ಸಾರಾಂಶ
ತಳಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನದಿಂದಾಗಿ ಸಂಸ್ಥೆಯು ಪ್ರಗತಿ ಹೊಂದಲು ಸಾಧ್ಯವಾಗಿದೆ. ಘಟಕ ಹಾಗೂ ವಿಭಾಗ ಮಟ್ಟದಲ್ಲಿ ಸರಿಯಾದ ಹಾಗೂ ಸಮರ್ಪಕವಾದ ಕಾರ್ಯಾಚರಣೆ ಯೋಜನೆ ಹಾಕಿಕೊಂಡರೆ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿದೆ.
ಹುಬ್ಬಳ್ಳಿ:
ಸಂಸ್ಥೆಯು ಪ್ರಗತಿ ಹೊಂದಲು ಸಿಬ್ಬಂದಿಗಳ ಪರಿಶ್ರಮವೇ ಕಾರಣ. ಸಂಸ್ಥೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಹೇಳಿದರು.ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಗುರುವಾರ ಪ್ರಸಕ್ತ ಸಾಲಿನಲ್ಲಿ ವಿಶೇಷ ಟೂರ್ ಪ್ಯಾಕೇಜ್ ಕಾರ್ಯಾಚರಣೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಇ-ಮಳಿಗೆ ತಂತ್ರಾಂಶದ ಮೂಲಕ ವಾಣಿಜ್ಯ ಆದಾಯದಲ್ಲಿ ಹೆಚ್ಚಿನ ಸಾಧನೆ ಮಾಡಿದ ವಿಭಾಗಗಳು ಮತ್ತು ಘಟಕಗಳಿಗೆ ನಗದು ಪುರಸ್ಕಾರ, ಪ್ರಶಂಸನಾ ಪತ್ರ ಪ್ರದಾನ ಮಾಡಿ ಮಾತನಾಡಿದರು.
ತಳಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನದಿಂದಾಗಿ ಸಂಸ್ಥೆಯು ಪ್ರಗತಿ ಹೊಂದಲು ಸಾಧ್ಯವಾಗಿದೆ. ಘಟಕ ಹಾಗೂ ವಿಭಾಗ ಮಟ್ಟದಲ್ಲಿ ಸರಿಯಾದ ಹಾಗೂ ಸಮರ್ಪಕವಾದ ಕಾರ್ಯಾಚರಣೆ ಯೋಜನೆ ಹಾಕಿಕೊಂಡರೆ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿದೆ ಎಂದರು.ಪುರಸ್ಕಾರ:
ಇದೇ ವೇಳೆ ಇ-ಮಳಿಗೆ ತಂತ್ರಾಂಶದ ಮೂಲಕ ವಾಣಿಜ್ಯ ಅದಾಯ ಸಂಗ್ರಹಣೆಗೆ ನಿಗದಿತ ಗುರಿ ಸಾಧಿಸಿ ಪ್ರಥಮ ಸ್ಥಾನ ಪಡೆದ ಬೆಳಗಾವಿ ಮತ್ತು ದ್ವಿತೀಯ ಸ್ಥಾನ ಪಡೆದ ಬಾಗಲಕೋಟೆ ವಿಭಾಗಗಳಿಗೆ ಹಾಗೂ ಘಟಕ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಕಾರವಾರ, ದ್ವಿತೀಯ ಸ್ಥಾನದಲ್ಲಿ ಸಂಕೇಶ್ವರ ಘಟಕಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. 2025ರ ಪ್ರವಾಸ ವಿಶೇಷ ಕಾರ್ಯಾಚರಣೆಯಲ್ಲಿ ನೀಡಿದ ಗುರಿಗಿಂತ ಹೆಚ್ಚಿನ ಸಾಧನೆ ಮಾಡಿದ ಹಾವೇರಿ ವಿಭಾಗ ಹಾಗೂ ಅದರ ಘಟಕಗಳಾದ ಹಾವೇರಿ, ಹಿರೇಕೆರೂರ ಮತ್ತು ರಾಣಿಬೆನ್ನೂರ ಘಟಕಗಳು ಪ್ರಶಸ್ತಿ ನೀಡಲಾಯಿತು.ಈ ವೇಳೆ ಸಂಸ್ಥೆಯ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ನಿತಿನ ಹೆಗಡೆ, ರವಿ ಅಂಚಿಗಾವಿ, ನವೀನಕುಮಾರ ತಿಪ್ಪಾ, ಜಿ. ಹನುಮೇಗೌಡರ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ಹಾವೇರಿ ವಿಭಾಗೀಯ ಸಂಚಾರ ಅಧಿಕಾರಿಗಳು, ಘಟಕ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಲತಾ ಮಾಸಣಗಿ ನಿರೂಪಿಸಿ, ವಂದಿಸಿದರು.