ಶಿಷ್ಟ ಶಕ್ತಿಯ ರಕ್ಷಣೆಯೇ ನವರಾತ್ರಿ ಮಹೋತ್ಸವದ ಉದ್ದೇಶ: ಸಿ.ಟಿ. ರವಿ

| Published : Oct 05 2024, 01:32 AM IST

ಶಿಷ್ಟ ಶಕ್ತಿಯ ರಕ್ಷಣೆಯೇ ನವರಾತ್ರಿ ಮಹೋತ್ಸವದ ಉದ್ದೇಶ: ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸಮಾಜದಲ್ಲಿ ದುಷ್ಟ ಶಕ್ತಿಗಳು ದೂರವಾಗಿ ಸಜ್ಜನ ಶಕ್ತಿಯ ವಿಜಯವಾಗಬೇಕು. ದುಷ್ಟ ಶಕ್ತಿಯ ದಮನ, ಶಿಷ್ಟ ಶಕ್ತಿಯ ರಕ್ಷಣೆ ಮಾಡುವುದೇ ನವರಾತ್ರಿ ಮಹೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಬೀಕನಹಳ್ಳಿ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಮಾಜದಲ್ಲಿ ದುಷ್ಟ ಶಕ್ತಿಗಳು ದೂರವಾಗಿ ಸಜ್ಜನ ಶಕ್ತಿಯ ವಿಜಯವಾಗಬೇಕು. ದುಷ್ಟ ಶಕ್ತಿಯ ದಮನ, ಶಿಷ್ಟ ಶಕ್ತಿಯ ರಕ್ಷಣೆ ಮಾಡುವುದೇ ನವರಾತ್ರಿ ಮಹೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಬೀಕನಹಳ್ಳಿಯ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ 73ನೇ ವರ್ಷದ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ದೇವಿ ಆರಾಧಿಸುವ ಮೂಲಕ ನಮ್ಮೊಳಗಿರುವ ದುಷ್ಟ ಶಕ್ತಿ ದೂರವಾಗಬೇಕು. ಧರ್ಮ, ನೀತಿ, ನೈತಿಕತೆ ಇವು ಬರಬೇಕಾದರೆ ಶಿಷ್ಟ ಶಕ್ತಿ ರಕ್ಷಣೆಯಾಗಬೇಕು. ದೇಶದಲ್ಲಿರುವ ವಿರೋಧಿಗಳೆಲ್ಲರೂ ನಾಶವಾಗಿ ಸಂರಕ್ಷಿತವಾಗಬೇಕು. ಧರ್ಮ ಶಾಸ್ತ್ರದ ರಕ್ಷಣೆಗೆ ಶಸ್ತ್ರದ ಅವಶ್ಯಕತೆ ಇದೆ ಎಂದು ಹೇಳಿದರು.

ರಾಕ್ಷಸಿ ಶಕ್ತಿ ಸಂಹಾರಕ್ಕೆ ಎಲ್ಲಾ ದೇವತೆಗಳು ತಮ್ಮ ಶಕ್ತಿ ಧಾರೆಯೆರೆದು ವಿವಿಧ ರೂಪದಲ್ಲಿ ಸಮಾಜದ ರಕ್ಷಣೆ ಮಾಡಿರುವ ಕುರಿತು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ ಎಂದರು.

ಪರ ಸ್ತ್ರೀಯರ ಮೇಲೆ ಕಣ್ಣಾಕುವುದು, ಪರಧನದ ಮೇಲೆ ಗುರಿಯಾಗಿಸುವುದು ಸೇರಿದಂತೆ ವಿವಿಧ ರೀತಿಯಾಗಿ ರಾಕ್ಷಸಿ ಮನಸ್ಥಿತಿ ತಲೆ ಎತ್ತಿದೆ. ಧರ್ಮದ ರಕ್ಷಣೆಗೆ ಪೂರ್ವಿಕರು ಶಸ್ತ್ರ ಹಿಡಿದು ಹೋರಾಡಿದ್ದನ್ನು ಇತಿಹಾಸದಲ್ಲಿ ನೋಡಿದ್ದು ಇದರ ಪರ್ಯಾಯ ವ್ಯವಸ್ಥೆಯೇ ದಸರಾ ಎಂದು ಹೇಳಿದರು.

ದೇಶದಲ್ಲಿ ಸಿದ್ಧಾಂತ, ಅಭಿಪ್ರಾಯ ಭೇದ, ರಾಜಕೀಯ ಪಕ್ಷಗಳು ಇರಬಹುದು. ದೇಶಕ್ಕೆ ಯಾರು ಶತ್ರುಗಳಾಗಿ ಇರುತ್ತಾರೆಯೋ ಅವರು ದೇಶವಾಸಿಗಳಿಗೂ ಶತ್ರುಗಳಾಗಿರುತ್ತಾರೆ. ದೇಶಕ್ಕೆ ಮಿತ್ರರಾದವರು ದೇಶ ವಾಸಿಗಳಿಗೆ ಮಿತ್ರರಾಗಿದ್ದು ಈ ನಿಟ್ಟಿನಲ್ಲಿ ನವರಾತ್ರಿ ಉತ್ಸವಗಳು ಜನರಿಗೆ ಸತ್ಯದ ದರ್ಶನ ಮಾಡುತ್ತಿವೆ ಎಂದು ಕರೆ ನೀಡಿದರು.

ದೇಶಕ್ಕೆ ಇರುವ ಶತ್ರುಗಳ ಧಮನವಾಗಬೇಕು. ನಮ್ಮೊಳಗಿರುವ ದುಷ್ಟ ಭಾವ ದೂರವಾಗಬೇಕು. ಇದಾಗದೇ ಇದ್ದರೆ ದೇಶ ಉಳಿಯಲು ಸಾಧ್ಯವಿಲ್ಲ. ಇದರಿಂದ ನವರಾತ್ರಿ ಉತ್ಸವ ಸಂಭ್ರಮದಿಂದ ಆಚರಿಸುವುದು ಕನಸಿನ ಮಾತಾಗುತ್ತದೆ ಎಂದರು.

ಭಾರತ್ ಮಾತಾ ಕೀ ಜೈ ಎಂದು ದೇಶಕ್ಕೆ ಗುಣಗಾನ ಮಾಡಿ ಜಯಕಾರ ಹಾಕುವುದು ತಪ್ಪು ಅಂತ ಯಾರಿಗೆ ಅನ್ನಿಸುತ್ತದೆಯೋ ಅವರನ್ನು ಭಾರತೀಯರು ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ದೇಶದ ಪ್ರಶ್ನೆ ಬಂದಾಗ ನಾವೆಲ್ಲಾ ಒಂದಾಗಬೇಕು. ಧರ್ಮದ ಪ್ರಶ್ನೆ ಬಂದಾಗ ಜಾತಿಯನ್ನು ಮೀರಿ ಸನಾತನಿಯರಾಗಿ, ಹಿಂದೂಗಳಾಗಿ ಎದ್ದು ನಿಲ್ಲಬೇಕೆಂದು ಎಚ್ಚರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಸಾಧು ವೀರಶೈವ ಮಹಾಸಭಾದ ಅಧ್ಯಕ್ಷ ಎಂ.ಎಸ್ ನಿರಂಜನ್ ಮಾತನಾಡಿ, ಧರ್ಮದ ಆಧಾರದಲ್ಲಿ ಭಾರತ ದೇಶವನ್ನು ಪೂರ್ವಜರು ಕಟ್ಟಿದ್ದಾರೆ. ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುವ ಪದ್ಧತಿ ಹಿಂದೂ ಧರ್ಮದಲ್ಲಿದೆ. ನವರಾತ್ರಿ ಉತ್ಸವಗಳಿಗೆ ಸರ್ವರೂ ಶ್ರಮಿಸಿದಾಗ ಯಶಸ್ವಿಯಾಗಲು ಸಾಧ್ಯ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರ್ ಮಾತನಾಡಿ, 17ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ದಸರಾ ನವರಾತ್ರಿ ಮಹೋತ್ಸವ ಆಚರಿಸುತ್ತ ಬಂದಿದ್ದರು. ವಿಶ್ವ ವಿಖ್ಯಾತ ಮೈಸೂರು ನಾಡ ದಸರಾ ಹಬ್ಬ ಆಚರಿಸುವ ಮಾದರಿಯಲ್ಲಿ ಬೀಕನಹಳ್ಳಿಯಲ್ಲಿ ದಸರಾ ಉತ್ಸವ ಆಚರಣೆ ಆಗುತ್ತಿರುವುದನ್ನು ಶ್ಲಾಘಿಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಷಾ ದಸರಾ ಆರಂಭಿಸಿರುವುದು ವಿಷಾಧನೀಯ, ಊರೆಲ್ಲಾ ಉಗಾದಿ ಮಾಡಿದರೆ ಅಡ್ನಾಡಿ ಅಮಾವಾಸ್ಯೆ ಮಾಡಿದ ಎಂಬಂತಾಗಿದೆ. ದುಷ್ಟಶಕ್ತಿ ವಿರೋಧಿಸಿ ಶಿಷ್ಟ ರಕ್ಷಣೆ ಮಾಡಿ ವಿಜೃಂಭಿಸುವುದೇ ದಸರಾ ಆಚರಣೆಯ ದ್ಯೇಯ ಎಂದರು.

ಚಾಮುಂಡೇಶ್ವರ ಸುಕ್ಷೇತ್ರದ ಅಧ್ಯಕ್ಷ ಬಿ.ಪಿ. ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಗುರುಬಸಪ್ಪ, ಯೋಗಾನಂದ್, ಸೋಮೇ ಗೌಡ, ನಾಗರಾಜ್, ಪರಮೇಶ್ವರಪ್ಪ, ಎಚ್.ಪಿ. ಮಂಜೇಗೌಡ ಹಾಗೂ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

4 ಕೆಸಿಕೆಎಂ 4

ಚಿಕ್ಕಮಗಳೂರು ನಗರ ಹೊರ ವಲಯದ ಬೀಕನಹಳ್ಳಿಯ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ ದಸರಾ ಮಹೋತ್ಸವಕ್ಕೆ ಸಿ.ಟಿ.ರವಿ ಚಾಲನೆ ನೀಡಿದರು. ನಿರಂಜನ್‌, ಮಂಜೇಗೌಡ, ನಂಜಪ್ಪ, ಗುರುಬಸಪ್ಪ, ಯೋಗಾನಂದ್‌ ಇದ್ದರು.