ಸಾರಾಂಶ
ಪರಿಹಾರ ಭರವಸೆ । ಮಾಗಡಿ- ಸೋಮವಾರಪೇಟೆ ಮಾರ್ಗದಲ್ಲಿ ಕಾಮಗಾರಿ । ತಹಸೀಲ್ದಾರ್, ಎಂಜಿನಿಯರ್ ಭೇಟಿ
ಕನ್ನಡಪ್ರಭ ವಾರ್ತೆ ಅರಕಲಗೂಡುತಾಲೂಕಿನಲ್ಲಿ ಹಾದುಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದಲ್ಲಿ ಕೈಗೊಂಡಿರುವ ಅವೈಜ್ಞಾನಿಕ ರಸ್ತೆ ಅಭಿವೃದ್ಧಿ ಕಾಮಗಾರಿ ಸರಿಪಡಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್ ಗೌಡ ಎಚ್ಚರಿಸಿದರು.
ತಾಲೂಕಿನ ಸಿದ್ದಾಪುರ ಗೇಟ್‌ನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಅವೈಜ್ಞಾನಿ ರಸ್ತೆ ಕಾಮಗಾರಿ ವಿರೋಧಿಸಿ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮಾತನಾಡಿ, ಹಲವು ದಶಕಗಳಿಂದ ಹದಗೆಟ್ಟಿದ್ದ ರಸ್ತೆ ಅಭಿವೃದ್ಧಿ ಭಾಗ್ಯ ಕಾಣುತ್ತಿದೆ. ಆದರೆ ಕೆಶಿಪ್ ಎಂಜಿನಿಯರ್ ನಿರ್ಲಕ್ಷ್ಯ ಧೋರಣೆಯಿಂದಾಗಿ ಕೆಲವು ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿ ಸಾಗಿದೆ ಎಂದು ಆರೋಪಿಸಿದರು.ಸಿದ್ದಾಪುರ ಗೇಟ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಶಾಲನಗರ ಮಾರ್ಗದ ರಸ್ತೆ ಯಾವುದು ಎಂದು ತಿಳಿಯದೆ ಪ್ರಯಾಣಿಕರು ಸಂಚರಿಸುವಂತಾಗಿದೆ. ಯೋಜನಾಬದ್ಧವಾಗಿ ಕಾಮಗಾರಿ ನಿರ್ವಹಿಸದ ಕಾರಣ ರಸ್ತೆ ಅಪಘಾತಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಬಸ್ ನಿಲುಗಡೆ ಸ್ಥಳದಲ್ಲಿ ತಂಗುದಾಣಗಳನ್ನೂ ನಿರ್ಮಿಸಿಲ್ಲ. ರಸ್ತೆ ವಿಸ್ತರಣೆಗೆ ಭೂಮಿ ಕಳೆದಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರ ಕೂಡ ಒದಗಿಸದೆ ಬೇಜವಾಬ್ದಾರಿ ವಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಮೇಲಾಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸದಿದ್ದರೆ ನಾನೇ ಖುದ್ದು ಹೋರಾಟ ನಡೆಸುವುದಾಗಿ ಗುಡುಗಿದರು.
ಸಿದ್ದಾಪುರ ಗೇಟ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಸ್ಥಳಕ್ಕೆ ಕೆ-ಶಿಪ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವರಾಜ್ ಅವರನ್ನು ಕರೆಸಿ ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ರಸ್ತೆ ಅಭಿವೃದ್ಧಿ ಕಾಮಗಾರಿ ದಾರಿ ತಪ್ಪಲು ಎಂಜಿನಿಯರ್ ಶಿವರಾಜ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಭೂಸ್ವಾಧೀನವಾದ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಮೀನಮೇಷ ಎಣಿಸಲಾಗುತ್ತಿದೆ. ವಯಸ್ಸಾದ ವೃದ್ಧರು, ಮಹಿಳೆಯರನ್ನು ಅಲೆದಾಡಿಸಿ ಸತಾಯಿಸಲಾಗುತ್ತಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡು ಆಕ್ರೋಶ ಹೊರಹಾಕಿದರು.ಮುಖಂಡ ಶ್ರೀಧರ್ ಗೌಡ ಅವರು ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ಅವರಿಗೆ ಕರೆ ಮಾಡಿದ ನಂತರ ತಹಸೀಲ್ದಾರ್ ಸೌಮ್ಯ ಹಾಗೂ ಕೆಶಿಪ್ ಎಂಜಿನಿಯರ್ ಸುಮಿತ್ರ ಅವರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಆಹವಾಲು ಆಲಿಸಿದರು.
ಕೆಶಿಪ್ ಎಂಜಿನಿಯರ್ ಸುಮಿತ್ರ ಮಾತನಾಡಿ, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸುವರ್ಣ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ರಾಘವೇಂದ್ರಗೌಡ ಮಾತನಾಡಿ, ಅಧಿಕಾರಿಗಳ ಮನವಿ ಮೇರೆಗೆ ಆಹೋರಾತ್ರಿ ಉಪವಾಸ ಧರಣಿ ನಿಲ್ಲಿಸಲಾಗುವುದು, ಆದರೆ ರೈತರ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದರು.