ಶರಣತತ್ವದಡಿ ಬದುಕಿದ ಪಂ. ಪುಟ್ಟರಾಜ ಗವಾಯಿಗಳು

| Published : May 28 2024, 01:03 AM IST

ಶರಣತತ್ವದಡಿ ಬದುಕಿದ ಪಂ. ಪುಟ್ಟರಾಜ ಗವಾಯಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಯಾರೊಬ್ಬರು ಅನ್ನ, ಆಹಾರ ಹಾಗೂ ವಸ್ತ್ರದಿಂದ ವಂಚಿತರಾಗಬಾರದು, ಜೀವನವನ್ನು ಆನಂದದಿಂದ ಅನುಭವಿಸಬೇಕೆಂಬ ಅಚಲ ನಿರ್ಧಾರವನ್ನು ಹೊಂದಿದವರು ಪಂ. ಪುಟ್ಟರಾಜ ಕವಿಗವಾಯಿಗಳು.

ಧಾರವಾಡ:

ಪಂ. ಪುಟ್ಟರಾಜ ಗವಾಯಿಗಳವರ ಪರಂಪರೆಯ ಮುಂದುವರಿಕೆಯಾಗಿ ದರ್ಬಾರ ಕಲಾ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಕಲಾ ಪ್ರತಿಭೆಗಳನ್ನು ನಾಡಿಗೆ ಕೊಡುತ್ತಿರುವ ಬಸವರಾಜ ಹೂಗಾರ ಅವರ ಕಾರ್ಯ ಅತ್ಯಂತ ಪ್ರಶಂಸನೀಯ ಎಂದು ಹಿರಿಯ ಹಿಂದೂಸ್ತಾನಿ ಗಾಯಕ ಡಾ. ಮೃತ್ಯುಂಜಯ ಶೆಟ್ಟರ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ದರ್ಬಾರ ಸಂಗೀತ ಕಲಾ ಸಂಸ್ಥೆಯು ಡಾ. ಪುಟ್ಟರಾಜ ಕವಿಗವಾಯಿಗಳವರ 110ನೇ ಜನ್ಮದಿನೋತ್ಸವದ ಅಂಗವಾಗಿ ಹಾಗೂ ದರ್ಬಾರ ಸಂಗೀತ ಕಲಾ ಸಂಸ್ಥೆಯ 10ನೇ ವಾರ್ಷೀಕೋತ್ಸವದ ಸಂದರ್ಭದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟಿಸಿದ ಅವರು, ಯಾರಾದರೂ ಜ್ವಲಂತ ಸಾಕ್ಷಿಯಾಗಿ ಬದುಕಿದ್ದರೆ, ತಮ್ಮ ಇಡೀ ಜೀವನವನ್ನು ಕಾಯಕತತ್ವ, ಶರಣತತ್ವ, ಲಿಂಗತತ್ವದಡಿ ಬದುಕಿದ್ದವರೆಂದರೆ ಅವರು ಪಂ. ಪುಟ್ಟರಾಜ ಕವಿ ಗವಾಯಿಗಳು ಎಂದರು.

ಸಮಾಜದಲ್ಲಿ ಯಾರೊಬ್ಬರು ಅನ್ನ, ಆಹಾರ ಹಾಗೂ ವಸ್ತ್ರದಿಂದ ವಂಚಿತರಾಗಬಾರದು, ಜೀವನವನ್ನು ಆನಂದದಿಂದ ಅನುಭವಿಸಬೇಕೆಂಬ ಅಚಲ ನಿರ್ಧಾರವನ್ನು ಹೊಂದಿದವರು ಪಂ. ಪುಟ್ಟರಾಜ ಕವಿಗವಾಯಿಗಳು. ಅಂಧ-ಅನಾಥರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅವರಲ್ಲಿ ಸ್ವರ ವಿದ್ಯೆಯನ್ನು ಭಿತ್ತಿದವರು ಎಂದು ಹೇಳಿದರು.

ಹಿರಿಯ ಗಾಯಕ ಪಂ. ಸೋಮನಾಥ ಮರಡೂರ ಅಧ್ಯಕ್ಷತೆ ವಹಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕರಾದ ಎನ್.ಜಿ. ಗುರುಪುತ್ರನವರ, ಮಲ್ಲಿಕಾರ್ಜುನ ಚಿಕ್ಕಮಠ, ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ವೇದಿಕೆಯಲ್ಲಿದ್ದರು. ಇದೇ ವೇಳೆ ಪಂ. ಪಂಚಾಕ್ಷರ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಂ. ಸೋ ಮನಾಥ ಮರಡೂರ ದಂಪತಿಗಳನ್ನು ಸನ್ಮಾನಿಸಲಾಯಿತು.

ಸಂಗೀತೋತ್ಸವದಲ್ಲಿ ಖ್ಯಾತ ಹಿರಿಯ ಬಾಂಸುರಿ ಕಲಾವಿದ ಉಸ್ತಾದ್ ಶೇಖ ಅಬ್ದುಲ್ ಖಾಜಿ ಅವರ ಬಾಂಸುರಿ ವಾದನದಲ್ಲಿ ಲಲತ ರಾಗ, ಖ್ಯಾತ ಹಿಂದೂಸ್ತಾನಿ ಗಾಯಕಿ ವಿದುಷಿ ಸುಜಾತಾ ಗುರವ ಗಾಯನ, ಸಿಂಚನಾ ದಾಣಗೇರಿ ವಯೋಲಿನ ವಾದನ ಹಾಗೂ ದರ್ಬಾರ ಸಂಗೀತ ಕಲಾ ಸಂಸ್ಥೆಯ ವಿದ್ಯಾರ್ಥಿಗಳು ಗಾಯನದಲ್ಲಿ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂ. ಅಲ್ಲಮಪ್ರಭು ಕಡಕೋಳ, ಡಾ. ರಾಜಕುಮಾರ ಮುಡಬಿ, ಮಲ್ಲೇಶ ಹೂಗಾರ, ಗುರುಸ್ವಾಮಿ ಮಠಪತಿ ಹಾಗೂ ಎ. ಅಭಿಷೇಕ, ಹಾರ್ಮೊನಿಯಂದಲ್ಲಿ ವಿನೋದ ಪಾಟೀಲ, ಸೊಹಿಲ್ ಸಯ್ಯದ ಸಾಥ್ ಸಂಗತ ನೀಡಿದರು

ರವಿ ಕುಲಕರ್ಣಿ ನಿರೂಪಿಸಿದರು. ಬಸವರಾಜ ಹೂಗಾರ ಸ್ವಾಗತಿಸಿದರು. ಮಳೆಮಲ್ಲೇಶ ಹೂಗಾರ ವಂದಿಸಿದರು.