ನದಿಪಾತ್ರಗಳಲ್ಲೂ ಕುಡಿವ ನೀರಿನ ಸಮಸ್ಯೆ ಉಲ್ಬಣ

| Published : May 10 2024, 01:31 AM IST / Updated: May 10 2024, 03:21 PM IST

ಸಾರಾಂಶ

ಸದ್ಯ ಭದ್ರಾ ಡ್ಯಾಂನಲ್ಲಿ ಕೇವಲ ೮ ಟಿಎಂಸಿ ಅಡಿ ನೀರು ಮಾತ್ರ ಇದೆ. ಅಲ್ಲಿಂದ ಸಿಂಗಟಾಲೂರು ಬ್ಯಾರೇಜ್‌ಗೆ ನೀರು ಹರಿಸುವಂತೆ ಕೋರಲಾಗಿದೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದರಿಂದ ಚುನಾವಣೆ ಸಂದರ್ಭದಲ್ಲೂ ಸಾಕಷ್ಟು ಒತ್ತಡ ಹೇರಿದ್ದೆವು.

ಗದಗ:  ನದಿ ಪಾತ್ರಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಕಾರಣ ತುರ್ತಾಗಿ ಕ್ಯಾಬಿನೆಟ್ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ಗೆ ಗುರುವಾರ ಭೇಟಿ ನೀಡಿದ ಅವರು, ಬ್ಯಾರೇಜ್‌ನಲ್ಲಿರುವ ನೀರಿನ ಲಭ್ಯತೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಸದ್ಯ ಭದ್ರಾ ಡ್ಯಾಂನಲ್ಲಿ ಕೇವಲ ೮ ಟಿಎಂಸಿ ಅಡಿ ನೀರು ಮಾತ್ರ ಇದೆ. ಅಲ್ಲಿಂದ ಸಿಂಗಟಾಲೂರು ಬ್ಯಾರೇಜ್‌ಗೆ ನೀರು ಹರಿಸುವಂತೆ ಕೋರಲಾಗಿದೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದರಿಂದ ಚುನಾವಣೆ ಸಂದರ್ಭದಲ್ಲೂ ಸಾಕಷ್ಟು ಒತ್ತಡ ಹೇರಿದ್ದೆವು. ಆದರೆ, ಆ ಸಮಯದಲ್ಲಿ ೦.೪ ಟಿಎಂಸಿ ಅಡಿ ನೀರು ಮಾತ್ರ ಹರಿದು ಬಂದಿತ್ತು ಎಂದು ತಿಳಿಸಿದರು.

ಪ್ರಸ್ತುತ ಹಮ್ಮಿಗಿ ಬ್ಯಾರೇಜ್‌ನಲ್ಲಿ ನೀರಿನ ಲಭ್ಯತೆ ಪ್ರಮಾಣ ತುಂಬ ಕಡಿಮೆ ಇದೆ. ಕುಡಿಯುವ ನೀರಿಗಾಗಿ ಡೆಡ್ ಸ್ಟೋರೇಜ್ ಬಳಸಲಾಗುತ್ತಿದೆ. ನಾಲ್ಕು ಇಂಚಿನ ೧೩ ಪಂಪ್‌ಗಳು ಸತತವಾಗಿ ಡೆಡ್ ಸ್ಟೋರೇಜ್‌ನಿಂದ ಅವಳಿ ನಗರಕ್ಕೆ ನೀರು ಪೂರೈಸುವ ಲಿಫ್ಟಿಂಗ್ ಪಾಯಿಂಟ್‌ಗೆ ಕಳಿಸುತ್ತಿವೆ. ಹೂಳು ತೆಗೆಸಿ ಕಾಲುವೆ ಮೂಲಕ ಡೆಡ್ ಸ್ಟೋರೇಜ್ ಕೊನೆ ವರೆಗೂ ನೀರು ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಹಮ್ಮಿಗಿ ಬ್ಯಾರೇಜ್‌ನಲ್ಲಿರುವ ನೀರು ಮುಂದಿನ ೪ರಿಂದ ೮ ದಿನಗಳ ವರೆಗೆ ಬರಬಹುದು. ಬಳಿಕ ಮಳೆ ಆಗದಿದ್ದರೆ ನೀರಿನ ಕೊರತೆ ಉಂಟಾಗಲಿದೆ. ನೀರು ಅತ್ಯಮೂಲ್ಯವಾಗಿದ್ದು, ಯಾರೂ ನೀರನ್ನು ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಮಳೆಯಾದರೆ ನೀರಿಗೆ ಸಮಸ್ಯೆ ಆಗಲಾರದು. ಕೆಟ್ಟು ಹೋಗಿರುವ ಕೊಳವೆಬಾವಿಗಳ ದುರಸ್ತಿಗೆ ಕ್ರಮ ವಹಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ, ಉಮರಫಾರೂಖ್ ಹುಬ್ಬಳ್ಳಿ ಸೇರಿದಂತೆ ಗದಗ-ಬೆಟಗೇರಿ ನಗರಸಭೆ ಎಂಜಿನಿಯರ್‌ಗಳು, ಅಧಿಕಾರಿಗಳು ಇದ್ದರು.