ಎಸ್.ಎಂ.ಕೃಷ್ಣ ಅವರ ಅಂತಿನ ದರ್ಶನ ಪಡೆಯಲು ಹಾತೊರೆದ ಸಾರ್ವಜನಿಕರು

| Published : Dec 12 2024, 12:33 AM IST

ಎಸ್.ಎಂ.ಕೃಷ್ಣ ಅವರ ಅಂತಿನ ದರ್ಶನ ಪಡೆಯಲು ಹಾತೊರೆದ ಸಾರ್ವಜನಿಕರು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಎಂ.ಕೃಷ್ಣ ಪಾರ್ಥಿವ ಶರೀರ ಸಾಗಿಸುತ್ತಿದ್ದ ವಾಹನದ ಮೇಲೆ ಮಾರ್ಗದುದ್ದಕ್ಕೂ ಸಾರ್ವಜನಿಕರು ಹೂವಿನ ಮಲೆ ಸುರಿಸಿದರು. ನೂರಾರು ಜನರು ಪಾರ್ಥಿವ ಶರೀರ ಇಟ್ಟಿದ್ದ ವಾಹನ ಹಿಂಬಾಲಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನೂರಾರು ಕೈಗಳು ಎಸ್.ಎಂ.ಕೃಷ್ಣರ ಪಾರ್ಥಿವ ಶರೀರ ಮುಟ್ಟಲು ತವಕಿಸುತ್ತಿದ್ದವು. ಸಾವಿರಾರು ಕಣ್ಣುಗಳು ಮುಖ ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದವು. ಮಾರ್ಗದುದ್ದಕ್ಕೂ ಎಸ್.ಎಂ.ಕೃಷ್ಣ ಅಮರ್ ರಹೇ.. ಎಸ್.ಎಂ.ಕೃಷ್ಣಕೀ ಜೈ.. ಘೋಷಣೆಗಳು ಮೊಳಗಿದವು.

ಇದು ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತು ಸಾಗುತ್ತಿದ್ದ ವಾಹನದ ಸುತ್ತ ಕಂಡು ಬಂದ ದೃಶ್ಯಗಳಿವು.

ಇಹಲೋಕ ತ್ಯಜಿಸಿದ ಎಸ್.ಎಂ.ಕೃಷ್ಣ ಅವರಿಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯ ಜನರು ಬುಧವಾರ ಅಶ್ರು ತರ್ಪಣ ಸಲ್ಲಿಸಿದ್ದು, ಪಾರ್ಥಿವ ಶರೀರ ಸಾಗಿಸುತ್ತಿದ್ದ ವಾಹನದ ಮೇಲೆ ಮಾರ್ಗದುದ್ದಕ್ಕೂ ಸಾರ್ವಜನಿಕರು ಹೂವಿನ ಮಲೆ ಸುರಿಸಿದರು. ನೂರಾರು ಜನರು ಪಾರ್ಥಿವ ಶರೀರ ಇಟ್ಟಿದ್ದ ವಾಹನ ಹಿಂಬಾಲಿಸಿದರು.

ಕೃಷ್ಣರವರ ಶವವನ್ನು ವಾಹನದಲ್ಲಿ ಬೆಂಗಳೂರು - ಮೈಸೂರು ಮಾರ್ಗವಾಗಿ ಮದ್ದೂರಿಗೆ ಕೊಂಡೊಯ್ಯಲಾಯಿತು. ಈ ಸಂದರ್ಭ ಜನರು ಅಲ್ಲಲ್ಲಿ ಸಾಲಾಗಿ ನಿಂತು ಅಗಲಿದ ಕೃಷ್ಣರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಬೆಳಗ್ಗೆ ಕೃಷ್ಣರವರ ಪಾರ್ಥಿವ ಶರೀರ ಹೊತ್ತ ವಾಹನ ಕೆಂಗೇರಿ ಮೂಲಕ ಕುಂಬಳಗೂಡು ವೃತ್ತಕ್ಕೆ ಸಾಗಿ ಬಂದಿತು. ಅಲ್ಲಿ ನೂರಾರು ಮಂದಿ ಪುಷ್ಪ ಸಮರ್ಪಿಸಿ ಬೀಳ್ಕೊಟ್ಟರು. ಅಲ್ಲಿಂದ ಬಿಡದಿಯ ಬಿಜಿಎಸ್ ವೃತ್ತದಲ್ಲಿಯೂ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಲ್ಲಿ ಕೆಲವು ನಿಮಿಷಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಲ ಕಲ್ಪಿಸಲಾಗಿತ್ತು.

ಇದಾದ ನಂತರ ಹಳೆಯ ಬೆಂಗಳೂರು ಹಾಗೂ ಮೈಸೂರು ಮಾರ್ಗದಲ್ಲಿ ಸಾಗಿದ ವಾಹನ ನಿಧಾನವಾಗಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿತು. ಜಿಲ್ಲಾಧಿಕಾರಿ ಕಚೇರಿಯಿಂದಲೇ ಸಾರ್ವಜನಿಕರು ಮಾಜಿ ಸಿಎಂ ಕೃಷ್ಣ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡರು. ಜಿಲ್ಲಾಧಿಕಾರಿ ಕಚೇರಿ, ವಿಜಯ ನಗರ ಆರ್ಚ್, ಪಿಡಬ್ಲ್ಯೂಡಿ ಸರ್ಕಲ್, ಗಾಂಧಿ ನಗರ,ರೋಟರಿ ಸರ್ಕಲ್ ಸೇರಿದಂತೆ ಇತರೆ ಕಡೆ ಜನತೆ ಅಂತಿಮ ನಮನ ಸಲ್ಲಿಸಿದರು.

ಇದಾದ ಬಳಿಕ ನಗರದ ಐಜೂರು ಸರ್ಕಲ್‌ಗೆ ಅಗಮಿಸಿ, ಇಲ್ಲಿಯೂ ಸಾರ್ವಜನಿಕರು ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಅಂತಿಮನ ದರ್ಶನ ಪಡೆದುಕೊಂಡರು.

ಐಜೂರು ಸರ್ಕಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ ವತಿಯಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಸ್.ಎಂ.ಕೃಷ್ಣ ಅವರ ಭಾವಚಿತ್ರ ವಿಟ್ಟು ಪೂಜೆ ಸಲ್ಲಿಸಲಾಗಿತ್ತು. ವಾಹನ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದ್ದ ಸ್ಥಳಕ್ಕೆ ಬಂದ ತಕ್ಷಣ, ಸ್ಥಳೀಯ ನಾಯಕರು ಹಾಗೂ ಮುಖಂಡರು ತೆರಳಿ ಅಂತಿಮ ನಮನ ಸಲ್ಲಿಸಿದರು. ಸಾರ್ವಜನಿಕರು. ಇದಾದ 7 ನಿಮಿಷದಲ್ಲಿ ವಾಹನ ಚನ್ನಪಟ್ಟಣಕ್ಕೆ ತೆರಳಿತು.

ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್:

ಯಾರೊಬ್ಬರು ಟ್ರಾಫಿಕ್ ಕಿರಿಕಿರಿಗೆ ನೊಂದು ಕೊಂಡಿಲ್ಲ. ಅದರ ಬದಲಿಗೆ ಮೆರವಣಿಗೆ ಸಾಗುವವರೆಗೂ ವಾಹನ ಸವಾರರೆ ದಾರಿ ಬಿಟ್ಟು ಸಹಕರಿಸಿದ್ದು ವಿಶೇಷವಾಗಿತ್ತು. ಪಾರ್ಥಿವ ಶರೀರ ಕೊಂಡೊಯ್ಯುವ ಸಂದರ್ಭ ಹೆದ್ದಾರಿಯಲ್ಲಿ ಇತರೆ ವಾಹನಗಳ ಸಂಚಾರ ಬಂದ್ ಆಗಿತ್ತು. ಜನರು ಸ್ವಯಂ ಪ್ರೇರಿತವಾಗಿ ದಾರಿ ಬಿಟ್ಟುಕೊಟ್ಟು ಗೌರವ ಸಲ್ಲಿಸಿದರು. ದಾರಿಯುದ್ದಕ್ಕೂ ಪೊಲೀಸರು ಭದ್ರತೆ ಒದಗಿಸಿದ್ದರು. ಆದರೆ, ಪ್ರವಾಹದಂತೆ ಬಂದ ಜನರನ್ನು ನಿಯಂತ್ರಿಸುವುದು ಅವರಿಗೂ ಕಷ್ಟವಾಯಿತು.

ಅಗಲಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಜಿಲ್ಲೆಯ ಜನತೆ, ಅಭಿಮಾನಿಗಳು, ನಾಯಕರು, ಪಕ್ಷಾತೀತವಾಗಿ ಭಾವಪೂರ್ಣ ವಿದಾಯ ನೀಡಿದರು. ಹಿರಿಯರು, ಕಿರಿಯರು ಸೇರಿದಂತೆ ಎಲ್ಲಾ ವಯೋ ವರ್ಗದವರು ಸೇರಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದರು.

-----------

...ಬಾಕ್ಸ್ ...ಬೆಂಗಳೂರು - ಮೈಸೂರು ಹೆದ್ದಾರಿ ಏಕಪಥ

ರಾಮನಗರದ ಐಜೂರು ವೃತ್ತದಲ್ಲಿ ಎಸ್.ಎಂ.ಕೃಷ್ಣರವರ ಪಾರ್ಥಿವ ಶರೀರದ ದರ್ಶನ ಪಡೆಯುವ ಸಂಬಂಧ ಜನರು ಬೆಳಗ್ಗೆ 9.30 ರಿಂದಲೇ ಕಾಯುತ್ತಿದ್ದರು. ಅಕ್ಕಪಕ್ಕದ ಕಟ್ಟಡದಲ್ಲಿ ನಿಂತು ದರ್ಶನ ಪಡೆದುಕೊಂಡರು. ಇನ್ನು ಯಾವುದೇ ಅಹಿತಕರ ಘಟನೆ ಜರುಗದಂತೆ ತಡೆಯುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು. ಇನ್ನು ವಾಹನ ಸಂಚಾರವನ್ನು ನಿಯಂತ್ರಣ ಮಾಡುವ ಸಂಬಂಧ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಏಕ ಪಥವನ್ನಾಗಿ ಮಾಡಲಾಗಿತ್ತು.

--------

11ಕೆಆರ್ ಎಂಎನ್ 1,2,3,4,5.ಜೆಪಿಜಿ

1,2.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಪಾರ್ಥಿವ ಶರೀರ ಹೊತ್ತ ವಾಹನ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಂಚಾರಿಸಿತು.

3,4.ರಾಮನಗರದ ಐಜೂರು ವೃತ್ತದಲ್ಲಿ ಎಸ್.ಎಂ.ಕೃಷ್ಣರವರ ಅಂತಿಮ ದರ್ಶನ ಪಡೆಯುತ್ತಿರುವ ಸಾರ್ವಜನಿಕರು.

5.ರಾಮನಗರದಲ್ಲಿ ರಸ್ತೆ ಬದಿಯ ಕಟ್ಟಡಗಳ ಮೇಲೆ ನಿಂತ ಜನರು ಎಸ್.ಎಂ.ಕೃಷ್ಣರವರ ಅಂತಿಮ ದರ್ಶನ ಪಡೆಯುತ್ತಿರುವುದು.