ರಾಮನಗರ: ಸುಪ್ರಸಿದ್ದ ಚನ್ನಪಟ್ಟಣದ ಬೊಂಬೆಗಳನ್ನು ಒಂದೇ ಜಿಲ್ಲೆಗೆ ಸೀಮಿತಗೊಳಿಸಬಾರದು. ಚನ್ನಪಟ್ಟಣದ ಬೊಂಬೆಗಳಿಗೆ ಅದರದ್ದೇ ಆದ ಇತಿಹಾಸವಿದೆ. ಬೊಂಬೆಗಳನ್ನು ಉಳಿಸಿ ಬೆಳಸಬೇಕು ಎಂದು ಕೇಂದ್ರ ಸರ್ಕಾರದ ಅಭಿವೃದ್ಧಿ ಆಯುಕ್ತರಾದ ಎಸ್.ಸಿ.ದೇವರಮನಿ ಅಭಿಪ್ರಾಯಪಟ್ಟರು.
ಜಾನಪದ ಲೋಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಚನ್ನಪಟ್ಟಣದ ಬೊಂಬೆಗಳು, ಕನ್ನಡದ ಅಸ್ಮಿತೆ ಕುರಿತು ಆಯೋಜಿಸಿದ್ದ ಒಂದು ದಿನದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಚನ್ನಪಟ್ಟಣದ ಬೊಂಬೆಗಳು ಅಮೆರಿಕಾದ ವೈಟ್ ಹೌಸ್, ಅಲ್ಲಿನ ಅಧ್ಯಕ್ಷರ ಮನೆ ಸೇರಿದಂತೆ ಪ್ರಪಂಚದ ಪ್ರಮುಖರ ಮನೆ, ಭವನಗಳನ್ನು ಅಲಂಕರಿಸಿವೆ. ಇಂದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ಹೆದ್ದಾರಿಗಳ ಅಕ್ಕಪಕ್ಕದಲ್ಲಿಯೂ ಚನ್ನಪಟ್ಟಣದ ಗೊಂಬೆಗಳು ಮಾರಾಟ ಮಾಡಲಾಗುತ್ತಿದೆ. ಕುಶಲಕರ್ಮಿಗಳಿಗೆ ಮತ್ತಷ್ಟು ಮಾರುಕಟ್ಟೆ ಕಲ್ಪಿಸಿಕೊಡಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಬೊಂಬೆಯ ಅರಿವಿನ ಕೇಂದ್ರವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. ಅರಿವಿನ ಕೇಂದ್ರದಲ್ಲಿ ಐಟಿ - ಬಿಟಿ ಕಂಪನಿಗಳ ಸಿಬ್ಬಂದಿಗಳು ತಮ್ಮ ರಜಾ ಸಮಯದಲ್ಲಿ ಇಲ್ಲಿ ಬಂದು ತಮ್ಮ ಕೈಯಿಂದಲೇ ಗೊಂಬೆಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುವ ಮೂಲಕ ಗೊಂಬೆ ತಯಾರಿಕೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಪಿ.ವಿ. ನಿರಂಜನರಾಧ್ಯ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಅಸ್ಮಿತೆ ಹಾಗೂ ಕನ್ನಡಿಗರ ಬದುಕನ್ನು ಕಟ್ಟಿಕೊಡುವ ಪ್ರಾಧಿಕಾರವಾಗಿದೆ. ಅಷ್ಟೇ ಮುಖ್ಯವಾಗಿ ಕನ್ನಡ ಭಾಷೆಯನ್ನು ಹಾಗೂ ಬೇರೆ ಬೇರೆ ಆಯಾಮಗಳಲ್ಲಿ ಕರ್ನಾಟಕವನ್ನು ಅಭಿವೃದ್ಧಿಗೊಳಿಸುವಂತಹ ಒಂದು ಪ್ರಾಧಿಕಾರ. ಇದಕ್ಕೆ ಕಾನೂನಿನ ಮಾನ್ಯತೆ ಇದೆ ಎಂದರು.
ಚನ್ನಪಟ್ಟಣದ ಬೊಂಬೆಗಳು ಬರೀ ಚನ್ನಪಟ್ಟಣದ ಅಸ್ಮಿತೆ ಮಾತ್ರವಲ್ಲದೆ ಕರ್ನಾಟಕದ ಅಸ್ಮಿತೆಯಾಗಿದೆ. ಈ ಬೊಂಬೆಗಳ ಹಿಂದೆ ಬದುಕಿದೆ. ಈ ಕುರಿತು ಒಂದು ಶಿಬಿರವನ್ನು ಮಾಡಿ ಬೊಂಬೆಗಳ ಅಸ್ಮಿತೆಯನ್ನು ಅರ್ಥ ಮಾಡಿಕೊಂಡು ಇದನ್ನು ಸರ್ಕಾರ ಯಾವ ರೀತಿ ಪ್ರೋತ್ಸಾಹಿಸಬೇಕು ಎಂಬುದರ ಕುರಿತು ಹಾಗೂ ಬೊಂಬೆಗಳನ್ನು ಉಳಿಸಿ, ಬೆಳೆಸುವ ಕುರಿತು ಹಾಗೂ ಆಧುನಿಕ ಜಗತ್ತಿನಲ್ಲಿ ಹೊಸ ರೀತಿಯಾಗಿ ಕಟ್ಟಿಕೊಳ್ಳುವ ಕುರಿತು ಆಲೋಚನೆ ಮಾಡಬೇಕು. ಬೇರೆ ಬೇರೆ ದೇಶಗಳಿಂದ ಬಂದು ಅದನ್ನು ನೋಡಿ ಖರೀದಿ ಮಾಡುವಂತಹ ಬೊಂಬೆಗಳ ಮಾಲ್ ಗಳನ್ನು ನಿರ್ಮಿಸುವ ಕುರಿತು ಚರ್ಚಿಸಬೇಕು ಎಂದರು.
ಡಾ. ಶಿವರಾಜ್ ಬ್ಯಾಡರಹಳ್ಳಿ "ಚನ್ನಪಟ್ಟಣದ ಗೊಂಬೆಗಳು: ಕನ್ನಡದ ಅಸ್ಮಿತೆ " ಉಪನ್ಯಾಸ ನೀಡಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ, ಆರ್ಟಿಸನ್ ಫ್ರೈಡ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಸಿಇಒ ಶಾಹಿದಾ ನೂರಿ, ಹಿರಿಯ ಕುಶಲಕರ್ಮಿ ಸಿದ್ದರಾಮಯ್ಯ ಮಾತನಾಡಿದರು. ಹಿರಿಯ ಪತ್ರಕರ್ತ ಸು.ತ. ರಾಮೇಗೌಡ, ಮುನಿಯಪ್ಪನ ದೊಡ್ಡಿಯ ಶ್ರೀ ಕೆಂಗಲ್ ಆಂಜನೇಯ ಕುಶಲ ಕರ್ಮಿಗಳ ಟ್ರಸ್ಟನ ಶ್ರೀನಿವಾಸ ಮೂರ್ತಿ ಸೇರಿದಂತೆ ಜಾನಪದ ಲೋಕದ ಸಿಬ್ಬಂದಿ, ಡಿಪ್ಲೊಮಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೊಟೋ೧೫ಸಿಪಿಟಿ೧೦:ಜಾನಪದ ಲೋಕದಲ್ಲಿ ಆಯೋಜಿಸಿದ್ದ "ಚನ್ನಪಟ್ಟಣದ ಬೊಂಬೆಗಳು, ಕನ್ನಡದ ಅಸ್ಮಿತೆ " ಕುರಿತ ಶಿಬಿರವನ್ನು ಕೇಂದ್ರ ಸರ್ಕಾರದ ಅಭಿವೃದ್ಧಿ ಆಯುಕ್ತರಾದ ದೇವರಮನಿ ಉದ್ಘಾಟಿಸಿದರು. ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ,ಹಿರಿಯ ಪತ್ರಕರ್ತ ಸು.ತ. ರಾಮೇಗೌಡ ಇತರರಿದ್ದರು.