ಸಾರಾಂಶ
ಹಾವೇರಿ:ತೃಪ್ತಿ ಇಲ್ಲದವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹಣ, ಅಧಿಕಾರ ಇದ್ದವರೇ ದೊಡ್ಡವರಾಗುವುದು ಇಲ್ಲಿಯ ವ್ಯವಸ್ಥೆ. ಇಲ್ಲೂ ಒಂದು ದಿನ ಕ್ರಾಂತಿ ಆಗಬಹುದು. ರಾಜಕೀಯ ಬದಲಾಯಿಸುವ ಗುಣ ಯುವಕರಲ್ಲಿ ಬರಬೇಕು. ನ್ಯಾಯಾಂಗ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು. ಇಲ್ಲಿಯ ಹಾನಗಲ್ಲ ರಸ್ತೆಯಲ್ಲಿರುವ ಭಗತ್‌ಸಿಂಗ್ ಕಾಲೇಜಿನ ಆವರಣದಲ್ಲಿ ಜರುಗಿದ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮಹಾಕುಂಭ -2025ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮೌಲ್ಯವಿಲ್ಲದ ಶಿಕ್ಷಣ ಹಣವನ್ನು ಗಳಿಸಲು ಪ್ರೇರೇಪಿಸುತ್ತದೆ. ಧರ್ಮ ಮತ್ತು ಜಾತಿಗಳು ಮನೆಯ ಒಳಗಡೆ ಇರಬೇಕು, ರಾಜಕೀಯದಲ್ಲಿ ಬೆರೆಸಬಾರದು. ಇಂದಿನ ಸಮಾಜದ ದೊಡ್ಡ ರೋಗವೆಂದರೆ ಜಿಗುಪ್ಸೆ, ಬೇರೆಯವರೊಂದಿಗೆ ತುಲನೆಯನ್ನು ಮಾಡಿಕೊಂಡು ಕೀಳರಿಮೆಯಲ್ಲೇ ಬದುಕುವವರೇ ಹೆಚ್ಚಾಗಿದ್ದಾರೆ. ರಾಜಕಾರಣ ಆಸ್ತಿ, ಅಧಿಕಾರ ಹಂಚಿಕೊಳ್ಳಲು ಅಲ್ಲ, ಬದಲಾಗಿ ಅದು ಜನಸೇವೆ ಆಗಬೇಕು ಎಂದು ಹೇಳಿದರು. ನೀವು ವಿದ್ಯಾರ್ಥಿಯಾಗಿದ್ದಾಗ ಹೇಗೆ ಅಭ್ಯಾಸ ಮಾಡುತ್ತಿದ್ದೀರಿ? ಲೋಕಾಯುಕ್ತರಾದಾಗ ಅತ್ಯಂತ ಕಠಿಣ ತೀರ್ಪುಗಳನ್ನು ಕೊಟ್ಟಾಗ ಜೀವ ಬೆದರಿಕೆಗಳು ಬಂದವೇ? ನಿಮ್ಮ ರೋಲ್ ಮೊಡೆಲ್ ಯಾರು? ಇಷ್ಟೆಲ್ಲ ಸಾಧಿಸಿದ ನಂತರ ಸಂತೋಷ ಹೆಗಡೆ ಇನ್ನುಮುಂದೆ ಏನು? ಅಣ್ಣಾ ಹಜಾರೆ ಅವರೊಂದಿಗಿನ ಸಂಬಂಧ ಹೇಗಿತ್ತು ? ಇಂದಿನ ರಾಜಕೀಯದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನೀವು ರಾಜಕೀಯಕ್ಕೆ ಯಾಕೆ ಬರಬಾರದು? ಹೀಗೆ ಹಲವು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು. ಇದಕ್ಕೆಲ್ಲ ಸಮಾಧಾನದಿಂದಲೇ ಅವರು ಉತ್ತರಿಸಿದರು.
ಸಮಾರಂಭದ ಸಾನ್ನಿಧ್ಯವನ್ನು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ವಹಿಸಿ, ನಮ್ಮ ಸಮಾಜಕ್ಕೆ ಸಂತೋಷ ಹೆಗಡೆ ಅವರು ಒಬ್ಬ ಮಾದರಿಯ ಆದರ್ಶವಾದಿ. ಸದಾಕಾಲ ಸತ್ಯ ಮತ್ತು ನ್ಯಾಯಕ್ಕಾಗಿ ಮುಡಿಪಿಟ್ಟವರು ಎಂದರು.ಹಿರಿಯ ಲೇಖಕ ಸತೀಶ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಖುಷಿ ಜಗದೀಶ ಹತ್ತಿಕೊಟಿ ವಚನ ವಾಚಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಬಸಪ್ಪ ಆರ್.ಜಿ., ಸರ್ಕಾರಿ ಶಾಲಾ ಶಿಕ್ಷಕ ಗಿರೀಶ ದೊಡ್ಡಮನಿ, ಉದಯೋನ್ಮುಖ ರೈತ ಮಹಿಳೆ ಕಾವ್ಯಾ ಕುಂಟನಹೊಸಳ್ಳಿ, ಹಿರೇಲಿಂಗದಹಳ್ಳಿ ಸೂಲಗಿತ್ತಿ ಬಸಮ್ಮ ನೆಟಗಲ್ಲಣ್ಣನವರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಭಗತ್ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಸತೀಶ ಮಾತನಾಡಿ, ಇಂದು ಸಂತೋಷ ಹೆಗಡೆ ಅವರ ಜೊತೆ ವಿದ್ಯಾರ್ಥಿಗಳ ಸಂವಾದದಿಂದ ಕಾರ್ಯಕ್ರಮ ಬಹಳ ಅರ್ಥಪೂರ್ಣವೆನಿಸಿತು. ಮಕ್ಕಳು ಇದರಿಂದ ಸಾಕಷ್ಟು ತಿಳಿದುಕೊಂಡರು. 2024-25ನೇ ಸಾಲಿನ ಕಾಲೇಜಿನ ಎಲ್ಲ ಚಟುವಟಿಕೆಗಳು ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಗೆ ಅಭಿಮಾನದ ಕೃತಜ್ಞತೆಗಳನ್ನು ತಿಳಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಾನಗಲ್ಲ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜಿ.ವ್ಹಿ. ಕೋರಿ, ಶಾಲೆಯ ಮುಖ್ಯೋಪಾಧ್ಯಾಯ ಬಸವಂತ ಚಿಕ್ಕಣ್ಣನವರ, ಕಾಲೇಜಿನ ಪ್ರಾಂಶುಪಾಲ ರತನ್ ಕಾಶಪ್ಪನವರ, ಉಪನ್ಯಾಸಕರಾದ ದೀಪಾ ಜೋಗಿಹಳ್ಳಿ, ಭುವನೇಶ್ವರಿ ಲಂಬಿ, ಸಾಯಿಪೂಜಾ ಹರಮಗಟ್ಟಿ, ಜ್ಯೋತಿ ಭೋವೆರ, ಪುಷ್ಪಾ ಕಡೂರು, ಶಿಲ್ಪಾ ಜಿ.ಬಿ., ರಾಜೇಶ್ವರಿ ಮಳಿಯಣ್ಣನವರ, ಆಸ್ಮಾ ತಳಕಲ್ಲ, ದೀಪಾ ಪಿ.ಎನ್., ಸಣ್ಣಬಸನಗೌಡ ರಾಮನಗೌಡ್ರ, ದಯಾನಂದ ಹೀರೆಮಠ, ಬಸವರಾಜ ಕೆ. ಉಪಸ್ಥಿತರಿದ್ದರು.