ಶಿಕ್ಷಕರು ಸಂಘಟಿತರಾದಲ್ಲಿ ಸಮಸ್ಯೆಗೆ ಪರಿಹಾರ ಸಾಧ್ಯ: ಬಸವರಾಜ ಹೊರಟ್ಟಿ

| Published : Feb 01 2024, 02:01 AM IST

ಶಿಕ್ಷಕರು ಸಂಘಟಿತರಾದಲ್ಲಿ ಸಮಸ್ಯೆಗೆ ಪರಿಹಾರ ಸಾಧ್ಯ: ಬಸವರಾಜ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರು ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಜಿಲ್ಲಾ ಮಟ್ಟದ ಪ್ರೌಢಶಾಲಾ ಸಹ-ಶಿಕ್ಷಕರ ಶೈಕ್ಷಣಿಕ ಸಮ್ಮೇಳನ, ಸರ್ವೋದಯ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಹಾವೇರಿ

ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರು ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಂಘಟಿತರಾದಲ್ಲಿ ಮಾತ್ರ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ-ಶಿಕ್ಷಕರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಸಹ-ಶಿಕ್ಷಕರ ಶೈಕ್ಷಣಿಕ ಸಮ್ಮೇಳನ, ಸರ್ವೋದಯ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯಾರೇ ಆಗಲಿ ತಮ್ಮ ಹಕ್ಕುಗಳನ್ನು ಕೇಳುವಾಗ ಒಬ್ಬಂಟಿಯಾಗಿ ಹೋದರೆ ಜಯ ಸಿಗುವುದಿಲ್ಲ. ಸಂಘಟಿತರಾಗಿ ಸಂಘಟನೆ ಮೂಲಕವಾಗಿ ತಮ್ಮ ಹಕ್ಕುಗಳನ್ನು ನ್ಯಾಯಯುತವಾಗಿ ಕೇಳಿದಾಗ ಜಯ ಸಿಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ ಮಾತನಾಡಿ, ಸಹ ಶಿಕ್ಷಕರಿಗೆ ಇಲಾಖೆಯಿಂದ ಸಿಗಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಕೊಡಿಸುವ ಮತ್ತು ಅವರ ಬೋಧನಾ ಶೈಲಿಯಲ್ಲಿ ಉತ್ಸಾಹ ತುಂಬುವ ಜವಾಬ್ದಾರಿ ನಮ್ಮ ಸಂಘಟನೆ ಮೇಲಿದೆ. ಏಳನೇ ವೇತನ ಆಯೋಗದ ಜಾರಿ ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಮರುಜಾರಿ, ಪದವಿ ಪೂರ್ವ ಕಾಲೇಜಿಗೆ ಬಡ್ತಿ ನೀಡುವುದು, ಹೊಸ ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಮುಖ್ಯೋಪಾಧ್ಯಾಯರ ಹುದ್ದೆ ಮಂಜೂರು ಮಾಡುವುದು ಇನ್ನೂ ಮುಂತಾದ ಅನೇಕ ಬೇಡಿಕೆಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಶಾಲೆ ಎಂಬ 4 ಗೋಡೆಗಳ ಮಧ್ಯದಲ್ಲಿ ದೇಶದ ಭವಿಷ್ಯವನ್ನು ನಿರ್ಮಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದು, ಅವರ ಸೇವೆ ಸದಾ ಸ್ಮರಣೀಯ. ವಿಶೇಷವಾಗಿ ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಈ ಕಾರ್ಯಾಗಾರ ಆಯೋಜಿಸಿದ್ದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಧಾರವಾಡದ ಹಿರೇಮಲ್ಲೂರು ಈಶ್ವರನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡ್ಕರ ಉಪನ್ಯಾಸ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹಾಗೂ ಡಾ. ಶಂಭು ಬಳಿಗಾರ ಅವರನ್ನು ಸನ್ಮಾನಿಸಲಾಯಿತು. ಬಡ್ತಿ ಮುಖ್ಯೋಪಾಧ್ಯಯರನ್ನು, ಸಂಘಟನೆಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಿಡಿಪಿಐ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಜಿಲ್ಲೆಯ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೌನೇಶ ಬಡಿಗೇರ, ಎಂ.ಎಚ್. ಪಾಟೀಲ, ಶ್ರೀಧರ, ಎಸ್.ಜಿ. ಕೋಟಿ, ಎಂ.ಎಫ್. ಬಾರ್ಕಿ, ನಿರಂಜನ ಮೂರ್ತಿ, ವಿಷಯ ಪರೀವಿಕ್ಷಕರು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ., ಗೌರವಾಧ್ಯಕ್ಷ ಎಚ್.ಕೆ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಉಪಾಧ್ಯಕ್ಷ ಮಲ್ಲನಗೌಡ ಬಿರಾದಾರ, ಸಹಕಾರ್ಯದರ್ಶಿ ದೇವರಾಜೆಗೌಡ, ಸಂಘಟನಾ ಕಾರ್ಯದರ್ಶಿ ತುಕಾರಾಮ ಬಾಗೆನ್ನೆವರ, ಖಜಾಂಚಿ ಧನಸಿಂಗ ರಾಠೋಡ, ರಾಜ್ಯ ಉಪಾಧ್ಯಕ್ಷ ಸುರೇಶ ಕಲ್ಮನಿ, ಜಿಲ್ಲಾ ಕಾರ್ಯದರ್ಶಿ ರಾಕೇಶ ಜಿಗಳಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಚ್.ಪಿ. ಬಣಕಾರ, ಕಾರ್ಯದರ್ಶಿ ಎನ್.ಎನ್. ಕುಂದೂರು, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಬಿ.ಎಸ್. ಚಳ್ಳಾಳ ಇತರರು ಇದ್ದರು.

ಎ.ಬಿ. ಗುಡ್ಡಳ್ಳಿ ಪ್ರಾರ್ಥಿಸಿದರು. ಬಸವರಾಜ ಜವಾಯಿ ಹಾಗೂ ಗೀತಾ ಸುತ್ತಕೋಟಿ, ಶಂಕರ ಹರ‍್ನಳ್ಳಿ ನಿರೂಪಿದರು. ಎಸ್.ಸಿ. ಕಲ್ಮನಿ ಸ್ವಾಗತಿಸಿದರು. ಮಲ್ಲಯ್ಯ ಹಿರೇಮಠ ವಂದಿಸಿದರು.

ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಮಹಾತ್ಮಾ ಗಾಂಧಿಜೀಯವರ ಭಾವಚಿತ್ರ ಮೆರವಣಿಗೆ ವಿವಿಧ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಜರುಗಿತು.