ಕಡೂರುಜನರಿದ್ದಲ್ಲಿಗೇ ತೆರಳಿ ಅವರ ಕುಂದುಕೊರತೆ ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರ ‘ಪ್ರಜಾಸೇವಾ ಆಂದೋಲನ’ ಜಾರಿಗೆ ತಂದಿದೆ. ಆಡಳಿತಕ್ಕೆ ಜನಪರ ಕಾಳಜಿಯಿದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

- ಶಾಸಕ ಕೆ.ಎಸ್. ಆನಂದ್‌ । ಕಸಬಾ ಹೋಬಳಿ ಬಳ್ಳೇಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರಜಾಸೇವಾ ಆಂದೋಲನ

ಕನ್ನಡಪ್ರಭ ವಾರ್ತೆ ಕಡೂರುಜನರಿದ್ದಲ್ಲಿಗೇ ತೆರಳಿ ಅವರ ಕುಂದುಕೊರತೆ ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರ ‘ಪ್ರಜಾಸೇವಾ ಆಂದೋಲನ’ ಜಾರಿಗೆ ತಂದಿದೆ. ಆಡಳಿತಕ್ಕೆ ಜನಪರ ಕಾಳಜಿಯಿದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿ ಬಳ್ಳೇಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಮಾತನಾಡಿದರು. ಶಾಸಕರಾದ ಆರಂಭದಿಂದಲೇ ಅಧಿಕಾರಿಗಳ ತಂಡದೊಂದಿಗೆ ‘ಶಾಸಕರ ನಡೆ ಗ್ರಾಮ ಪಂಚಾಯಿತಿ ಕಡೆ’ ಕಾರ್ಯಕ್ರಮದ ಮೂಲಕ 26ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಜನರ ಅಹವಾಲು ಆಲಿಸಲಾಗಿದೆ. ಈ ಮಾದರಿ ಪರಿಗಣಿಸಿ ರಾಜ್ಯ ಸರ್ಕಾರ ಪ್ರತಿ ಶನಿವಾರ ರಾಜ್ಯಾದ್ಯಂತ ಪ್ರಜಾಸೇವಾ ಆಂದೋಲನ ನಡೆಸಲು ಆದೇಶಿಸಿದೆ. ಇದು ಕಡೂರು ಕ್ಷೇತ್ರದ ಆಡಳಿತ ಮಾದರಿಗೆ ಸಿಕ್ಕ ಗೌರವ ಎಂದರು.58 ಕೆರೆಗಳಿಗೆ ನೀರು ಹರಿಸುವ ಗುರಿ:ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಸರ್ಕಾರ ₹396 ಕೋಟಿ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಈ ಅವಧಿಯಲ್ಲೇ ಬಳ್ಳೇಕೆರೆ ಸೇರಿ ದಂತೆ ಈ ಭಾಗದ 58 ಕೆರೆಗಳಿಗೆ ನೀರು ಹರಿಸುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಅಭಿವೃದ್ಧಿ ಕಾಮಗಾರಿ ಮತ್ತು ಗ್ಯಾರಂಟಿ ಯೋಜನೆ ಸಮಾನಾಂತರವಾಗಿ ಸಾಗುತ್ತಿವೆ. ಕಡೂರು ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಒಂದೇ ವರ್ಷದಲ್ಲಿ ₹150 ಕೋಟಿಗೂ ಹೆಚ್ಚು ಅನುದಾನ ತರ ಲಾಗಿದೆ. ಗೆದ್ದಲಹಳ್ಳಿ, ಚೌಳುಹಳ್ಳಿ ಸೇರಿದಂತೆ ವಿವಿಧೆಡೆ ಮೊರಾರ್ಜಿ ದೇಸಾಯಿ ಮತ್ತು ಕಾರ್ಮಿಕ ವಸತಿ ಶಾಲೆಗಳ ನಿರ್ಮಾಣ ಪ್ರಗತಿಯಲ್ಲಿದೆ. ತಾಲೂಕಿನ ಆರು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಗಾರ್ಮೆಂಟ್ಸ್ ಘಟಕಕ್ಕೂ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಅರ್ಜಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ: ಜಿಲ್ಲಾಧಿಕಾರಿಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ ಸರ್ಕಾರ ಮತ್ತು ಆಡಳಿತ ಯಂತ್ರ ಕಚೇರಿ ಹಾಗೂ ಕಡತಗಳಿಗೆ ಸೀಮಿತ ವಾಗಬಾರದು. ಅಧಿಕಾರಿಗಳು ನೇರವಾಗಿ ಜನರ ಬಳಿಗೆ ತೆರಳಿ ಅವರ ಸಮಸ್ಯೆ ಅರ್ಥಮಾಡಿಕೊಂಡು ಪರಿಹಾರ ಕಲ್ಪಿಸಬೇಕು ಎಂದರು.ಸಾರ್ವಜನಿಕರ ಮನೆಬಾಗಿಲಿಗೆ ಆಡಳಿತ ತಲುಪಿಸುವುದು ಹಾಗೂ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವುದು ಆಂದೋಲ ನದ ಉದ್ದೇಶ. ಸಾರ್ವಜನಿಕರ ದೂರು ಸ್ವೀಕರಿಸಲು ಪ್ರತ್ಯೇಕ ಪೋರ್ಟಲ್ ವ್ಯವಸ್ಥೆ ಮಾಡಲಾಗಿದೆ. ಅರ್ಜಿಗಳ ಪ್ರಗತಿ ಸರ್ಕಾರದ ಮಟ್ಟದಲ್ಲೂ ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.ಅರ್ಜಿಗಳಿಗೆ ಕೇವಲ ನಿಯಮಾವಳಿಗಳ ಪ್ರಕಾರ ಹಿಂಬರಹ ನೀಡಿ ಕೈತೊಳೆದುಕೊಳ್ಳುವ ಪ್ರವೃತ್ತಿಗೆ ಅಧಿಕಾರಿಗಳು ಅಂತ್ಯ ಹಾಡಬೇಕು. ಸಮಸ್ಯೆಗೆ ಅರ್ಥಪೂರ್ಣ ಮತ್ತು ಶಾಶ್ವತ ಪರಿಹಾರ ಕಲ್ಪಿಸಬೇಕು. ಕುಡಿವ ನೀರಿನಂತಹ ಮೂಲಭೂತ ಸಮಸ್ಯೆ ಗಳಿಗೆ ತಕ್ಷಣ ಸ್ಪಂದಿಸಿ, ಹಂತ ಹಂತವಾಗಿ ಪರಿಹರಿಸಲು ಯೋಜನೆ ರೂಪಿಸಬೇಕು ಎಂದರು.ಚಿಕ್ಕಮಗಳೂರು, ಶೃಂಗೇರಿ, ಎನ್.ಆರ್. ಪುರ ಹಾಗೂ ಕಡೂರು ತಾಲೂಕುಗಳ ಸಮಸ್ಯೆಗಳು ವಿಭಿನ್ನವಾಗಿವೆ. ಜಿಲ್ಲಾ ಮಟ್ಟ ದಲ್ಲಿ ಕುಳಿತು ಎಲ್ಲ ಸಮಸ್ಯೆಗಳನ್ನು ಒಂದೇ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ. ಹೋಬಳಿ ಹಾಗೂ ಗ್ರಾಪಂ ಮಟ್ಟದ ಸಭೆಗಳು ಸ್ಥಳೀಯ ಸಮಸ್ಯೆಗಳ ವಾಸ್ತವ ಸ್ಥಿತಿ ಅರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿವೆ ಎಂದರು.ಏಳು ದಿನದೊಳಗೆ ಕ್ರಮ, ಹಿಂಬರಹ: ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಸ್ಥಳದಲ್ಲೇ ಪರಿಹರಿಸುವುದು ಹಾಗೂ ಸರ್ಕಾರಿ ಸೌಲಭ್ಯವನ್ನು ಜನರ ಮನೆಬಾಗಿಲಿಗೆ ತಲುಪಿಸುವುದೇ ಉದ್ದೇಶ ಎಂದರು.ಆಗಸ್ಟ್ 1ರಿಂದ ಪ್ರಜಾಸೇವಾ ಇಲಾಖೆ ಆರಂಭಗೊಂಡಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಮಟ್ಟದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ 2ನೇ ಮತ್ತು 4ನೇ ಶನಿವಾರ ಹೋಬಳಿ ಅಥವಾ ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆಂದೋಲನ ನಡೆಯಲಿದೆ ಎಂದು ತಿಳಿಸಿದರು.ಕಂದಾಯ, ಕೃಷಿ, ಪಶುಸಂಗೋಪನೆ, ಅರಣ್ಯ, ಆರ್‌ಡಿಪಿಆರ್ ಸೇರಿದಂತೆ ಯಾವುದೇ ಇಲಾಖೆಗೆ ಸಂಬಂಧಿಸಿದ ಅರ್ಜಿ ಗಳನ್ನು ಸಾರ್ವಜನಿಕರು ಸಲ್ಲಿಸಬಹುದು. ಅರ್ಜಿಗಳಿಗೆ ಸ್ವೀಕೃತಿ ನೀಡಿ, ಗರಿಷ್ಠ ಏಳು ದಿನಗಳೊಳಗೆ ಸೂಕ್ತ ಕ್ರಮ ಕೈ ಗೊಂಡು ಹಿಂಬರಹ ನೀಡಲಾಗುವುದು. ಈಗಾಗಲೇ ತಾಲೂಕಿನಲ್ಲಿ 30 ಜನಸಂಪರ್ಕ ಸಭೆ ನಡೆಸಲಾಗಿದ್ದು, ಸಾರ್ವಜ ನಿಕರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳಲಾಯಿತು. ಇತರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಸಭೆಯಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಬೋರಯ್ಯ, ಡಿಎಸ್‌ಪಿ ಪರಶುರಾಮ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್, ಇಎಸ್‌ಐ ಯೋಗೀಶ್, ಜಿಪಂ ಯೋಜನಾಧಿಕಾರಿ ರಾಜಗೋಪಾಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.