ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ದತ್ತು ಸಂಸ್ಥೆಯು ೬ ವರ್ಷದೊಳಗಿನ ಕುಟುಂಬದ ಪ್ರೀತಿ ವಂಚಿತ, ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸೂಕ್ತ ಸಂಸ್ಥೆಯಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಿಷನ್ ವಾತ್ಸಲ್ಯ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಿಷನ್ ವಾತ್ಸಲ್ಯ ವಿವಿಧ ಯೋಜನೆಗಳ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.ಶಾಶ್ವತ ಕುಟುಂಬ ವ್ಯವಸ್ಥೆ
ಮಕ್ಕಳಿಗೆ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನು ಬದ್ಧವಾಗಿ ಕಲ್ಪಿಸಲು ದತ್ತು ಸಂಸ್ಥೆಯು ನೆರವಾಗುತ್ತದೆ. ವೀಕ್ಷಣಾಲಯ ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ ೧೮ ವರ್ಷದೊಳಗಿನ ಮಕ್ಕಳ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಅಭಿರಕ್ಷಣೆ ಒದಗಿಸುವ ಸಂಸ್ಥೆಯಾಗಿದೆ ಎಂದರು.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಒಟ್ಟು ೫೨ ಮಕ್ಕಳು ದಾಖಲಾಗಿರುತ್ತಾರೆ, ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಕೋವಿಡ್-೧೯ ರಿಂದ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ ೩,೫೦೦ ರೂ.ಗಳ ಆರ್ಥಿಕ ಧನ ಸಹಾಯ ಆರ್.ಟಿ.ಜಿ.ಎಸ್ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯನ್ನು ಮಾಡಲಾಗುತ್ತಿದೆ ಎಂದರು. ಮಕ್ಕಳ ಸಹಾಯವಾಣಿ ಬಳಸಿರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಯಾವುದೇ ರೀತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆ ಒದಗಿಸಲು ಮಕ್ಕಳ ಸಹಾಯವಾಣಿ-೧೦೯೮ ನ್ನು ಇ.ಆರ್.ಎಸ್.ಎಸ್-೧೧೨ ನೊಂದಿಗೆ ವಿಲೀನಗೊಳಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಅನುಸ್ಥಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಇದ್ದರು.