ಎರಚಿ ಸಂಭ್ರಮಿಸಿದರು. ಸಂಭ್ರಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಜಿ.ಪಂ ಮಾಜಿ ಸದಸ್ಯ ಡಾ.ಎಂ.ಜಿ.ಕಿತ್ತಲಿ, ಪಿ.ಕೆ.ಪಿ.ಎಸ್. ಅಧ್ಯಕ್ಷ ಮಹಾಂತೇಶ ಮೆಣಸಗಿ, ಸುರೇಶ ಪೂಜೇರ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು.ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಭಿನ್ನಾಭಿಪ್ರಾಯದ ಫಲವಾಗಿ ಅಧಿಕಾರ ಪಡೆಯುವಲ್ಲಿ ವಿಫಲವಾಗಿ, ಕಾಂಗ್ರೆಸ್ ಅಧಿಕಾರ ಹಿಡಿಯುವಷ್ಟು ಬಲ ಇಲ್ಲದಿದ್ದರೂ ಶಾಸಕರ ದೂರದೃಷ್ಟಿ ಚಾಣಾಕ್ಷತನದಿಂದ ಕಾಂಗ್ರೆಸ್ ಅಧಿಕಾರ ಪಡೆಯುವಂತಾಯಿತು.
--ಕೋಟ್
ಪಟ್ಟಣದ ಅಭಿವೃದ್ಧಿ ನನ್ನ ಗುರಿಯಾಗಿದ್ದು, ಆ ಕಾರಣದಿಂದ ನನ್ನ ಮೇಲೆ ವಿಶ್ವಾಸವಿಟ್ಟ ಸದಸ್ಯರು ನಾನು ಬೆಂಬಲ ನೀಡಿದ ಬಿಜೆಪಿ ಬಂಡಾಯ ಅಭ್ಯರ್ಥಿ ನಿರ್ಮಲಾ ಮದಿಯವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಮೋದಿನಸಾಬ ಚಿಕ್ಕೂರರಿಗೆ ಅಧಿಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ಸಕಲ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.-ಭೀಮಸೇನ ಚಿಮ್ಮನಕಟ್ಟಿ ಶಾಸಕ.