ಸಾರಾಂಶ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಬಡವರು, ಕೃಷಿಕರು, ಕೂಲಿ ಕಾರ್ಮಿಕರ ಜೀವನಮಟ್ಟವನ್ನು ಆರ್ಥಿಕವಾಗಿ ಸುಧಾರಿಸುವುದೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ತಿಳಿಸಿದರು.ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಧರ್ಮಸ್ಥಳ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಮಾಧ್ಯಮದ ಮಿತ್ರರರಿಗಾಗಿ ನೀಡಿರುವ ನೆನಪಿನ ಕಾಣಿಕಗಳನ್ನು ವಿತರಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಹೂಳು ತೆಗೆಯುವುದು, ದುರ್ಬಲರಿಗೆ, ಅಶಕ್ತರಿಗೆ, ಮಹಿಳೆಯರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಡಿಮೆ ಬೆಲೆ ಬಡ್ಡಿಯಲ್ಲಿ ಆರ್ಥಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಜೀವನ ಮಟ್ಟ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನವನ್ನು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಅಲ್ಲದೆ ಮಹಿಳೆಯರನ್ನು, ಕೃಷಿಕರನ್ನು, ಕೂಲಿಕಾರ್ಮಿಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದರ ಜೊತೆಗೆ ಕೃಷಿ, ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ವಿವಿಧ ಯೋಜನೆಗಳಾದ ಪರಿಸರ ಸಂರಕ್ಷಣೆ, ಸ್ವಚ್ಛತೆ, ಕೆರೆಗಳ ಹೂಳೆತ್ತುವ ಜತೆಗೆ ಮಹಿಳಾ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವಲ್ಲಿ ಧರ್ಮಸ್ಥಳ ಸಂಸ್ಥೆ ಅಗತ್ಯ ಸಹಕಾರ ನೀಡುತ್ತಿದೆ. ತಾಲೂಕಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂದರು.