ಎಳೆನೀರು, ತಂಪುಪಾನೀಯ ಮೊರೆ ಹೋದ ಸಾರ್ವಜನಿಕರು

| Published : Mar 22 2024, 01:04 AM IST

ಸಾರಾಂಶ

ರಸ್ತೆಯ ಅಕ್ಕಪಕ್ಕದಲ್ಲಿ ಚಿಕ್ಕಪುಟ್ಟ ಎಳೆನೀರಿನ ಅಂಗಡಿಗಳು ತಲೆ ಎತ್ತಿವೆ.

ಅಂಕೋಲಾ: ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ಜನರು ಹೈರಾಣಾಗುತ್ತಿದ್ದಾರೆ. ತಾಪಮಾನದ ಹೆಚ್ಚಳದಿಂದ ತಂಪು ಪಾನೀಯದ ಮೊರೆ ಹೋಗುತ್ತಿರುವುದು ಹೆಚ್ಚಾಗಿದ್ದು, ರಸ್ತೆಯ ಅಕ್ಕಪಕ್ಕದಲ್ಲಿರುವ ಎಳನೀರಿಗಾಗಿ ಜನರು ಮುಗಿಬೀಳುತ್ತಿದ್ದಾರೆ.

ವರ್ಷಕ್ಕಿಂತ ಈ ವರ್ಷದ ಬಿಸಿಲಿನ ತಾಪಮಾನ ಬಹುಏರಿಕೆಯಾಗಿದ್ದು, ಇದೇ ವಾತಾವರಣ ಮುಂದುವರಿದಲ್ಲಿ ಅಂಕೋಲಾ ತಾಲೂಕಿನ ಹಲವು ಭಾಗಗಳಲ್ಲಿ ನೀರಿನ ತುಟ್ಟಾಗ್ರತೆ ಕಾಣಿಸಿಕೊಳ್ಳಲಿದೆ.

ಈಗಾಗಲೇ ಹಲವು ಪ್ರದೇಶಗಳಲ್ಲಿ ಕೆಲಸಗಳನ್ನು ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿಯು ಉದ್ಭವವಾಗಿದೆ. ಇನ್ನೂ ಕೆಲವು ದಿನಗಳು ಇದೇ ರೀತಿಯ ಬಿಸಿಲು ಮುಂದುವರಿದಲ್ಲಿ ನೀರಿಗಾಗಿ ಸಂಕಷ್ಟ ಎದುರಿಸಬೇಕಾದೀತು ಎನ್ನುವುದು ಪ್ರಾಜ್ಞರ ಅಭಿಪ್ರಾಯವಾಗಿದೆ.

ಗಂಗಾವಳಿ ನದಿಗೆ ಹೊನ್ನಳ್ಳಿಯ ಬಳಿ ಉಸುಕಿನ ಚೀಲಗಳನ್ನು ಹಾಕಿ ನೀರನ್ನು ಸಂಗ್ರಹಿಸಿದ್ದಾರೆ. ಆದರೆ ಇದು ಎಷ್ಟು ಸಮಯದವರೆಗೆ ಇರಬಹುದು ಎನ್ನುವುದೇ ಪ್ರಶ್ನೆಯಾಗಿದೆ. ಕಳೆದ ವರ್ಷವು ಗಂಗಾವಳಿ ನದಿಯಲ್ಲಿ ಮೇ ತಿಂಗಳಿನಲ್ಲಿ ನೀರಿನ ಕೊರತೆಯಾಗಿತ್ತು. ೨- ೩ ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡುವ ಪರಿಸ್ಥಿತಿ ಎದುರಾಗಿತ್ತು.

ಈ ವರ್ಷ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ನೀರು ಹೆಚ್ಚಿನ ಪ್ರಮಾಣದಲ್ಲಿ ಬತ್ತುತ್ತಿದ್ದು, ಈ ವರ್ಷವು ನೀರಿನ ಸಮಸ್ಯೆ ಎದುರಾಗುವ ಕಾಲ ನಿಚ್ಚಳವಾದಂತಾಗಿದೆ.

ಇನ್ನೊಂದೆಡೆ ಬಿಸಿಲಿನ ತಾಪಮಾನಕ್ಕೆ ನಾಗರಿಕರು ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿ ಚಿಕ್ಕಪುಟ್ಟ ಎಳೆನೀರಿನ ಅಂಗಡಿಗಳು ತಲೆ ಎತ್ತಿವೆ. ದಿನಕ್ಕೆ ಓರ್ವ ವ್ಯಾಪಾರಿ ೧೦೦ರಿಂದ ೨೦೦ ಎಳೆ ನೀರನ್ನು ಮಾರಾಟ ಮಾಡುತ್ತಿದ್ದಾರೆ. ₹೪೦ರಿಂದ ₹೫೦ರ ವರೆಗೆ ದರ ಏರಿದ್ದು, ಗ್ರಾಹಕರು ಬಿಸಿಲಿನ ತಾಪಮಾನ ತಾಳಲಾರದೆ ಹಣ ಎಷ್ಟಾದರಾಗಲಿ, ಆರೋಗ್ಯ ಸರಿ ಇರಲಿ ಎಂದು ಎಳೆನೀರನ್ನು ಕುಡಿಯುತ್ತಿದ್ದಾರೆ. ಇನ್ನೊಂದೆಡೆ ಕಬ್ಬಿನ ಹಾಲಿಗೆ ಬೇಡಿಕೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿಗೂ ಭಾರಿ ಬೇಡಿಕೆ ಬಂದಿದೆ.

ದರ ಹೆಚ್ಚಳ: ಈ ವರ್ಷ ಎಳೆನೀರಿಗೆ ಬಹುಬೇಡಿಕೆ ಬಂದಿದೆ. ನಾವು ಖರೀದಿಸುವಾಗಲೂ ಹೆಚ್ಚಿನ ದರವನ್ನು ನೀಡಿಯೇ ಖರೀದಿಸಬೇಕಾಗಿದೆ. ಬಿಸಿಲು ಹೀಗೆ ಮುಂದುವರಿದಲ್ಲಿ ಎಳೆನೀರಿನ ದರ ಇನ್ನೂ ಹೆಚ್ಚಬಹುದು ಎಂದು ಎಳೆನೀರಿನ ವ್ಯಾಪಾರಿ ಅನಂತ ನಾಯ್ಕ ತಿಳಿಸಿದರು.