ಶತಕ ದಾಟಿದ ಟೊಮೆಟೊ ಬೆಲೆ

| Published : Jul 17 2024, 12:52 AM IST

ಸಾರಾಂಶ

ಬೆಳಗಾವಿಯ ಮಾರುಕಟ್ಟೆಯಲ್ಲಿ ಟೊಮೆಟೋ ದರ ಗಗನಕ್ಕೇರಿದ್ದು, ಮಂಗಳವಾರ ಕೆಜಿಗೆ ಗರಿಷ್ಠ ₹120ರವರೆಗೆ ಮಾರಾಟವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯ ಮಾರುಕಟ್ಟೆಯಲ್ಲಿ ಟೊಮೆಟೋ ದರ ಗಗನಕ್ಕೇರಿದ್ದು, ಮಂಗಳವಾರ ಕೆಜಿಗೆ ಗರಿಷ್ಠ ₹120ರವರೆಗೆ ಮಾರಾಟವಾಗಿದೆ. ಎರಡು ವಾರಗಳ ಹಿಂದಷ್ಟೇ ಜಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಟೊಮೆಟೋ ₹40-50ಕ್ಕೆ ಸಿಗುತ್ತಿತ್ತು. ಆದರೆ, ಮಹಾರಾಷ್ಟ್ರದ ಗಡಿಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಎರಡೇ ದಿನಗಳಲ್ಲಿ ದರ ದುಪ್ಪಾಟ್ಟಾಗಿದೆ.ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ತರಕಾರಿ ತುಟ್ಟಿಯಾಗಿರುವುದು ಕೂಡ ಗಾಯದ ಮೇಲೆ ಬರೆ ಎಳೆದಂತಾಗಿದೆ. ತರಕಾರಿ ಆವಕ ಕಡಿಮೆಯಾದ ಕಾರಣ ಬೇಡಿಕೆ ಜತೆ ಬೆಲೆ ಕೂಡ ಏರಿಕೆಯಾಗಿದೆ. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದು ಹಾಗೂ ರೋಗಬಾಧೆ ಮುಂತಾದ ಕಾರಣದಿಂದ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವರ್ತಕರು ಹೇಳುತ್ತಾರೆ.

ಬದನೆ, ಬೀನ್ಸ್‌, ಚವಳೆಕಾಯಿ ಬಳಿಕ ಇದೀಗ ಕೆಂಪು ಸುಂದರಿ ಟೊಮೆಟೋ ಬೆಲೆ ಏಕಾಏಕಿ ಏರಿಕೆಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಬೆಳಗಾವಿ ನಗರ ರವಿವಾರ ಪೇಟೆ. ಕಾಂದಾ ಮಾರ್ಕೆಟ್‌, ಖಡೇಬಜಾರ್‌ ಸೇರಿದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ ದರ ಕೆಜಿಗೆ ₹ 40ರವರೆಗೆ ಇತ್ತು. ಆದರೆ ಈಗ ₹ 100ರ ಗಡಿ ದಾಟಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಬೆಳಗಾವಿ ಮಾರುಕಟ್ಟೆ ಟೊಮೆಟೋಗೆ ಹೆಚ್ಚಾಗಿ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದೆ. ಆದರೆ, ಎರಡು ವಾರಗಳಿಂದ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಸತಾರಾ, ಮಿರಜ್‌, ಸಾಂಗ್ಲಿ ಮತ್ತಿತರ ಭಾಗಳಿಂದ ಬರುತ್ತಿದ್ದ ಟೊಮೆಟೋ ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

ತರಕಾರಿ ಬೆಲೆಯಲ್ಲಿಯೂ ಏರಿಕೆ:

ಟೊಮೆಟೋ ಅಷ್ಟೇ ಅಲ್ಲದೆ ಬಹುತೇಕ ತರಕಾರಿ ದರ ದುಪ್ಪಟ್ಟಾಗಿದೆ. ಬೀನ್ಸ್‌ ಕೆ.ಜಿಗೆ ₹90, ಹಸಿ ಮೆಣಸಿನಕಾಯಿ ಕೆಜಿಗೆ ₹ 80, ವಟಾಣಿ ₹120, ಬೆಂಡೆಕಾಯಿ ₹70 , ಬದನೆಕಾಯಿ ₹ 120ರವರೆಗೆ ಪ್ರತಿ ಕೆ.ಜಿ ಮಾರಾಟವಾಗುತ್ತಿದೆ. ಆಲೂಗಡ್ಡೆ ಹಾಗೂ ಈರುಳ್ಳಿ ಕೆಜಿಗೆ ₹ 50 ದರ ಇದೆ ಎಂದು ವ್ಯಾಪಾರಸ್ಥರು ತಿಳಿಸಿದರು.