ಸಾರಾಂಶ
ಲಿಂಗಸುಗೂರು (ರಾಯಚೂರು) : ಮಾಜಿ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬದ ಬಳಿಕ ಇದೀಗ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ಮತ್ತು ಕಾಂಗ್ರೆಸ್ ಎಂಎಲ್ಸಿ ಶರಣಗೌಡ ಪಾಟೀಲ ಬಯ್ಯಾಪುರ ಅವರಿಗೂ ಇದೀಗ ವಕ್ಫ್ ಆಸ್ತಿ ಬಿಸಿ ತಟ್ಟಿದೆ. ಮುದಗಲ್‌ನಲ್ಲಿರುವ ಇವರಿಗೆ ಸೇರಿದ ಆಸ್ತಿಯ ಪಹಣಿ ದಾಖಲೆಯ ಕಾಲಂ ನಂ.11ರಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್‌ರ ಪುತ್ರ ಆಂಜನೇಯ ಅವರು ಮುದಗಲ್ ಹೋಬಳಿಯಲ್ಲಿ 2016-17ರಲ್ಲಿ ಒಂದು ಎಕರೆ ಭೂಮಿ ಖರೀದಿಸಿದ್ದರು. ಇದೀಗ ಆ ಜಮೀನಿನ ಪಹಣಿ ದಾಖಲೆಯ ಕಾಲಂ ನಂಬರ್ 11ರಲ್ಲಿ ಏಕಾಏಕಿ ವಕ್ಫ್ ಹೆಸರು ಏಕಾಏಕಿ ನಮೂದಾಗಿರುವುದು ಬೆಳಕಿಗೆ ಬಂದಿದೆ.
ಅದೇ ರೀತಿ ಮುದುಗಲ್ ಹೋಬಳಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಸೇರಿದ ಒಂದು ಎಕರೆ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಮುದಗಲ್ ಹೋಬಳಿ ಸರ್ವೆ ನಂಬರ್ 242/4ರ ಈ ಜಮೀನನ್ನು ಅವರು 2007-08ರಲ್ಲಿ ಖರೀದಿಸಿದ್ದರು. ಆಗ ಪಹಣಿಯಲ್ಲಿ ವಕ್ಫ್ ಎಂದು ಉಲ್ಲೇಖಿಸರಲಿಲ್ಲ. ಆದರೆ ಇದೀಗ ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ವಕ್ಫ್ ಆಸ್ತಿ ಗದ್ದಲದ ಬಳಿಕ ಪರಿಶೀಲಿಸಿದಾಗ ಗಮನಕ್ಕೆ ಬಂದಿದೆ.
ಸ್ವಾಮೀಜಿ ಆಸ್ತಿಗೂ ವಕ್ಫ್ ಎಂದು ಎಂಟ್ರಿ
ರಾಯಚೂರು ಜಿಲ್ಲೆ ಮುದಗಲ್‌ನ ಅಂಕಲಿಮಠದ ಕಿರಿಯ ಶ್ರೀಗಳಾದ ಫಕೀರೇಶ್ವರ ಸ್ವಾಮೀಜಿ ಅವರಿಗೆ ಸೇರಿದ ಸರ್ವೆ ಸಂಖ್ಯೆ 242/8ರ 19 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಸೇರಿದೆ. ಮುದಗಲ್ ಹೋಬಳಿಯ ಒಟ್ಟು 30 ಎಕರೆ ಭೂಮಿಯ ಪಹಣಿ ದಾಖಲೆಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಇಲ್ಲಿನ ಹಲವು ರೈತರ ಜಮೀನಿನ ಆಸ್ತಿ ಪತ್ರದಲ್ಲೂ ವಕ್ಫ್ ಮಂಡಳಿ ಹೆಸರು ಬಂದಿದೆ.------
ಶರಣಗೌಡ ಪಾಟೀಲ್ ಬಯ್ಯಾಪುರ ಕಂಗಾಲು
ನಮ್ಮ ಭೂಮಿ ಹಿಂದೆ ಇನಾಂ ಭೂಮಿಯಾಗಿತ್ತು. 15 ವರ್ಷಗಳ ಹಿಂದೆ ಆ ಜಮೀನು ಖರೀದಿಸಲಾಗಿದ್ದು, ಇದೀಗ ಏಕಾಏಕಿ ಪಹಣಿಯಲ್ಲಿ ವಕ್ಫ್ ಹೆಸರು ಯಾಕೆ ನಮೂದಾಗಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಇದರ ಜತೆಗೆ ಅನೇಕ ರೈತರ ಪಹಣಿಯಲ್ಲೂ ವಕ್ಫ್ ಹೆಸರು ಸೇರ್ಪಡೆಯಾಗಿರುವುದರ ಬಗ್ಗೆ ಮಾಹಿತಿ ಇದೆ ಎಂದು ಕಾಂಗ್ರೆಸ್ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ.