ಸದೃಢ ಸಮಾಜ ಕಟ್ಟುವಲ್ಲಿ ವಕೀಲರ ವೃತ್ತಿ ಅವಿಸ್ಮರಣೀಯ

| Published : Dec 04 2024, 12:36 AM IST

ಸಾರಾಂಶ

ಮೊಳಕಾಲ್ಮುರು: ಬಡವರಿಗೆ ನ್ಯಾಯ ಒದಗಿಸಿ ಸದೃಢ ಸಮಾಜ ಕಟ್ಟುವಲ್ಲಿ ವಕೀಲರ ವೃತ್ತಿ ಅವಿಸ್ಮರಣೀಯ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ಹೇಳಿದರು.

ಮೊಳಕಾಲ್ಮುರು: ಬಡವರಿಗೆ ನ್ಯಾಯ ಒದಗಿಸಿ ಸದೃಢ ಸಮಾಜ ಕಟ್ಟುವಲ್ಲಿ ವಕೀಲರ ವೃತ್ತಿ ಅವಿಸ್ಮರಣೀಯ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ವಕೀಲರ ಸಂಘದಿಂದ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಕೀಲರು ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ಪ್ರತಿ ದಿನ ಸದಾ ಒತ್ತಡದಲ್ಲಿ ದಿನ ಕಳೆಯುತ್ತಾರೆ. ಪ್ರತಿ ದಿನವೂ ಅಧ್ಯಯನ ಮೂಲಕ ಹೊಸತನವನ್ನು ಹುಡುಕುವ ವಕೀಲರ ವೃತ್ತಿ ಸದಾ ಕಲಿಕೆ. ವಕೀಲರಾಗಿ ಸೇವೆ ಸಲ್ಲಿಸಿದ ಅನೇಕ ಮಹನೀಯರು ದೇಶದಲ್ಲಿ ಬಹುದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಆಲೋಚನೆಗಳಲ್ಲಿ ವಕೀಲರಿಗೆ ಸದಾ ಒತ್ತಡ ಇರುತ್ತದೆ. ಅಂತಹ ಸಂದರ್ಭದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮದಿಂದ ಒಂದಷ್ಟು ಸಮಯವಾದರೂ ಖುಷಿಯಾಗಿರಬಹುದು. ಪ್ರತಿ ವಕೀಲರು ನಿಮ್ಮ ವೃತ್ತಿಯಲ್ಲಿ ನ್ಯಾಯ ಕೊಡಿಸುವ ಜತಗೆ ಆರೋಗ್ಯದ ಕಡೆ ಗಮನಹರಿಸಿ ಸದೃಢವಂತ ಸಮಾಜ ಕಟ್ಟಬೇಕು ಎಂದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಕಕ್ಷಿದಾರರಿಗೆ ನ್ಯಾಯ ಒದಗಿಸಲು ನಿರಂತರ ಅಧ್ಯಯನ ಮುಖ್ಯ. ಬಹುತೇಕ ಬಡ ಸಮುದಾಯಗಳೇ ಹೆಚ್ಚಾಗಿರುವ ಹಿಂದುಳಿದ ಈ ಭಾಗದಲ್ಲಿ ಕಕ್ಷಿದಾರ ನ್ಯಾಯಾಲಯಕ್ಕೆ ಅಲೆದಾಡಿಸದೆ ಸಕಾಲಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿ. ಸದಾ ಅಭ್ಯಾಸವಿದ್ದಲ್ಲಿ ಉತ್ತಮ ವಕೀಲರಾಗಲು ಅವಕಾಶವಿದ್ದು, ವಕೀಲ ವೃತ್ತಿಯ ಘನತೆ ಗೌರವವನ್ನು ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ವಕೀಲರು ನ್ಯಾಯಾಲಯಕ್ಕೆ ನಾಲ್ಕು ಎಕರೆ ಜಮೀನು ಕೊಡಿಸುವಂತೆ ಮನವಿ ಮಾಡಿದ್ದಾರೆ. ಜಮೀನು ಲಭ್ಯ ನೋಡಿಕೊಂಡು ನ್ಯಾಯಾಲಯಕ್ಕೆ ಬರುವ ಜನರ ಅನುಕೂಲಕ್ಕೆ ತಕ್ಕಂತೆ ಜಮೀನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಟಿ.ಜಗದೀಶ್, ಸಹಾಯಕ ಸರ್ಕಾರಿ ವಕೀಲ ಮಹಮ್ಮದ್ ಶಂಶಿರ ಆಲಿ, ವಕೀಲರ ಸಂಘದ ಅಧ್ಯಕ್ಷ ಆರ್.ಆನಂದ್, ತಾಲೂಕು ಪಂಚಾಯಿತಿ ಇ.ಒ.ಹನುಮಂತಪ್ಪ, ಉಪಾಧ್ಯಕ್ಷ ಜಿ.ಮಂಜುನಾಥ, ಕಾರ್ಯದರ್ಶಿ ಕುಮಾರಪ್ಪ, ಜಿ.ಆರ್.ಸುರೇಶ್, ಕೆ.ಎಂ.ರಾಮಾಂಜನೇಯ, ಹಿರಿಯ ವಕೀಲರಾದ ವಿ.ಜಿ.ಪರಮೇಶ್ವರಪ್ಪ, ರಾಜಶೇಖರ ನಾಯಕ, ಎಂ.ಎನ್.ವಿಜಯ ಲಕ್ಷ್ಮಿ, ವಸಂತ ಕುಮಾರ್, ಡಿ.ಬಸವರಾಜ, ಯರಿಸ್ವಾಮಿ, ವಿನೋದ, ಸಿದ್ದಪ್ಪ, ಆರ್.ಜಿ.ಮಲ್ಲಿಕಾರ್ಜುನ, ಶಿವಕುಮಾರ್, ಜಿ.ಟಿ.ಮಲ್ಲಿಕಾರ್ಜುನ, ತಿಮ್ಮಪ್ಪ ಇದ್ದರು.

ರಾಜಕೀಯವಾಗಿ ನಮ್ಮ ಕುಟುಂಬವನ್ನು

ಮಿಗಿಸಲು ಯತ್ನ ನಡೆದಿತ್ತು: ಶಾಸಕ

ಮೊಳಕಾಲ್ಮುರು: ರಾಜಕೀಯವಾಗಿ ನಮ್ಮ ಕುಟುಂಬವನ್ನು ತುಳಿಯಲು 2013ರ ಚುನಾವಣೆಯಲ್ಲಿ ಕಾಣದ ಕೈಗಳು ಕೆಲಸ ಮಾಡಿದವು. ಒಳ್ಳೆಯವರನ್ನು ದೇವರು ಎಂದೂ ಕೈಬಿಡಲ್ಲ ಎನ್ನುವುದಕ್ಕೆ ಆರೇ ತಿಂಗಳಲ್ಲಿ ಮತ್ತೆ ನನಗೆ ರಾಜಕೀಯ ಭವಿಷ್ಯ ಸಿಕ್ಕಿತು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಇರುತ್ತೆ ಹೋಗುತ್ತೆ. ಆದರೆ ನಾವು ಮಾಡಿದ ಉತ್ತಮ ಕೆಲಸಗಳು ನಮ್ಮನ್ನು ಸದಾ ಸ್ಮರಿಸಬಲ್ಲವು ಎಂದರು.

2013 ರ ಚುನಾವಣೆಯಲ್ಲಿ ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಯತ್ನ ಸದ್ದಿಲ್ಲದೆ ನಡೆಯಿತು. ಆದರೆ ದೇವರು ಎಂದೂ ನನ್ನನ್ನು ಕೈಬಿಡಲಿಲ್ಲ. ಆರೇ ತಿಂಗಳಲ್ಲಿ ಗೊತ್ತು ಗುರಿಯಿಲ್ಲದ ಕ್ಷೇತ್ರದಲ್ಲಿ ಸ್ಫರ್ಧೆ ಮಾಡಿದಾಗ ಜನರು ನನಗೆ ಆಶೀರ್ವದಿಸಿದರು ಎಂದರು.

ಕೂಡ್ಲಿಗಿಯಲ್ಲಿ ಸ್ಫರ್ಧೆ ಮಾಡಿದಾಗ ಅಲ್ಲಿಯ ಜನರು ನನ್ನ ಗೆಲುವಿಗೆ ಶ್ರಮಿಸಿದರು. ಇದಕ್ಕೆಲ್ಲಾ ಕಾರಣ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಒಳ್ಳೆಯ ತನ ಬಿಟ್ಟರೆ ಬೇರೇನೂ ಇಲ್ಲ. ಇದು ನನ್ನ ಸ್ವಂತ ಕ್ಷೇತ್ರ ನನ್ನ ತವರನ್ನು ಅಭಿವೃದ್ಧಿ ಪಡಿಸುವ ತವಕ ಇದೆ. ರಾಜಕೀಯ ಹೊರತು ಪಡಿಸಿ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.