ಕನಕಪುರ: ತಾಲೂಕಿನ ಪ್ರತಿಯೊಂದು ಮನೆಯ ಹಬ್ಬವಾಗಿರುವ ಕನಕೋತ್ಸವ ಕಾರ್ಯಕ್ರಮ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ರಮವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು
ಕನಕಪುರ: ತಾಲೂಕಿನ ಪ್ರತಿಯೊಂದು ಮನೆಯ ಹಬ್ಬವಾಗಿರುವ ಕನಕೋತ್ಸವ ಕಾರ್ಯಕ್ರಮ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ರಮವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕನಕೋತ್ಸವದ ಪೂರ್ವಭಾವಿಯಾಗಿ ಗ್ರಾಮೀಣ ಭಾಗಗಳಲ್ಲಿ ಆಯೋಜಿಸಿದ್ದ ಮನೆಮನೆಗೆ ಗ್ಯಾರಂಟಿ, ಮನೆಗೊಂದು ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಬಿಡಿಸಿದ್ದ ಬಣ್ಣ ಬಣ್ಣದ ರಂಗೋಲಿಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ನಾಡಿಗೆ ಪರಿಚಯಿಸುವುದೇ ಕನಕೋತ್ಸವದ ಪ್ರಮುಖ ಗುರಿ,
ಜಿಲ್ಲಾ ಮಟ್ಟದಲ್ಲಿ ಕನಕೋತ್ಸವವನ್ನು ನೋಡಿಕೊಂಡು ಬೇರೆ ಕ್ಷೇತ್ರದಲ್ಲಿ ಕೂಡ ಪ್ರಯೋಗ ಮಾಡಿರುವುದನ್ನು ನೋಡಬಹುದು ಎಂದು ತಿಳಿಸಿದರು.ನಮ್ಮ ಹಬ್ಬಗಳು ಇರುವ ಕಡೆ ಸಂಸ್ಕೃತಿ ಇರುತ್ತದೆ. ಮನೆ ಮನೆಗೆ ಗ್ಯಾರಂಟಿ ಮನೆಗೊಂದು ರಂಗೋಲಿ ಸ್ಪರ್ಧೆಯ ಕಾರ್ಯಕ್ರಮಕ್ಕೆ ತಾಲೂಕು ಹಾಗೂ ಜಿಲ್ಲಾದ್ಯಂತ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಿದ್ದು ತಾಲೂಕಿನಲ್ಲಿ ಕಾರ್ಯಕ್ರಮದ ಅಂಗವಾಗಿ 57 ಸಾವಿರ ರಂಗೋಲಿ ಹಾಕಿರುವುದು ನನಗೆ ಸಂತಸ ತಂದಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಗೌರವಿಸುತ್ತೇವೆ. ಜ.28ರಿಂದ ಅದ್ಧೂರಿಯಾಗಿ ಕನಕೋತ್ಸವ ಆರಂಭವಾಗಲಿದ್ದು ಸತತ ಐದು ದಿನಗಳ ಕಾಲ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪಕ್ಷಾತೀತವಾಗಿ ಕಾರ್ಯಕ್ರಮ ಮಾಡುತ್ತಿದ್ದು, ಗ್ರಾಮ ದೇವತೆಗಳ ಮೆರವಣಿಗೆಯೂ ನಡೆಯಲಿದೆ. 250 ದೇವತೆಗಳು, ವಿವಿಧ ಕಲಾ ತಂಡಗಳ ಪ್ರದರ್ಶನ ಜೊತೆ ಆನೆ ಅಂಬಾರಿ ಮೂಲಕ ಶಕ್ತಿ ದೇವತೆಗಳ ಮೆರವಣಿಗೆ ನಡೆಯಲಿದೆ. ನಮ್ಮ ಮನಸ್ಸಿನಲ್ಲಿ ಇರದ ಹಲವು ವಿಚಾರಗಳು ರಂಗೋಲಿಯಲ್ಲಿ ಮೂಡಿದೆ. ತಾಲೂಕು ಹಾಗೂ ಜಿಲ್ಲೆಯ ಜನ ಐದು ದಿನಗಳೂ ತಪ್ಪದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಬ್ಬದ ಸಡಗರವನ್ನು ಅನುಭವಿಸುವಂತೆ ಮನವಿ ಮಾಡಿದರು.ತಾಲೂಕು ಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಜಯಗಳಿಸಿದ ಮಹಿಳೆಯರಿಗೆ ಮೊದಲ ಬಹುಮಾನವಾಗಿ ಒಂದು ಪ್ರಿಡ್ಜ್, ಎಲ್ ಇಡಿ ಟಿವಿ ಹಾಗೂ ವಾಷಿಂಗ್ ಮಿಷಿನ್, ಎರಡನೇ ಬಹುಮಾನ ಎಲ್‌ಇಡಿ ಟಿವಿ, ಮೂರನೇ ಬಹುಮಾನವಾಗಿ ಪ್ರಿಡ್ಜ್ ಅನ್ನು ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 05:
ಕನಕಪುರದಲ್ಲಿ ಜಿಲ್ಲಾ ಮಟ್ಟದ ಕನಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದ ಮಾಹಿತಿ ನೀಡಿದರು. ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, ಪಕ್ಷದ ನಾಯಕರು ಹಾಜರಿದ್ದರು.