ಸಾರಾಂಶ
ನರಗುಂದ: ರಾಜ್ಯದಲ್ಲಿನ ರೈತ ಸಂಘಟನೆಗಳ ನಾಯಕರ ಒಡಕುಗಳಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರ ಶಾಂತಕುಮಾರ ಹೇಳಿದರು.
ಅವರು ಶುಕ್ರವಾರ ರಾಜ್ಯ ರೈತ ಸಮಾವೇಶದ ನಿಮಿತ್ತ ಪಟ್ಟಣದ ವೀರ ಬಾಬಾ ಸಾಹೇಬ್ ಹಾಗೂ ದಿ.ವಿರಪ್ಪ ಕಡ್ಲಿಕೊಪ್ಪ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಟನೆಗಳಲ್ಲಿನ ಒಡಕಿನಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲು ಕಷ್ಟವಾಗಿದೆ. ರಾಜಕೀಯ ಪಕ್ಷಗಳ ಬಾಲಂಗೋಚಿಯಂತೆ ಕೆಲವು ಸಂಘಟನೆ ಕಾರ್ಯ ನಿರ್ವಹಿಸುತ್ತಿವೆ.ಎಲ್ಲ ರಾಜಕೀಯ ಪಕ್ಷಗಳು ರೈತರ ಸಮಸ್ಯೆ ರಾಜಕೀಯ ದಾಳಕ್ಕೆ ಬಳಸಿಕೊಳ್ಳುತ್ತಿವೆ. ಬಂಡವಾಳ ಶಾಹಿಗಳ ಹಿತರಕ್ಷಣೆಗಾಗಿ ಕಾನೂನು ಜಾರಿಯಾಗುತ್ತಿವೆ ಇದರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ. ರೈತರ ಸಾಮೂಹಿಕ ಸಮಸ್ಯೆಗಳ ಬಗ್ಗೆ ಒಂದಾಗಿ ಹೋರಾಟ ಮಾಡಲು ಒಕ್ಕೂಟ ರಚಿಸಿದ್ದೇವೆ ಯಾರು ಬೇಕಾದರೂ ಜತೆ ಸೇರಿ ಹೋರಾಟ ನಡೆಸಬಹುದು ಎಂದರು.ಕಳಸ ಬಂಡೂರಿ ಯೋಜನೆ ತಕ್ಷಣವೇ ಕಾರ್ಯಗತವಾಗಬೇಕು. ರಾಜಕೀಯ ನಾಟಕ ಬೇಡ, ರೈತರ ಸಾಲಕ್ಕಾಗಿ ಕೃಷಿ ಭೂಮಿ ವಶ ಪಡಿಸಿಕೊಳ್ಳುವ ಸಪ್ರೈಸಿ ಕಾಯ್ದೆ ರದ್ದುಗೊಳ್ಳಲಿ, ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆ, ಎಫ್‌ಆರ್‌ಪಿ ಹೆಚ್ಚುವರಿ ದರ ನಿಗದಿಯಾಗಬೇಕು, ಮಹದಾಯಿ, ಕೃಷ್ಣಾ, ಭದ್ರಾ, ಕಾವೇರಿ ಸೇರಿದಂತೆ ಇತರ ಯೋಜನೆಗಳಿಗೆ ಮುಂದಿನದಲ್ಲಿ ಹೋರಾಟ ಮಾಡಲಾಗುವದು ಎಂದರು.
ಸಮಾವೇಶದಲ್ಲಿ ಕರ್ನಾಟಕ ರೈತ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋರಾಟ ಹತ್ತಿಕುವ ಸಂಚು ಮಾಡಿದರೆ ತಕ್ಕಪಾಠ ಕಲಿಸುತ್ತೇವೆ. ಮಹದಾಯಿ ಸಮಸ್ಯೆ ರಾಜಕೀಯವಾಗಿ ಬಳಸಿಕೊಳಲು ಯತ್ನಿಸಿದರೆ ನಾವು ಸುಮ್ಮನಿರಲ್ಲ. ರೈತರ ಸ್ಮಾರಕ ನಿರ್ಮಾಣಕ್ಕೆ ಜಮೀನು ನೀಡದಿದ್ದರೆ ಒಂದು ತಿಂಗಳ ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ತಮಿಳುನಾಡು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ಆರ್. ಪಾಂಡ್ಯನ ಮಾತನಾಡಿ, ಕೆಂದ್ರ ಸರ್ಕಾರ ಬಂಡವಾಳಶಾಹಿಗಳ ಹಿಡಿತದಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ರೈತ ಹೋರಾಟದಲ್ಲಿ ಮಡಿದ ರೈತರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ನಮನ ಸಲ್ಲಿಸಿದರು.ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಹಸಿರು ಸೇನೆ ರಾಜ್ಯಾಧ್ಯಕ್ಷ ಕರಬಸಪ್ಪ, ಸುಧಾ, ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಸುರೇಶ ಪಾಟೀಲ, ಸುದಾದರ್ಮಲಿಂಗಂ, ಮಹೇಶ ಬೆಳಗಾಂವಕರ, ರಾಯನಗೌಡ್ರ, ಪರಶುರಾಮ ಎತ್ತಿನಗುಡ, ಶಿವಪ್ಪ ಹೊರಕೇರಿ, ಮಲ್ಲಣ್ಣ ಅಲೇಕಾರ, ವೀರಬಸಪ್ಪ ಹೂಗಾರ, ಸಿ.ಎಸ್. ಪಾಟೀಲ, ಎಸ್.ಬಿ. ಜೋಗಣ್ಣವರ, ಪರಶುರಾಮ ಜಂಬಗಿ, ಲೀಲಕ್ಕ ಹಸಬಿ, ಹನಮಂತ ಮಡಿವಾಳರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.