ಕನ್ನಡಪ್ರಭ ವಾರ್ತೆ ಶೃಂಗೇರಿ
ಲಯನ್ಸ್ ಸಂಸ್ಥೆ ಕಾರ್ಯಗಳು, ಆರೋಗ್ಯ, ಪರಿಸರ, ಸಾರ್ವಜನಿಕ ಸೇವೆಗಳು ಸೇರಿದಂತೆ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುವುದರ ಜತೆಗೆ ಜಗತ್ತಿನಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಸಮಾಜ ಸೇವೆಯೇ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಹೇಳಿದರು.ಶೃಂಗೇರಿ ಲಯನ್ಸ್ ಸಂಸ್ಥೆಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಮಾರು 50 ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿರುವ ಲಯನ್ಸ್ ಸಂಸ್ಥೆ ಸುಮಾರು 14 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಭೂಕಂಪ, ನೆರೆ ಪ್ರವಾಹ,ಕ್ಷಾಮ,ಬರಗಾಲ ಸಂದರ್ಭದಲ್ಲಿ ಎಲ್ಲರಿಗಿಂತ ಮೊದಲುಲಯನ್ಸ್ ಸಂಸ್ಥೆ ದೇಣಿಗೆ ನೆರವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಇದು ಮಾನವ ಕುಲಕ್ಕೆ ಸೇವೆ ಸಲ್ಲಿಸುವ ಸಂಸ್ಥೆಯಾಗಿದೆ ಎಂದರು.
ಅಮೆರಿಕದ ಚಿಕಾಗೋ ನಗರದಲ್ಲಿ ಹುಟ್ಟಿಕೊಂಡ ಈ ಸಂಸ್ಥೆ 107 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸಂಸ್ಥೆ ಇಂದು ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ ಜೀವ ಉಳಿಸುವ ಕೆಲಸ ಮಾಡುತ್ತದೆ.ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಶುಶ್ರೂಸೆ ಕೇಂದ್ರಗಳನ್ನು ಆರಂಬಿಸಿದೆ. ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.ಶೃಂಗೇರಿ ಲಯನ್ಸ್ ಘಟಕದ ಅಧ್ಯಕ್ಷ ಧರ್ಮಪ್ಪ ಹೆಗ್ಡೆ ಮಾತನಾಡಿ ತಾಲೂಕಿನಲ್ಲಿ ಪ್ರಸ್ತ ವರ್ಷ ಸಂಸ್ಥೆಯು ಅನೇಕಕಾರ್ಯಕ್ರಮಗಳನ್ನು ಆಯೋಜಿಸಿ ರೂಪಿಸಿದೆ.ಆರೋಗ್ಯ ಶಿಬಿರ,ರಕ್ತದಾನ ಶಿಬಿರ,ಕಾನೂನು ಪರಿಸರ ಹೀಗೆ ಅನೇಕ ಕಾರ್ಯಕ್ರಮಗಳನ್ನುಆಯೋಜಿಸಿದೆ.ಪ್ರತಿಭಾ ಪುರಸ್ಕಾರ,ವನಮಹೋತ್ಸವ,4 ಶಾಲೆಗಳ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ,ಉಚಿತ ವೈದ್ಯಕೀಯ ಶಿಬಿರ,ಉಚಿತ ನೇತ್ರ ತಪಾಸಣಾ ಶಿಬಿರ,ರೋಗಿಗಳಿಗೆ ಧನ ಸಹಾಯ,ಜೇನು ಸಾಕಾಣಿಕೆ ಮಾಹಿತಿ,ಬಿದಿರು ಬೆಳೆ ಬಗ್ಗೆ ಮಾಹಿತಿ ಹೀಗೆ ಅನೇಕ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಡಿ.ಸಿ.ಶಂಕರಪ್ಪ, ಸತೀಶ್ ಭಟ್, ಉಮೇಶ್ ಪುದುವಾಳ್, ಕೆ.ಎಂ.ಮಂಜುನಾಥ್ ಕಂಬಳಗೆದ್ದೆ ಮತ್ತಿತರರು ಇದ್ದರು.