ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೆಆರ್‌ಎಸ್‌ನಲ್ಲಿ ಸದ್ಯ ತುಂಬಿರುವ ಹೂಳಿನ ಪ್ರಮಾಣವೆಷ್ಟು? ತಮಿಳುನಾಡು ಹಾಗೂ ಕರ್ನಾಟಕದ ನಡುವಿನ ನೀರು ಹಂಚಿಕೆಗೆ ಯಾವ ಮಾನದಂಡ ಅನುಸರಿಸಲಾಗುತ್ತಿದೆ? ಆಧಾರವಿಲ್ಲದೇ ನಡೆಯುತ್ತಿದೆಯೇ ಸಂಕಷ್ಟ ಸೂತ್ರದ ನೀರು ಹಂಚಿಕೆ?ಈ ಎಲ್ಲ ಪ್ರಶ್ನೆಗಳಿಗೆ ಸದ್ಯ ಕಾವೇರಿ ಪ್ರಾಧಿಕಾರದ ಬಳಿ ಉತ್ತರಗಳೇ ಇಲ್ಲ. ಆರ್‌ಟಿಐನಲ್ಲಿ ಇಂತಹ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ತಮಿಳುನಾಡಿಗೆ ಕಾವೇರಿ ನೀರನ್ನು ಯಾವ ಮಾನದಂಡದ ಮೇಲೆ ಹರಿಸಲಾಗುತ್ತಿದೆ ಎಂಬುದು ಅಚ್ಚರಿ ತರಿಸಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಸಾಮಾಜಿಕ ಕಾರ್ಯಕರ್ತ ಡಾ। ಸದಾನಂದ ಹೆಗ್ಗಡಾಳ ಮಠ್ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ, ದೆಹಲಿಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಹಾಗೂ ಸಿಪಿಐಒ ಸಂದೀಪ್ ಕುಮಾರ್ ವಿಶ್ವಕರ್ಮ ಅವರು 2026ರ ಜುಲೈ 23ರಂದು ಅಧಿಕೃತವಾಗಿ ನೀಡಿರುವ ಲಿಖಿತ ಉತ್ತರ ಆಘಾತಕಾರಿಯಾಗಿದೆ.ಕರ್ನಾಟಕ ಮತ್ತು ತಮಿಳುನಾಡು ನಡುವೆ ಪ್ರತಿವರ್ಷ ತೀವ್ರ ವಿವಾದಕ್ಕೆ ಕಾರಣವಾಗುವ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತೀರಾ ನಿರ್ಲಕ್ಷ್ಯ ವಹಿಸಿದೆಯೇ ಎಂಬ ಗಂಭೀರ ಅನುಮಾನ ಮೂಡಿದೆ.
ಕರ್ನಾಟಕದ ಜೀವನಾಡಿಗಳಾದ ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ತುಂಬಿಕೊಂಡಿರುವ ಹೂಳಿನಿಂದಾಗಿ ಎಷ್ಟು ಪ್ರಮಾಣದ ನೀರಿನ ಸಂಗ್ರಹ ಸಾಮರ್ಥ್ಯ ನಷ್ಟವಾಗಿದೆ ಎಂಬ ಯಾವುದೇ ದತ್ತಾಂಶ ಪ್ರಾಧಿಕಾರದ ಬಳಿ ಇಲ್ಲ. 2009ರ ನಂತರ ಕೆಆರ್‌ಎಸ್ ಸೇರಿದಂತೆ ನಾಲ್ಕೂ ಜಲಾಶಯಗಳ ಲೈವ್ ಸ್ಟೋರೇಜ್ ಸಾಮರ್ಥ್ಯ ನಷ್ಟದ (ಹೂಳಿನಿಂದಾಗಿ) ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ಕುರಿತು ಯಾವುದೇ ರಿಮೋಟ್ ಸೆನ್ಸಿಂಗ್ ಅಥವಾ ಹೈಡ್ರೋಗ್ರಾಫಿಕ್ ಸರ್ವೇ ವರದಿ ಬಂದಿಲ್ಲ ಎಂದು ಉತ್ತರಿಸಲಾಗಿದೆ. 2010ರಿಂದ ಇಲ್ಲಿವರೆಗೆ ಜಲಾಶಯಗಳಲ್ಲಿ ನಡೆಸಲಾದ ಹೂಳು ಸಮೀಕ್ಷೆಯ ಬಗ್ಗೆ ಕೇಳಲಾದ ಮತ್ತೊಂದು ಪ್ರಶ್ನೆಗೆ, ಯಾವುದೇ ವರ್ಷಾವಾರು ದತ್ತಾಂಶ ಸಿಡಬ್ಲ್ಯೂಎಂಬಿ ಬಳಿ ಇಲ್ಲ ಎಂದು ತಿಳಿಸಲಾಗಿದೆ.
2018ರ ಸುಪ್ರೀಂಕೋರ್ಟ್ ಆದೇಶದ ನಂತರ ನೀರು ಹಂಚಿಕೆ ಹಾಗೂ ಸಂಕಷ್ಟ ಸೂತ್ರ ಲೆಕ್ಕಾಚಾರ ಮಾಡುವಾಗ ಹೂಳಿನಿಂದಾದ ಸಂಗ್ರಹಣಾ ನಷ್ಟವನ್ನು ಪರಿಗಣಿಸಲಾಗಿದೆಯೇ ಎಂಬ ಪ್ರಶ್ನೆಗೆ, ‘ಯಾವುದೇ ಮಾಹಿತಿ ಲಭ್ಯವಿಲ್ಲ’ ಎಂದು ಪ್ರಾಧಿಕಾರ ಹಾರಿಕೆ ಉತ್ತರ ನೀಡಿದೆ. ಕೇಂದ್ರ ಜಲ ಆಯೋಗ ಮತ್ತು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಮೂಲಕ ಜಂಟಿ ಸಮೀಕ್ಷೆ ನಡೆಸಲು ಪ್ರಾಧಿಕಾರ ಯಾವುದೇ ಪ್ರಸ್ತಾಪ ಅಥವಾ ನಿರ್ದೇಶನ ನೀಡಿಲ್ಲವೆಂದು ಮತ್ತೊಂದು ಪ್ರಶ್ನೆಗೆ ಕಾವೇರಿ ಪ್ರಾಧಿಕಾರದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಕೋಟ್...ದಶಕಗಳಿಂದ ಜಲಾಶಯಗಳಲ್ಲಿ ಕೋಟ್ಯಂತರ ಟನ್ ಹೂಳು ತುಂಬಿಕೊಂಡಿರುವುದರಿಂದ ಅಣೆಕಟ್ಟುಗಳ ನೈಜ ನೀರು ಸಂಗ್ರಹಣಾ ಸಾಮರ್ಥ್ಯ ಶೇ.15 ರಿಂದ 20 ರಷ್ಟು ಕುಸಿದಿದೆ ಎಂದು ಅಂದಾಜಿಸಲಾಗಿದೆ. ಆದರೆ, ಕಾವೇರಿ ಪ್ರಾಧಿಕಾರವು ಜಲಾಶಯಗಳ ಹಳೆಯ ಗರಿಷ್ಠ ಸಾಮರ್ಥ್ಯವನ್ನೇ ಆಧಾರವಾಗಿಟ್ಟುಕೊಂಡು ತಮಿಳುನಾಡಿಗೆ ನೀರು ಹರಿಸಲು ಆದೇಶಿಸುತ್ತಿದೆ. ಇದರಿಂದಾಗಿ ಮಳೆ ಅಭಾವವಿರುವ ‘ಸಂಕಷ್ಟದ ವರ್ಷಗಳಲ್ಲಿ’ ಜಲಾಶಯದಲ್ಲಿ ನೀರಿಗಿಂತ ಹೂಳೇ ಹೆಚ್ಚಿದ್ದರೂ, ಹಳೆಯ ಲೆಕ್ಕದಂತೆಯೇ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಕರ್ನಾಟಕಕ್ಕೆ ಎದುರಾಗುತ್ತಿದೆ. ಇದು ರಾಜ್ಯದ ರೈತರಿಗೆ ಮತ್ತು ಕುಡಿಯುವ ನೀರಿನ ಭದ್ರತೆಗೆ ಬಿದ್ದ ನೇರ ಪೆಟ್ಟಾಗಿದೆ.
-ಡಾ। ಸದಾನಂದ ಹೆಗ್ಗಡಾಳ ಮಠ, ಆರ್‌ಟಿಐ ಕಾರ್ಯಕರ್ತ.