ಸಾರಾಂಶ
ಹಾವೇರಿ: ತಂತ್ರಜ್ಞಾನ ಅತಿ ವೇಗವಾಗಿ ಬೆಳೆದು ನಿಂತು ನಮ್ಮೆಲ್ಲರ ಅವಶ್ಯಕತೆಗಳನ್ನು ಪೂರೈಸುವ ಜತೆಗೆ ಬದುಕನ್ನು ಸರಳಗೊಳಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಅನೇಕ ಅದ್ಭುತ, ಅಚ್ಚರಿಗಳನ್ನು ಸೃಷ್ಟಿಸುತ್ತಿವೆ. ಆ ಜ್ಞಾನವನ್ನು ಪಡೆದು ಸದುಪಯೋಗಪಡಿಸಿಕೊಂಡರೆ ಜಗತ್ತಿನ ಎಲ್ಲರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ತಿಳಿಸಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾವ ಸಂಗಮ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹಂಚಿನಮನಿ ಆರ್ಟ್ ಗ್ಯಾಲರಿ ಮತ್ತು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ‘ಪುಸ್ತಕ ಪ್ರೀತಿ- 04''''(ಮಹಿಳಾ ವಿಶೇಷ) ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮವನ್ನು ವಚನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯದ ಪ್ರತಿಯೊಂದು ಚಟುವಟಿಕೆಗಳನ್ನು ಕೂಡ ತಂತ್ರಜ್ಞಾನ ಬಳಸಿ ಸರ್ವರನ್ನೂ ತಲುಪುವಂತಾಗಬೇಕು. ಆಗ ಸಾಹಿತ್ಯವನ್ನು ಓದುವರ ಸಂಖ್ಯೆ ಹೆಚ್ಚಾಗುತ್ತದೆ ಎಂದ ಅವರು, ಮೂರು ಲೇಖಕಿಯರ ಪುಸ್ತಕಗಳಲ್ಲಿ ಮೌಲ್ಯಯುತವಾದ ವಿಚಾರಗಳ ಪ್ರಸ್ತಾಪವಿದೆ. ಸಾಹಿತ್ಯ ನಮ್ಮ ನೋವು, ನಲಿವಿಗೆ ಔಷಧದಂತೆ ಕೆಲಸ ಮಾಡುತ್ತದೆ. ಕೃತಿಗಳ ವಿಮರ್ಶೆ ಜತೆಗೆ ಓದುಗ ಮತ್ತು ಲೇಖಕರೊಂದಿಗಿನ ಸಂವಾದ ಹೊಸಬರ ಬರವಣಿಗೆಗೆ ಪ್ರೇರಣೆಯಾಗುತ್ತದೆ. ಇಂತಹ ಸುವಿಚಾರಗಳು ತಂತ್ರಜ್ಞಾನದ ಮೂಲಕ ಕ್ಷಣಾರ್ಧದಲ್ಲೇ ಜಗತ್ತನ್ನು ಆವರಿಸಿಕೊಳ್ಳುವಂತೆ ಮಾಡಿದರೆ ಓದುವ ಸಂಸ್ಕೃತಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದರು. ಉಪನ್ಯಾಸಕ ಮಂಜುನಾಥ ಹತ್ತಿಯವರ ಪ್ರಾಸ್ತಾವಿಕ ಮಾತನಾಡಿ, ಪುಸ್ತಕ ಪ್ರೀತಿ ಕಾರ್ಯಕ್ರಮದ ಅಡಿಯಲ್ಲಿ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಸಂವಾದದಿಂದ ಗುಣಮಟ್ಟದ ಲೇಖಕರು ಮತ್ತು ಓದುಗರನ್ನು ಸೃಷ್ಟಿಸಲು ಸಾಧ್ಯವಾಗಿದೆ. ಇದು ನಾಲ್ಕನೇ ಕಾರ್ಯಕ್ರಮವಾಗಿದ್ದು, ಖ್ಯಾತನಾಮರು ಬಂದು ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ. ಜಿಲ್ಲೆಯ ಸಾಹಿತ್ಯಿಕ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ ಎಂದರು.ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಸಾಹಿತಿ ಪ್ರೊ. ಶೇಖರ ಭಜಂತ್ರಿ ಅವರು ಡಾ. ಪುಷ್ಪಾವತಿ ಶಲವಡಿಮಠ ಅವರ ‘ನೀಲಾಂಬಿಕೆ'''' ಕೃತಿ ಕುರಿತು, ಲತಾ ಹಳಕೊಪ್ಪ ಅವರು ‘ಅಂತರಾಳ'''' ಕೃತಿ ಕುರಿತು, ಕವಿಯತ್ರಿ ಭಾಗ್ಯ ಎಂ.ಕೆ. ಅವರು ‘ಬದುಕ ನಿತ್ಯ ನಗಾರಿ'''' ವಚನಗಳ ಕೃತಿ ಕುರಿತು ವಿಮರ್ಶೆ ಮಾಡಿದರು.ನಂತರ ಓದುಗರು ಮೂವರು ಲೇಖಕಿಯರಿಗೆ ದಾಕ್ಷಾಯಿಣಿ ಉದಗಟ್ಟಿ, ಕವಿತಾ ಸಾರಂಗಮಠ, ರಾಜೇಶ್ವರಿ, ಮಣಿಕಂಠ, ಲತಾ ಪಾಟೀಲ, ಅನಿತಾ ಮಂಜುನಾಥ, ರಹೀಲ್ ರಾಜಭಕ್ಷಿ, ಸಿ.ಎ. ದೊಡ್ಡಗೌಡ್ರ, ದಾನೇಶ್ವರಿ ಶಿಗ್ಗಾವಿ, ಜಗನ್ನಾಥ ಗೇನಣ್ಣನವರ ಮತ್ತು ಇತರ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾ ಸಂವಾದ ನಡೆಸಿಕೊಟ್ಟರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕರಿಯಪ್ಪ ಹಂಚಿನಮನಿ, ಎಸ್.ಆರ್. ಹಿರೇಮಠ, ನಾಗರಾಜ, ರೇಣುಕಾ ಗುಡಿಮನಿ, ಜುಬೇದಾ ನಾಯಕ, ಜಿಎಚ್ ಕಾಲೇಜು ಮತ್ತು ಎಸ್‌ಜೆಎಂ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ದಾಕ್ಷಾಯಿಣಿ ಉದಗಟ್ಟಿ ಸ್ವಾಗತಿಸಿದರು. ಮಣಿಕಂಠ ಗೋದಮನಿ ನಿರೂಪಿಸಿದರು. ಕರಿಯಪ್ಪ ಹಂಚಿನಮನಿ ವಂದಿಸಿದರು.