ಕನ್ನಡಪ್ರಭ ವಾರ್ತೆ ಮುಧೋಳ

ಮನುಷ್ಯನ ಅಂತರಾಳದಲ್ಲಿ ಸಹಜವಾಗಿಯೇ ಇರುವ ತುಡಿತ ಕಾವ್ಯದಲ್ಲಿ ಹೊರಹೊಮ್ಮುವುದು ಒಂದು ಅಪೂರ್ವ ಪ್ರಕ್ರಿಯೆ. ಜೀವನೋಲ್ಲಾಸದ ಈ ತುಡಿತವನ್ನು ಬದುಕಿನುದ್ದಕ್ಕೂ ಹಮ್ಮಿಕೊಳ್ಳುವುದು ಧನ್ಯತೆಯ ಸಂಗತಿ. ಕವಿಗಳು ಕಾವ್ಯದ ಗುಣಲಕ್ಷಣ ಅರಿತುಕೊಂಡು ಬರೆಯಬೇಕು. ಬರೆದಂತೆಯೇ ಅದನ್ನು ಅಚ್ಚುಕಟ್ಟಾಗಿ ಎಲ್ಲರಿಗೂ ತಿಳಿಯುವ ಹಾಗೆ ಪ್ರಸ್ತುತ ಪಡಸಬೇಕು. ಕಾವ್ಯ ಅದೊಂದು ಕಲೆ, ಪರಿಶ್ರಮ ಇಲ್ಲದೆಯೇ ಅದು ಒಲಿಯೋದಿಲ್ಲ ಎಂದು ಹಿರಿಯ ಸಾಹಿತಿ, ಖ್ಯಾತ ವೈದ್ಯ ಡಾ.ಶಿವಾನಂದ ಕುಬಸದ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಮುಧೋಳ ತಾಲೂಕು ಘಟಕ, ಶಶಿ ಟ್ರಸ್ಟ್ ಮುಧೋಳ ಹಾಗೂ ದಾನಮ್ಮದೇವಿ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ದಾನಮ್ಮದೇವಿ ಮಹಿಳಾ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾಲೇಜು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕವಿಯಾದವನಿಗೆ ತಾನಿರುವ ಪರಿಸರದ ಜ್ಞಾನವಿರಬೇಕು, ಸುತ್ತಲಿನ ಘಟನಾವಳಿಗಳು, ಆ ನೆಲದ ಇತಿಹಾಸ ಗೊತ್ತಿರಬೇಕು ಅಂದಾಗ ಸುಂದರ ಹಾಗೂ ಮನಮುಟ್ಟುವ ಕವನಗಳು ಹೊರಬರುತ್ತವೆ. ಕವನಗಳಿಗಿಂತ ಜನಮನದಲ್ಲಿ ಚಿಂತನೆಯ ಹೊಸಬೀಜ ಬಿತ್ತುವಂತಹ ಕವನಗಳು ಇಂದಿನ ಯುವ ಕವಿಗಳು ಬರೆಯುವಂತರಾಗಬೇಕು. ರಂಜನೆ, ಚಿಂತನೆ ಮತ್ತು ಪರಿವರ್ತನೆ ತರುವುದೇ ಕವಿತೆಯ ಮೂಲ ಉದ್ದೇಶ, ತಮ್ಮ ಜೀವನಾನುಭವಗಳನ್ನು ಮತ್ತು ಮನಸ್ಸಿನ ಭಾವನೆಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತ ಪಡಿಸಬಹುದು, ಬರೆದಿರುವ ಕವಿತೆಗಳನ್ನು ಕೇಳುಗರ ಮನಸ್ಸಿಗೆ ಹಿತವನ್ನುಂಟು ಮಾಡಬೇಕು. ಕವಿತೆಗೆ ಅರ್ಥ ಇರಬೇಕು ಜೊತೆಗೆ ಸಮಾಜಕ್ಕೆ ಸಂದೇಶ ನೀಡುವಂತೆ ಇರಬೇಕೆಂದು ಹೇಳಿದರು.

ಕವಿಗೋಷ್ಠಿ ಅಧ್ಯಕ್ಷತೆವಹಿಸಿದ್ದ ವಕೀಲ ಪ್ರಕಾಶ ವಸ್ತ್ರದ ಮಾತನಾಡಿ, ಒಂದು ದೀಪ ಮನೆ ಬೆಳಗಿದರೆ, ಕವಿತೆ ಮನ ಅರಳುವಂತಿರಬೇಕು. ಕವಿತೆ ಓದುವ, ಬರೆಯುವ ಕಣ್ಣು ಇರಬೇಕು.ಕವಿಯಾದವ ತಮ್ಮ ಕವಿತ್ವದ ಗರ್ಭಕೋಶ ಕೆಡದಂತೆ ನೋಡಿಕೊಳ್ಳಬೇಕು. ಇಂತಹ ಕವಿಗೋಷ್ಠಿಗಳು ಯುವಕವಿಗಳನ್ನು ಬೆಳಕಿಗೆ ತರುವ ಸೂಕ್ತ ವೇದಿಕೆಗಳಾಗಿವೆ. ಸುಖದಿಂದ ಕವಿತೆ ಹೊರಹೊಮ್ಮುವುದಿಲ್ಲ. ಕಷ್ಟ ಮತ್ತು ಅನುಭವದಿಂದ ಬರುತ್ತವೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಪತ್ರಕರ್ತ ವಿಶ್ವನಾಥ ಮುನವಳ್ಳಿ ಮಾತನಾಡಿ, ಮಾದ್ಯಮ ಕ್ಷೇತ್ರದಲ್ಲಿ ಕವಿಗಳಿಗೆ ತಮ್ಮ ಸ್ವರಚಿತ ಕವನಗಳ ಪ್ರಕಟಣೆ ಮತ್ತು ಪ್ರಸಾಕಕ್ಕೆ ಸಾಕಷ್ಟು ಅವಕಾಶಗಳಿವೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು.


ಕಸಾಪ ಅಧ್ಯಕ್ಷ ಆನಂದ ಪೂಜಾರಿ ಆಶಯ ನುಡಿಗಳನ್ನಾಡಿದರು. ಶಶಿ ಟ್ರಸ್ಟ್ ಪ್ರಧಾನ ಸಂಚಾಲಕ ಚಂದ್ರಶೇಖರ ದೇಸಾಯಿ ಸ್ವಾಗತಿಸಿದರು. ಪ್ರೊ.ಮಲ್ಲಿಕಾರ್ಜುನ ಎಂ. ನಿರೂಪಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎನ್.ಎನ್. ಬಾರಕೇರ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಬಡಿಗೇರ ಮತ್ತು ಸಂಗಡಿಗರು ಪ್ರರ್ಥಿಸಿ, ನಾಡಗೀತೆ ಹೇಳಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ಹೊಸಮನಿ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಪರೀಟ, ಪ್ರೊ.ಕೆ.ಎಲ್. ಗುಡಿಮನಿ, ಪಿ.ಬಿ. ಹಿರೇಮಠ, ಬಸವರಾಜ ಬಳ್ಳಾರಿ, ಆನಂದ ಕೊಣ್ಣೂರ, ಕೃಷ್ಣಾ ಅರಕೇರಿ, ಎ.ಬಿ. ವಿಜಾಪೂರ, ಅನಿತಾ ಪಾಟೀಲ, ಬಿ.ಎಚ್. ಬೀಳಗಿ ಸೇರಿದಂತೆ ಇತರರು ಉಪಸ್ಥಿತರಿರುವರು. ಕಾಲೇಜು ಕವಿಗೋಷ್ಠಿಯಲ್ಲಿ 15 ವಿದ್ಯಾರ್ಥಿನಿಯರು, 6 ಉಪನ್ಯಾಸಕರು ಸ್ವರಚಿತ ಕವನ ವಾಚನ ಮಾಡಿದರು.