ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣದಲ್ಲಿ ಶುಕ್ರವಾರ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನದ ನಿಮಿತ್ತವಾಗಿ ಮುಸ್ಲಿಂ ಸಮುದಾಯದವರು ಭಕ್ತಿ ಭಾವದಿಂದ ಈದ್‌ಮಿಲಾದ್ ಆಚರಿಸಿದರು. ಪಟ್ಟಣದ ಸೈಯ್ಯದ್ ಷಾಹ್ ಬಡೇಸಾಹೇಬ್ ದರ್ಗಾ ಆವರಣದಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮ ನಡೆದವು.ಕಾರ್ಯಕ್ರಮದ ಅಂಗವಾಗಿ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂಪಾಷ ಸಾಹೇಬ್ ಸಜ್ಜಾದೇ ನಶೀನ್ ದಿವಾನಾಖಾನಾ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಮಹಮ್ಮದ್ ಪೈಗಂಬರ್ ಅವರು ತೋರಿದ ದಾರಿ ಮಾನವತೆಯ ಮಾರ್ಗವಾಗಿದೆ. ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬ ಮುಸ್ಲಿಂ ತಮ್ಮ ನಿತ್ಯ ಜೀವನದಲ್ಲಿ ಅನುಸರಿಸಿದರೆ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸುತ್ತದೆ. ಪರಧರ್ಮಿಯರೊಂದಿಗೆ ಸಹಿಷ್ಣುತೆಯಿಂದ ನಡೆದುಕೊಳ್ಳಬೇಕು, ಪ್ರೀತಿ, ಬಾಂಧವ್ಯದಿಂದ ಬದುಕಬೇಕು ಎಂದು ತಿಳಿಸಿದರು.
ಮೆರವಣಿಗೆ, ಸ್ತಬ್ಧಚಿತ್ರ ಸ್ಪರ್ಧೆ:ಹಬ್ಬದ ಅಂಗವಾಗಿ ಬೆಳಗ್ಗೆ ಕೋಟೆಯ ಝಂಡಾಕಟ್ಟೆಯಿಂದ ಮೆಕ್ಕಾ–ಮದೀನಾ ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ ಆರಂಭಗೊಂಡಿತು. ನೂರಾರು ಮಕ್ಕಳು, ಯುವಕರು, ಧಾರ್ಮಿಕ ನಾಯಕರು, ಸಮುದಾಯದ ಹಿರಿಯರು ಭಾಗವಹಿಸಿದ ಈ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳನ್ನು ಸುತ್ತಿ ಬಡೇಸಾಹೇಬ್ ದರ್ಗಾದಲ್ಲಿ ಸಮಾರೋಪಗೊಂಡಿತು.
ಈದ್ ಮಿಲಾದ್ ಕಮಿಟಿಯಿಂದ ಆಯೋಜಿಸಲಾದ ಸ್ತಬ್ಧಚಿತ್ರ ಸ್ಪರ್ಧೆಯಲ್ಲಿ ಕಂಪ್ಲಿಯ ಯಾಸೀನ್ ಮಸೀದಿಯ ಚಂದ್ರಮದ್ಯದಲ್ಲಿನ ಮದೀನ ಸ್ತಬ್ಧಚಿತ್ರ ಪ್ರಥಮ ಬಹುಮಾನ ಗಳಿಸಿತು. ಸಕ್ಕರೆ ಕಾರ್ಖಾನೆಯ ಆಶ್ರಫಿ ಮಸೀದಿಯ ಮೆಕ್ಕಾ–ಮದೀನಾ ಸ್ತಬ್ಧಚಿತ್ರ ದ್ವಿತೀಯ ಬಹುಮಾನಕ್ಕೆ ಪಾತ್ರವಾಯಿತು.ಕಾರ್ಯಕ್ರಮದಲ್ಲಿ ಧರ್ಮಗುರುಗಳು ಸೈಯ್ಯದ್ ಷಾಹ್ ಅಬುತರಾಬ್ ಖಾದ್ರಿ, ಸೈಯ್ಯದ್‌ಷಾಹ್ ಚಾಂದ್‌ಪಾಷ ಖಾದ್ರಿ, ಸೈಯ್ಯದ್‌ಷಾಹ್ ಡಾ. ನೂರ್‌ಅಹ್ಮದ್ ಖಾದ್ರಿ, ಸೈಯ್ಯದ್‌ಷಾಹ್ ಉಮೇಸ್ ಸಾಹೇಬ್ ಉಪಸ್ಥಿತರಿದ್ದರು. ಜೊತೆಗೆ ಶಾಸಕ ಜೆ.ಎನ್. ಗಣೇಶ್, ಪುರಸಭಾ ಅಧ್ಯಕ್ಷ ಭಟ್ಟ ಪ್ರಸಾದ್, ಈದ್‌ಮಿಲಾದ್ ಕಮಿಟಿ ಅಧ್ಯಕ್ಷ ಯು. ಜಹೀರುದ್ದೀನ್, ಉಪಾಧ್ಯಕ್ಷ ಎಂ. ನಾಸೀರ್‌ದ್ದೀನ್, ಪದಾಧಿಕಾರಿಗಳು ಬಿ. ಇಮ್ರಾನ್‌ಖಾನ್, ಬಿ. ನೂರ್, ಅಬ್ದುಲ್ ಗಯಾಬ್ ಸೇರಿದಂತೆ ವಿವಿಧ ಮಸೀದಿಗಳ ಮುತುವಲ್ಲಿಗಳು, ಹಾಫಿಜ್‌ಗಳು, ಮೌಲ್ವಿಗಳು ಮತ್ತು ಸಾವಿರಾರು ಮುಸ್ಲಿಂ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು.