ಹೂವಿನಹಡಗಲಿ: ಪಟ್ಟಣದಲ್ಲಿರುವ ಪತ್ರಿಕಾ ಭವನ ನವೀಕರಣಕ್ಕಾಗಿ ₹5 ಲಕ್ಷ ಅನುದಾನ ನೀಡುತ್ತೇನೆ ಎಂದು ಶಾಸಕ ಕೃಷ್ಣನಾಯ್ಕ ಭರವಸೆ ನೀಡಿದರು.
ಇಲ್ಲಿನ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜರುಗಿದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಪತ್ರಿಕಾ ಭವನದಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೇ ಪತ್ರಕರ್ತರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ, ₹5 ಲಕ್ಷದಲ್ಲಿ ನವೀಕರಣ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ನಾನು ಧ್ವನಿಯಾಗಿ ಕೆಲಸ ಮಾಡುತ್ತೇನೆಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ಕೇವಲ ಒಂದು ಅಂಗ ಅಷ್ಟೇ ಅಲ್ಲ, ಅದೊಂದು ಅಡಿಪಾಯವಾಗಿದೆ. ಪಾರದರ್ಶಕತೆಯಿಂದ ನಿಸ್ವಾರ್ಥವಾಗಿ ಪತ್ರಕರ್ತರು ಕೆಲಸ ಮಾಡುತ್ತಿರುವುದರಿಂದ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳುವಿಗೆ ಕಾರಣವಾಗಿದೆ. ಪತ್ರಕರ್ತರು ಸತ್ಯ ಸುದ್ದಿಗಳನ್ನು ಬರೆಯುವ ಮೂಲಕ ಆಳುವ ಸರ್ಕಾರ, ಜನಪ್ರತಿನಿಧಿಗಳ ಹಾಗೂ ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ್ ಚಿದಾನಂದ ಮಾತನಾಡಿ, ಪತ್ರಿಕಾ ದಿನಾಚರಣೆ ಕೇವಲ ಪತ್ರಕರ್ತರಿಗೆ ಅಷ್ಟೇ ಅಲ್ಲ, ಇದರಲ್ಲಿ ರೈತರ, ಸಾರ್ವಜನಿಕರ, ಯುವಕರ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿ, ವರ್ಷವಿಡೀ ನಿಮ್ಮ ಕೆಲಸ ಮಾಡುತ್ತಾರೆ. ಆದ್ದದರಿಂದ ತಾವೂ ಇಂತಹ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಬರಬೇಕು ಎಂದು ಹೇಳಿದರು.
ಜಿಬಿಆರ್ ಪದವಿ ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಮಾತನಾಡಿ, ಪತ್ರಿಕೆಗಳು ಪಾರದರ್ಶವಾಗಿ ಕೆಲಸ ಮಾಡುತ್ತಿವೆ. ಸಾಮಾಜಿಕ ಜಾಲತಾಣದ ನಡುವೆ ಮುದ್ರಣ ಮಾಧ್ಯಮ ನೀಡಿದ ಖುಷಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಪತ್ರಿಕಾ ರಂಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ ಕುಗ್ಗಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಓದಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಷ್ಟು ಸಹಕಾರಿಯಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಗವಿಸಿದ್ದೇಶ್ವರ ಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ, ಆರೋಗ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಸುಭಾಶ್ಚಂದ್ರ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಹಳ್ಳಿಗುಡಿ ಅಧ್ಯಕ್ಷತೆ ವಹಿಸಿದ್ದರು.
ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ತಾಪಂ ಇಒ ಜಿ. ಪರಮೇಶ್ವರ, ಜಿಬಿಆರ್ ಕಾಲೇಜು ಪ್ರಾಚಾರ್ಯ ಅಮರೇಗೌಡ ಪಾಟೀಲ್, ವಾರದ ಗೌಸ್ ಮೋಹಿದ್ದೀನ್, ಸಿ.ಕೆ. ನಾಗರಾಜ ಸೇರಿದಂತೆ ಇತರರಿದ್ದರು.ಇದೇ ವೇಳೆ ವೈದ್ಯ ಡಾ. ಎಸ್. ಸುಭಾಶ್ಚಂದ್ರ, ಸಮಾಜ ಕಲ್ಯಾಣಾಧಿಕಾರಿ ಆನಂದ್ ಡೊಳ್ಳಿನ, ಬೀರಪ್ಪ, ಸಜ್ಜಿ ಶರಣಪ್ಪ, ಮೌಲಾಸಾಬ್ ಅವರನ್ನು ಸನ್ಮಾನಿಸಲಾಯಿತು.
ಪಿ. ವೀರಣ್ಣ ಸ್ವಾಗತಿಸಿದರು, ಎಂ.ಪಿ.ಎಂ. ಶಿವಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್. ಚಂದ್ರಪ್ಪ ನಿರೂಪಿಸಿದರು. ಕಾವ್ಯ ಪಾರಿ ಪ್ರಾರ್ಥಿಸಿದರು.