ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ನಗರದ ಆಯಾ ವಾರ್ಡ್ ಗಳಲ್ಲಿ ಕ್ಯೂಆರ್ಕೋಡ್ ಫಲಕ ಅಳವಡಿಸಲಾಗಿದೆ. ಈ ಮೂಲಕ ಜನರು ತಮ್ಮ ದೂರುಗಳನ್ನು ದಾಖಲಿಸಲು ಹಾಗೂ ಯಾವ ರೀತಿಯ ಸಮಸ್ಯೆಗಳು ಹೆಚ್ಚಾಗಿ ಬರುತ್ತಿವೆ ಎಂಬುದನ್ನು ಪರಿಶೀಲಿಸಲು ಅನುಕೂಲವಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಅಧಿಕಾರಿಗಳು ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿ. ಹಿಂದೆ ಪ್ರತಿ ಸೋಮವಾರ ಜನಸಂಪರ್ಕ ಕಾರ್ಯಕ್ರಮ ನಡೆಯುತ್ತಿತ್ತು. ಇದೀಗ ಅದನ್ನು ಪ್ರಜಾಸೇವೆಯಾಗಿ ಪರಿವರ್ತಿಸಲಾಗಿದ್ದು, ಇದರಿಂದ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆಯಲು ಅನುಕೂಲವಾಗಲಿದೆ ಎಂದರು.

ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ನಗರದ ಆಯಾ ವಾರ್ಡ್ ಗಳಲ್ಲಿ ಕ್ಯೂಆರ್ಕೋಡ್ ಫಲಕ ಅಳವಡಿಸಲಾಗಿದೆ. ಈ ಮೂಲಕ ಜನರು ತಮ್ಮ ದೂರುಗಳನ್ನು ದಾಖಲಿಸಲು ಹಾಗೂ ಯಾವ ರೀತಿಯ ಸಮಸ್ಯೆಗಳು ಹೆಚ್ಚಾಗಿ ಬರುತ್ತಿವೆ ಎಂಬುದನ್ನು ಪರಿಶೀಲಿಸಲು ಅನುಕೂಲವಾಗುತ್ತಿದೆ. ವಾರ್ಡ್ ಗಳಲ್ಲಿ ಕ್ಯೂಆರ್ಕೋಡ್ ಫಲಕ ಅಳವಡಿಸಿದ ಮೊದಲ ನಗರಸಭೆ ಎಂಬ ಹೆಗ್ಗಳಿಕೆ ನಂಜನಗೂಡು ನಗರಸಭೆಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.

ಸಹಕಾರ ಮುಖ್ಯ: ಸ್ಮಿತಾ ರಾಮು

ತಹಸೀಲ್ದಾರ್ ಸ್ಮಿತಾ ರಾಮು ಮಾತನಾಡಿ, ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಜನರ ಸಹಕಾರವೂ ಮುಖ್ಯ. ಪೋರ್ಟಲ್ ಗಳಲ್ಲಿ ಈಗಾಗಲೇ ದೂರು ದಾಖಲಿಸಿರುವವರು ಅದೇ ದೂರನ್ನು ಪುನರಾವರ್ತಿಸಬಾರದು. ಅಲ್ಲದೆ, ತಮ್ಮ ವ್ಯಾಪ್ತಿಗೆ ಸಂಬಂಧಿಸದ ದೂರುಗಳನ್ನು ಸಲ್ಲಿಸುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೇಶವಮೂರ್ತಿ, ತಾಪಂ ಇಒ ಜೆರಾಲ್ಡ್ ರಾಜೇಶ್, ನಗರಸಭೆ ಪೌರಾಯುಕ್ತ ಬಸವರಾಜು, ಸಿ.ಎಂ. ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರಸಭಾ ಮಾಜಿ ಸದಸ್ಯರಾದ ಗಾಯತ್ರಿ ಹಾಗೂ ಕಪಿಲೇಶ್ ವಿವಿಧ ಇಲಾಖೆ ಗಳ ಅದಿಕಾರಿಗಳು ಇದ್ದರು.

ಮಾಜಿ ನಗರ ಸಭಾ ಸದಸ್ಯರಿಂದ ದೂರು:

ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ನಗರ ಸಭಾ ಮಾಜಿ ಸದಸ್ಯ ಕಪಿಲೇಶ್ ಸ್ವತಃ ದೂರು ಸಲ್ಲಿಸುವ ಮೂಲಕ ಗಮನ ಸೆಳೆದರು.