ಉಳುಮೆ ಎತ್ತುಗಳಿಗೂ ಬಂತು ಬಂಗಾರದ ಬೆಲೆ, ಯಂತ್ರೋಪಕರಣವಿದ್ದರೂ ಕಡಿಮೆಯಾಗದ ದರ

| Published : May 22 2025, 11:55 PM IST

ಉಳುಮೆ ಎತ್ತುಗಳಿಗೂ ಬಂತು ಬಂಗಾರದ ಬೆಲೆ, ಯಂತ್ರೋಪಕರಣವಿದ್ದರೂ ಕಡಿಮೆಯಾಗದ ದರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕೃಷಿಯಲ್ಲಿ ಯಾಂತ್ರೀಕರಣ ಪದ್ಧತಿ ಹೆಚ್ಚುತ್ತಿದೆ. ಆದರೂ ಮನೆಯಲ್ಲಿ ಒಂದು ಜೋಡಿ ಎತ್ತುಗಳಾದರೂ ಇರಬೇಕು ಎಂಬ ಸಂಪ್ರದಾಯವನ್ನು ಬಿಟ್ಟಿಲ್ಲ. ಅದಕ್ಕಾಗಿ ಎತ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

ನಾರಾಯಣ ಹೆಗಡೆಹಾವೇರಿ: ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿದ್ದರೂ ಜಿಲ್ಲೆಯ ರೈತರು ಸಾಂಪ್ರದಾಯಿಕ ಎತ್ತುಗಳ ಮೂಲಕ ಉಳುಮೆ ಬಿಟ್ಟಿಲ್ಲ. ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜಾನುವಾರು ಸಂತೆಗಳಲ್ಲಿ ಎತ್ತುಗಳ ಖರೀದಿ ಭರಾಟೆ ಜೋರಾಗಿದ್ದು, ಉತ್ತಮ ತಳಿಯ ಉಳುಮೆ ಎತ್ತುಗಳಿಗೆ ಬಂಗಾರದ ಬೆಲೆ ಬಂದಿದೆ.ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಶುರು ಮಾಡಿದ್ದಾರೆ. ಈ ಸಲ ಮೇ ತಿಂಗಳಲ್ಲೇ ರೈತರು ಹೊಲದತ್ತ ಹೆಜ್ಜೆಯಿಟ್ಟಿದ್ದಾರೆ. ಇನ್ನು ಕೆಲವು ರೈತರು ಬಿತ್ತನೆಗೆ ಹೊಲ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಎತ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ. ಈ ಸಲ ಉತ್ತಮ ಮುಂಗಾರು ನಿರೀಕ್ಷೆಯಲ್ಲಿರುವ ರೈತರು ಮುಂಗಾರು ಹಂಗಾಮಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಖಿಲಾರಿ, ಮೂಡಲ ಎತ್ತುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಇಲ್ಲಿಯ ಎಪಿಎಂಸಿ ಜಾನುವಾರು ಸಂತೆಗೆ ಅಕ್ಕಪಕ್ಕದ ಧಾರವಾಡ, ಗದಗ, ದಾವಣಗೆರೆ, ಬಳ್ಳಾರಿ, ದೂರದ ತೆಲಂಗಾಣ, ಆಂಧ್ರದಿಂದಲೂ ಎತ್ತುಗಳ ಖರೀದಿಗೆ ರೈತರು ಬರುತ್ತಿದ್ದಾರೆ. ಇದರಿಂದ ಮಾರುಕಟ್ಟೆ ಫುಲ್ ರಶ್ ಆಗಿದೆ. ಜಿಲ್ಲೆಯ ರೈತರ ದನಕರುಗಳಿಗೆ ಭರ್ಜರಿ ದರ ಸಿಗುತ್ತಿದೆ. ಅದೇ ರೀತಿ ಎತ್ತುಗಳ ದರವೂ ಹೆಚ್ಚಿದ್ದು, ರೈತರು ಚೌಕಾಶಿ ಮಾಡಿ ಖರೀದಿ ಮಾಡುತ್ತಿದ್ದಾರೆ.ಗಿಜಿಗುಡುವ ಜಾನುವಾರು ಸಂತೆ: ಜಿಲ್ಲೆಯ ರಾಣಿಬೆನ್ನೂರು, ಅಕ್ಕಿಆಲೂರು ಮತ್ತು ಹಾವೇರಿಯಲ್ಲಿ ಪ್ರತಿವಾರ ಜಾನುವಾರು ಸಂತೆ ನಡೆಯುತ್ತದೆ. ಈ ಪೈಕಿ ಹಾವೇರಿ ಸಂತೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಕಳೆದ ಎರಡು ವಾರಗಳಿಂದ ಜಾನುವಾರುಗಳ ಭರ್ಜರಿ ಮಾರಾಟ ನಡೆದಿದೆ. ಎತ್ತು ಖರೀದಿ ಮತ್ತು ಮಾರಾಟ ಮಾಡುವ ರೈತರೆಲ್ಲ ಹಾವೇರಿಯತ್ತ ಬರುತ್ತಿದ್ದಾರೆ. ಇಲ್ಲಿಯ ಹಾನಗಲ್ಲ ರಸ್ತೆಯಲ್ಲಿರುವ ಪ್ರತಿ ಗುರುವಾರ ನಡೆಯುವ ಜಾನುವಾರು ಸಂತೆಗೆ ವಿವಿಧೆಡೆಯಿಂದ ರೈತರು ಆಗಮಿಸಿದ್ದರಿಂದ ಮಾರುಕಟ್ಟೆ ಪ್ರಾಂಗಣ ಗಿಜಿಗುಡುತ್ತಿದೆ. ಮುಂಗಾರು ಕೃಷಿ ಚಟುವಟಿಕೆ ಶುರುವಾಗಿರುವುದರಿಂದ ಎತ್ತುಗಳ ಖರೀದಿಗೆ ರೈತರು ಮುಗಿಬೀಳುತ್ತಿದ್ದಾರೆ. ಖಿಲಾರಿ ತಳಿಯ ಜೋಡಿ ಎತ್ತಿಗೆ ಕಡಿಮೆಯೆಂದರೂ ಒಂದು ಲಕ್ಷ ರು.ಗೆ ಮಾರಾಟವಾಗುತ್ತಿದೆ. ನೋಡಲು ಆಕರ್ಷಕವಾಗಿರುವ, ನಾಲ್ಕು ಹಲ್ಲಿನ ಜೋಡಿಗೆ ₹1.50 ಲಕ್ಷ, ₹1.75 ಲಕ್ಷದವರೆಗೂ ಕೊಟ್ಟು ರೈತರು ಖರೀದಿ ಮಾಡುತ್ತಿದ್ದಾರೆ. ಅನೇಕ ರೈತರು ದುಬಾರಿ ದರ ನೋಡಿ ವಾಪಸ್‌ ಹೋಗುತ್ತಿದ್ದಾರೆ. ಯತ್ರಗಳ ಬಾಡಿಗೆ ದುಬಾರಿ: ಜಿಲ್ಲೆಯಲ್ಲಿ ಕೃಷಿಯಲ್ಲಿ ಯಾಂತ್ರೀಕರಣ ಪದ್ಧತಿ ಹೆಚ್ಚುತ್ತಿದೆ. ಆದರೂ ಮನೆಯಲ್ಲಿ ಒಂದು ಜೋಡಿ ಎತ್ತುಗಳಾದರೂ ಇರಬೇಕು ಎಂಬ ಸಂಪ್ರದಾಯವನ್ನು ಬಿಟ್ಟಿಲ್ಲ. ಅದಕ್ಕಾಗಿ ಎತ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಅಲ್ಲದೇ ಯಂತ್ರೋಪಕರಣಗಳ ಬಾಡಿಗೆ ದರ ದುಬಾರಿಯಾಗಿರುವುದರಿಂದ ಬಡ, ಸಣ್ಣ ಹಿಡುವಳಿದಾರರು ಎತ್ತುಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ದುಬಾರಿ ಬಾಡಿಗೆ ಕೊಟ್ಟು ಯಂತ್ರಗಳ ಮೂಲಕ ಉಳುಮೆ ಮಾಡುವುದಕ್ಕಿಂತ ಎತ್ತುಗಳನ್ನು ಖರೀದಿಸುವುದೇ ವಾಸಿ ಎಂಬ ಅಭಿಪ್ರಾಯಕ್ಕೆ ಬರುತ್ತಿದ್ದಾರೆ.

ಡೀಸೆಲ್, ಪೆಟ್ರೋಲ್ ದರ ಹೆಚ್ಚಿರುವುದರಿಂದ ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ ದುಪ್ಪಟ್ಟಾಗಿದೆ. ಇದೇ ವೇಳೆ ರಸಗೊಬ್ಬರ, ಬಿತ್ತನೆ ಬೀಜದ ದರವೂ ಹೆಚ್ಚಿರುವುದರಿಂದ ರೈತರು ಎತ್ತುಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಇಲ್ಲಿಯ ಎಪಿಎಂಸಿ ಜಾನುವಾರು ಸಂತೆಯಲ್ಲಿ ಜನಜಾತ್ರೆಯೇ ಕಂಡುಬರುತ್ತಿದೆ.ಬಂಗಾರದ ಬೆಲೆ: ಸುತ್ತಮುತ್ತಲಿನ ಜಿಲ್ಲೆಗಳಿಂದ ಇಲ್ಲಿಗೆ ಎತ್ತುಗಳ ಖರೀದಿಗೆ ಬರುತ್ತಿರುವುದರಿಂದ ಬೇಡಿಕೆ ಹೆಚ್ಚಿದ್ದು, ಎತ್ತು ಮಾರಾಟ ಮಾಡುವ ರೈತರಿಗೆ ಉತ್ತಮ ದರ ಸಿಗುತ್ತಿದೆ. ಇದರಿಂದ ವಾರದಿಂದ ವಾರಕ್ಕೆ ಜಾನುವಾರು ಮಾರುಕಟ್ಟೆಗೆ ಬರುವ ರೈತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಎತ್ತರ, ವಯಸ್ಸು, ಮೈಮಾಟ, ತಳಿ, ಉಳುಮೆ ಗೊತ್ತಿರುವ ಎತ್ತುಗಳನ್ನು ಖರೀದಿಸುತ್ತಿದ್ದಾರೆ. ಇದರೊಂದಿಗೆ ಎಮ್ಮೆ, ಆಕಳು, ಕರುಗಳ ಖರೀದಿಯೂ ಜೋರಾಗಿಯೇ ನಡೆದಿದೆ.ಹಾವೇರಿ ಜಾನುವಾರು ಮಾರುಕಟ್ಟೆ ಹಿಂದಿನಿಂದಲೂ ಉತ್ತಮ ಹೆಸರು ಗಳಿಸಿಕೊಂಡಿದೆ. ಇಲ್ಲಿ ಉತ್ತಮ ತಳಿಯ ದನಕರುಗಳು ಸಿಗುತ್ತವೆ. ಅದಕ್ಕಿಂತ ಮುಖ್ಯವಾಗಿ ವ್ಯಾಪಾರದಲ್ಲಿ ಪ್ರಾಮಾಣಿಕತೆಯಿರುತ್ತದೆ. ಅದಕ್ಕಾಗಿ ಖರೀದಿ ಮತ್ತು ಮಾರಾಟಕ್ಕೆ ದೂರದ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಶಿರಸಿ ಕಡೆಯಿಂದ ಎಮ್ಮೆ, ಆಕಳು ಖರೀದಿಗೆ ಬರುವವರ ಸಂಖ್ಯೆಯೂ ಸಾಕಷ್ಟಿದೆ.

ದರ ಏರಿಕೆ: ಹಾವೇರಿ ದನದ ಸಂತೆಗೆ ಎರಡು ವಾರಗಳಿಂದ ಬರುತ್ತಿದ್ದೇನೆ. ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಎತ್ತುಗಳನ್ನು ಖರೀದಿಸಬೇಕಿದೆ. ಕೃಷಿ ಯಂತ್ರಗಳ ಬಾಡಿಗೆ ದರ ಹೆಚ್ಚಾಗಿದೆ. ಅದಕ್ಕಾಗಿ ಉತ್ತಮ ಖಿಲಾರಿ ತಳಿಯ ಎತ್ತುಗಳನ್ನು ಖರೀದಿಸಲು ಬಂದಿದ್ದೇನೆ. ಆದರೆ ಎತ್ತುಗಳ ದರ ಭಾರೀ ಹೆಚ್ಚಿದೆ ಎಂದು ರೈತ ಪರಮೇಶ್ವರಪ್ಪ ದಾಸಣ್ಣನವರ ತಿಳಿಸಿದರು.