ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಳಮಟ್ಟದಿಂದ ಆಡಳಿತವನ್ನು ಬಲಪಡಿಸುವ ಮತ್ತು ಸಾಮಾನ್ಯ ಜನರಿಗೆ ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ‘ಸುಶಾಸನ ಸಪ್ತಾಹ ಅಭಿಯಾನ’ದ ಮುಖ್ಯ ಗುರಿ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಸೋಮವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್‌ನ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಸುಶಾಸನ ಸಪ್ತಾಹ -ಪ್ರಶಾಸನ ಗ್ರಾಮಗಳ ಕಡೆಗೆ 2024ರ ಉತ್ತಮ ಆಡಳಿತ ವಾರ ಕಾರ್ಯಕ್ರಮದ ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉತ್ತಮ ಆಡಳಿತ ವ್ಯವಸ್ಥೆ
ಉತ್ತಮ ಆಡಳಿತ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಧ್ಯೇಯ. ದಕ್ಷ ಆಡಳಿತದಿಂದ ದೇಶದ ಸಾಮಾಜಿಕ-ಆರ್ಥಿಕ-ರಾಜಕೀಯ ಹಾಗೂ ಶೈಕ್ಷಣಿಕ ಪ್ರಗತಿ ಸಾಧ್ಯ. ಸಾಮಾಜಿಕ ಹಕ್ಕುಗಳೆಂದರೆ ಕೇವಲ ವಸತಿ, ಆಹಾರ ಮತ್ತು ಶಿಕ್ಷಣ ನೀಡುವುದಷ್ಟೇ ಅಲ್ಲ, ವೈಯಕ್ತಿಕ ಭದ್ರತೆ ನೀಡಿ, ಹಕ್ಕುಗಳನ್ನು ರಕ್ಷಿಸುವುದು ಆಗಿದೆ. ತಳಮಟ್ಟದಿಂದ ಮೇಲ್ಮಟ್ಟದವರೆಗೂ ಉತ್ತಮ ಆಡಳಿತ ನೀಡಿದಾಗ ಜನರ ಕಷ್ಟಗಳು ದೂರವಾಗುತ್ತದೆ ಎಂದರು.ತಂತ್ರಜ್ಞಾನದ ಬಳಕೆಯಿಂದ ಭ್ರಷ್ಟಾಚಾರ ಇಳಿಮುಖವಾಗಲಿದೆ ಆದ್ದರಿಂದ ಯೋಜನೆಗಳ ಜಾರಿಯಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಆಶಯದಂತೆ ಆನ್‌ಲೈನ್ ಹಾಗೂ ಇ-ಆಡಳಿತದ ಮೂಲಕವೇ ಬಹುತೇಕ ಸಾರ್ವಜನಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವುದು. ಸಕಾಲ ಯೋಜನೆ ಮೂಲಕ ದೂರುಗಳನ್ನು ಸ್ವೀಕರಿಸಿ ತ್ವರಿತವಾಗಿ ಪರಿಹರಿಸಲಾಗುತ್ತಿದೆ ಎಂದರು.ಮಾನವ ಹಕ್ಕುಗಳ ರಕ್ಷಣೆಉತ್ತಮ ಆಡಳಿತದಿಂದ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯವಾಗಲಿದೆ.ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತಮ ಆಡಳಿತದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರಿ ಸೇವೆ ದೇಶ ಸೇವೆಯಾಗಿದೆ. ಶಿಕ್ಷಣ, ತಂತ್ರಜ್ಞಾನ, ಕೌಶಲ್ಯ, ಆರೋಗ್ಯದ ಸವಲತ್ತುಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಉತ್ತಮ ಆಡಳಿತ ಸಪ್ತಾಹ (ಸುಶಾಸನ್ ಸಪ್ತಾಹ)ವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಮೂಲಕ ಹಳ್ಳಿಗಳಿಗೆ ರವಾನಿಸುವುದು ಮತ್ತು ಇಡೀ ವ್ಯವಸ್ಥೆಯನ್ನು ''''''''ಉತ್ತಮ ಆಡಳಿತ'''''''' ಪರಿಕಲ್ಪನೆ ಸಾಕಾರಗೊಳಿಸುವುದು ಆಡಳಿತ ವರ್ಗದ ಮೇಲಿದೆ ಅದನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳಿಗೆ ತಿಳಿಸಿದರು.ಆಡಳಿತದಲ್ಲಿ ದಕ್ಷತೆ ಮುಖ್ಯ
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ ಮಾತನಾಡಿ, ಒಂದು ದೇಶದ ಪ್ರಗತಿ ಸಾಧಿಸಲು ಇಲಾಖೆ ಡಿ. ದರ್ಜೆ ನೌಕರ, ಸಹಾಯಕರಿಂದ ಮುಖ್ಯ ಅಧಿಕಾರಿಯವರೆಗೂ ಜರುಗುವ ದಕ್ಷ ಕಾರ್ಯದಿಂದ ಮಾತ್ರ ಸಾಧ್ಯವಾಗುತ್ತದೆ.ಪ್ರತಿಯೊಬ್ಬ ಅಧಿಕಾರಿ ನಿಷ್ಠೆ ಹಾಗೂ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ಕಚೇರಿಗಳಿಗೆ ಬರುವ ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿ ಅವರಿಗೆ ಅವರ ಸಮಸ್ಯೆಗಳನ್ನು ಕಾನೂನು ರೀತ್ಯಾ ಪರಿಹರಿಸಬೇಕು. ಅಧಿಕಾರಿಗಳು ಕಚೇರಿ ಕರ್ತವ್ಯದ ಬಗ್ಗೆ ಸಮಯ ಪ್ರಜ್ಞೆ ಹೊಂದಿರಬೇಕು. ಸಕಾಲದಿಂದ ಬರುವ ಅರ್ಜಿಗಳಿಗೆ ಅಧಿಕಾರಿಗಳು ತ್ವರಿತವಾಗಿ ಪರಿಹಾರ ನೀಡಬೇಕು ಎಂದು ತಿಳಿಸಿದರು.ಕಾರ್ಯಗಾರದಲ್ಲಿ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಯೋಜನಾಧಿಕಾರಿ ಈಶ್ವರಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ತಹಸಿಲ್ದಾರ್ ಗಳು, ವಿವಿಧ ಇಲಾಖೆಗಳ ಅಧಿಕಾರಿಗಳು,ಸಿಬ್ಬಂದಿ ಇದ್ದರು.