ಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ : ಡಾ.ಕಾ. ರಾಮೇಶ್ವರಪ್ಪ

| Published : Mar 23 2024, 01:05 AM IST

ಸಾರಾಂಶ

ಗುರುವಿನ ಮಾರ್ಗದರ್ಶನ ನಿರಂತರ ಓದು ನಿಮ್ಮನ್ನು ಕೈ ಹಿಡಿಯುತ್ತದೆ. ಯಾವುದೇ ಪೂರ್ವಗ್ರಹ ಅಳುಕು ಇಲ್ಲದೆ ಗುರಿಯತ್ತ ಮುನ್ನುಗ್ಗಬೇಕು. ಶಿಕ್ಷಣವಿಲ್ಲದವರ ಬಾಳು ಸಮಸ್ಯೆಯಿಂದ ಕೂಡಿರುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಕಸನುಗಳು ಮತ್ತು ಗುರಿ ಮಾತ್ರ ಹೊಂದಿದ್ದರೆ ಸಾಲದು, ಅದನ್ನು ಖಚಿತವಾದ ಯೋಜನೆಯೊಂದಿಗೆ ಕಠಿಣ ಶ್ರಮವನ್ನು ಅನುಷ್ಠಾನಗೊಳಿಸುವುದು ಬಹಳ ಮುಖ್ಯ. ಆಗ ಯಶಸ್ಸು ಖಂಡಿತ ಸಾಧ್ಯವಾಗುತ್ತದೆ. ಆದ್ದರಿಂದ ಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬುದನ್ನು ಅರಿತು ಪ್ರಾಮಾಣಿಕ ಶ್ರಮ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿದೇರ್ಶಕ ಡಾ.ಕಾ. ರಾಮೇಶ್ವರಪ್ಪ ತಿಳಿಸಿದರು.

ನಗರದ ಲಕ್ಷ್ಮೀಪುರಂನಲ್ಲಿರುವ ಜ್ಞಾನಬುತ್ತಿ ಸಂಸ್ಥೆಯು ಆಯೋಜಿಸಿದ್ದ 65 ದಿನಗಳ ಪಿಡಿಒ, ಎಫ್.ಡಿ.ಎ, ವಿಎ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿದ ಅವರು, ಗುರುವಿನ ಮಾರ್ಗದರ್ಶನ ನಿರಂತರ ಓದು ನಿಮ್ಮನ್ನು ಕೈ ಹಿಡಿಯುತ್ತದೆ. ಯಾವುದೇ ಪೂರ್ವಗ್ರಹ ಅಳುಕು ಇಲ್ಲದೆ ಗುರಿಯತ್ತ ಮುನ್ನುಗ್ಗಬೇಕು. ಶಿಕ್ಷಣವಿಲ್ಲದವರ ಬಾಳು ಸಮಸ್ಯೆಯಿಂದ ಕೂಡಿರುತ್ತದೆ ಎಂದು ಹೇಳಿದರು.

ವಾಸು, ಶಿವರಾಂ ಸ್ಮರಣೆ

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವಾಸು, ನಿವೃತ್ತ ಐಎಎಎಸ್‌ಅಧಿಕಾರಿ ಕೆ. ಶಿವರಾಂ ನಮಗೆಲ್ಲರಿಗೂ ಮಾದರಿಯ ವ್ಯಕ್ತಿಗಳು. ಶಿವರಾಮು ಮತ್ತು ವಾಸು ಇಬ್ಬರೂ ಜ್ಞಾನಬುತ್ತಿಗೆ ಬೆಂಬಲವಾಗಿದ್ದವರು. ಶಿವರಾಮು ತಳಸಮುದಾಯದ ಅಸ್ಮಿತೆ, ಅಂತೆಯೇ ವಾಸು ಹೃದಯವಂತರು. ಸದ್ಗುಣ ಹೊಂದಿದ್ದ ಮೇರು ವ್ಯಕ್ತಿತ್ವದವರು. ಈ ಇಬ್ಬರೂ ನಮ್ಮನ್ನು ಅಗಲಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಶಿವರಾಂ ಯಾವುದೇ ಹಿನ್ನೆಲೆಯಿಲ್ಲದ ತುಳಿತಕ್ಕೊಳಗಾದ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಕೆ. ಶಿವರಾಂ ಅವರು ಸ್ಪೂರ್ತಿ ಎಂದು ಅವರು ತಿಳಿಸಿದರು.

ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿದ ನಿವೃತ್ತ ಪೊಲೀಸ್‌ಅಧಿಕಾರಿ ಜೆ.ಬಿ. ರಂಗಸ್ವಾಮಿ ಮಾತನಾಡಿ, ತುಮಕೂರಿನ ಕ್ಯಾತಸಂದ್ರದ ಕವಿತಾ ಕೃಷ್ಣ ಕವಿ, ಸಹೃದಯಿ ವಿದ್ವಾಂಸರು. ಲಿಂಗೈಕ್ಯ ಸಿದ್ಧಗಂಗಾ ಮಠದ ಸ್ವಾಮೀಜಿಯವರಿಂದ ಹಿಡಿದು ಕೈವಲ್ಯ ಮಠದ ಸ್ವಾಮೀಜಿಯವರಿಗೂ ಅಚ್ಚುಮೆಚ್ಚಾಗಿದ್ದರು. ಅನೇಕ ಕೃತಿಗಳನ್ನು ರಚಿಸಿದ್ದರು. ಜ್ಞಾನಬುತ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಸ್ಮರಿಸಿದರು.

ಜನಪದ ಗಾಯಕ ಅಮ್ಮರಾಮಚಂದ್ರ ಭಾಗವಹಿಸಿ ರೈತಗೀತೆ ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿದರು. ಅಖಿಲ ಭಾರತ ವಯಸ್ಕರ ಶಿಕ್ಷಣ ಸಮಿತಿ ನಿರ್ದೇಶಕ ವೈ.ಎನ್‌. ಶಂಕರೇಗೌಡ, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.‌ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಎಸ್.‌ಗಣೇಶ್‌, ಡಾ.ಈ. ಶಿವಪ್ರಸಾದ್‌, ಡಾ. ಪಳನಿಸ್ವಾಮಿ ಮೂಡಗೂರು, ಪ್ರೊ.ವಿ. ಜಯಪ್ರಕಾಶ್‌, ಡಾ. ಸುದರ್ಶನ್‌, ಪ್ರೊ.ಸಿ.ಕೆ. ಕಿರಣ್‌ಕೌಶಿಕ್‌, ಕೆ.ವೈ. ನಾಗೇಂದ್ರ‌, ಯು.ಎಂ. ಶರದ್ ರಾವ್ ಇದ್ದರು.