ಕುಮಟಾ: ತಲೆತಲಾಂತರಗಳಿಂದ ಗೋವಿನ ಮಹತ್ವವನ್ನು ಆಚಾರ-ವಿಚಾರದಲ್ಲಿ, ಸಂಸ್ಕೃತಿ-ಸಂಸ್ಕಾರದಲ್ಲಿ ಬಿತ್ತರಿಸುತ್ತಾ ವೇದ ಮತ್ತು ಧರ್ಮವನ್ನು ಉಳಿಸಿಕೊಂಡು ಬಂದವರು ನಮ್ಮ ವೈದಿಕರು ಎಂದು ಅಮೃತಧಾರಾ ಗೋಬ್ಯಾಂಕಿನ ಅಧ್ಯಕ್ಷ ಮುರಲೀಧರ ಪ್ರಭು ಹೇಳಿದರು.
ಹೊಸಾಡಿನ ಅಮೃತಧಾರಾ ಗೋಬ್ಯಾಂಕ್‌ನಲ್ಲಿ ಗುರುವಾರ ಪ್ರಾರಂಭವಾದ ಆಲೆಮನೆ ಹಬ್ಬದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವೇದಮಂತ್ರಗಳ ನಾದದಲ್ಲಿ ಗೋಮಾತೆಯ ಗೌರವವನ್ನು ಹೊತ್ತೊಯ್ಯುತ್ತಾ, ಯಜ್ಞ-ಯಾಗಗಳ ಪವಿತ್ರ ಜ್ವಾಲೆಯಲ್ಲಿ ಗವ್ಯೋತ್ಪನ್ನಗಳ ಮಹಿಮೆಯನ್ನು ಸ್ಥಾಪಿಸುತ್ತಾ, ಮನೆಮನೆಗಳಲ್ಲಿ ಧರ್ಮದ ದೀಪ ಅವರು ಬೆಳಗಿಸಿದವರು ವೈದಿಕರು. ಈ ಬಾರಿ ಆಲೆಮನೆ ಹಬ್ಬಕ್ಕೆ ವೈದಿಕರಿಂದಲೇ ಚಾಲನೆ ನೀಡಲಾಗಿದ್ದು, ವೈದಿಕರ ಸಮಾವೇಶವನ್ನೂ ಆಯೋಜಿಸಲಾಗಿದೆ ಎಂದರು.ವೈದಿಕರ ಸಮಾವೇಶದಲ್ಲಿ ಹಿರಿಯ ವೇದಜ್ಞ ಸುಬ್ರಹ್ಮಣ್ಯ ಶರ್ಮಾ ಚಿತ್ರಿಗೇಮಠ ಹಾಗೂ ಇತರ ವೈದಿಕರನ್ನು ಗೌರವಿಸಲಾಯಿತು. ಬಳಿಕ ವೇ. ಪರಮೇಶ್ವರ ಮಾರ್ಕಾಂಡೆ ಗೋಕರ್ಣ ಮಾತನಾಡಿ, ಮನುಷ್ಯರ ದಿನಚರಿ ಗೋವಿಲ್ಲದೇ ನಡೆಯದು. ಅಗ್ನಿ ಉಪಾಸನೆಗೂ ಗವ್ಯೋತ್ಪನ್ನ ಅಗತ್ಯ. ಪಂಚಗವ್ಯವು ಶರೀರ ಶುದ್ಧಿಯಷ್ಟೇ ಅಲ್ಲ, ಆತ್ಮಶುದ್ಧಿಗೂ ಸಹಾಯಕ. ಪ್ರತಿ ಮನೆಗಳಲ್ಲಿ ಗೋ ಸಾಕುವುದು ಕಷ್ಟವಾದ ಸಂದರ್ಭದಲ್ಲಿ ಗೋಶಾಲೆಗಳು ಅವಶ್ಯ ಎಂದರು.
ವೇ. ವಿಘ್ನೇಶ್ವರ ಭಟ್ಟ ಕತಗಾಲ ಮಾತನಾಡಿ, ವೇದಘೋಷದಿಂದ ವಾತಾವರಣ ಶುದ್ಧವಾಗುತ್ತದೆ. ಮೂವತ್ತ್ಮೂರು ಕೋಟಿ ದೇವತೆಗಳ ಆವಾಸ ಎಂದು ನಂಬಿ ಗೋವನ್ನು ಆರಾಧಿಸುತ್ತಿದ್ದೇವೆ. ಕೃಚ್ಛ್ರಾಚರಣೆ ವೇಳೆ ಗೋದಾನ ಮಾಡಿ ಅದರ ಮೌಲ್ಯವನ್ನು ಗೋಶಾಲೆಗೆ ನೀಡುವ ಪದ್ಧತಿ ಬಲಪಡಿಸಬೇಕು ಎಂದರು.ವೇ. ಶ್ರೀಪಾದ ಭಟ್ಟ ಮಾತನಾಡಿ, ಗೋವಿಗೂ ವೈದಿಕರಿಗೂ ಬಿಡಿಸಲಾರದ ನಂಟು. ಯಜ್ಞದ ಹವಿಸ್ಸಿಗೆ ಗವ್ಯೋತ್ಪನ್ನಗಳು ಅಗತ್ಯ. ದಾನಗಳಲ್ಲಿ ಶ್ರೇಷ್ಠವಾದುದು ಗೋದಾನ. ಕೃತಕ ಗರ್ಭಧಾರಣೆ ಕ್ರಮಗಳಿಂದ ದೇಶಿ ಗೋಸಂಕುಲಕ್ಕೆ ಅಪಾಯದ ಆತಂಕವಿದೆ ಎಂದರು.
ನಿವೃತ್ತ ಇಸ್ರೋ ವಿಜ್ಞಾನಿ ಪಿ.ಜೆ. ಭಟ್ಟ, ರಾಘವೇಶ್ವರ ಶ್ರೀಗಳ ಪ್ರೇರಣೆಯಿಂದ ಗೋಶಾಲೆಗಳ ಕಾರ್ಯದಲ್ಲಿ ಆಸಕ್ತಿ ಬೆಳೆಯಿತು. ಇಲ್ಲಿನ ಗೋಬ್ಯಾಂಕ್‌ನಲ್ಲಿ ಗೋವುಗಳ ಸಂರಕ್ಷಣೆ ಮನತಟ್ಟಿದೆ. ದೇಶಿ ಗೋ ರಕ್ಷಣೆಗೆ ಎಲ್ಲರೂ ಕೈಜೋಡಿಸೋಣ ಎಂದರು.
ವೇದಘೋಷದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಕಾಮಧೇನು ಮಂದಿರದಲ್ಲಿ ಕಾಮಧೇನು ಹವನ ಹಾಗೂ ಪೂಜೆ ಸಮರ್ಪಿಸಲಾಯಿತು. ಸಂಚಾಲಕ ರಾಜಾರಾಮ ಭಟ್ಟ ನೇತೃತ್ವದಲ್ಲಿ ವೇ. ವಿನಾಯಕ ಭಟ್ಟ ಕೋಣಾರೆ ಪೂಜಾ ಕೈಂಕರ್ಯ ನೆರವೇರಿಸಿದರು. ಜಿ.ಎಸ್. ಹೆಗಡೆ, ಸುಬ್ರಾಯ ಹೆಗಡೆ ಕೋಣಾರೆ ಇತರರು ಇದ್ದರು.
ವೈದಿಕ ಸಮಾವೇಶದಲ್ಲಿ ಸಂಚಾಲಕ ಅರುಣ ಹೆಗಡೆ ಪರಿಚಯಿಸಿ ಸ್ವಾಗತಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊಸಾಡಿನ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳ ನೃತ್ಯ ಗಮನ ಸೆಳೆಯಿತು. ಸನ್ನಿಧಿ ಹಾಗೂ ತಂಡದ ಕೂಚಿಪುಡಿ ನೃತ್ಯ ರಂಜಿಸಿತು. ಬ್ರಹ್ಮೂರಿನ ಕಲಾಬಳಗದಿಂದ ''ಪುಣ್ಯಕೋಟಿ'' ಕಥೆಯಾಧಾರಿತ ತಾಳಮದ್ದಲೆ ಪ್ರಸಂಗದ ಪುಸ್ತಕ ಬಿಡುಗಡೆ ಹಾಗೂ ತಾಳಮದ್ದಲೆ ನಡೆಯಿತು.