ರಾಜ್ಯಮಟ್ಟದ ಮೀನುಗಾರರ ಸಮಾವೇಶ
ಕನ್ನಡಪ್ರಭ ವಾರ್ತೆ ಹೊನ್ನಾವರಒಗ್ಗಟ್ಟಿನ ಕೊರತೆಯಿಂದ ಮೀನುಗಾರ ಸಮುದಾಯಗಳು ಹತ್ತು ಹಲವು ಸಮಸ್ಯೆ ಎದುರಿಸುತ್ತಿದ್ದು, ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಾಣಬೇಕಾದರೆ ಎಲ್ಲರ ಒಗ್ಗಟ್ಟು ಕಾಲದ ಬೇಡಿಕೆಯಾಗಿದೆ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿ ಧರ್ಮಾಧಿಕಾರಿ ಮಾರುತಿ ಗುರೂಜಿ ತಿಳಿಸಿದರು.
ತಾಲೂಕಿನ ಗೇರುಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ''''ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026 ಐದನೇ ದಿನ ನಡೆದ ರಾಜ್ಯಮಟ್ಟದ ಮೀನುಗಾರರ ಸಮಾವೇಶದ ಅಧ್ಯಕ್ಷತೆ ಮತ್ತು ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮೀನುಗಾರ ಸಮುದಾಯದಲ್ಲಿ 38 ಜನಾಂಗಗಳಿವೆ. ನೀರಿನ ಮೇಲೆ ಮತ್ತು ಸಮುದ್ರ ಕಿನಾರೆಯಲ್ಲಿ ಬದುಕು ಕಟ್ಟಿಕೊಂಡಿರುವ ಈ ಸಮುದಾಯಗಳ ಜೀವನ ನೀರಿನ ಮೇಲಿನ ಗುಳ್ಳೆಯಂತಿದೆ. ಒಗ್ಗಟ್ಟು ನಿಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ. ನೀವು ಒಗ್ಗಟ್ಟಾದರೆ ನಿಮ್ಮ ಅಸ್ತಿತ್ವ ಉಳಿಯುತ್ತದೆ. ನೀವು ಒಗ್ಗಟ್ಟು ಮುರಿದರೆ ಅಸ್ತಿತ್ವ ಕಳೆದುಕೊಳ್ಳುವ ಅಪಾಯ ಇದೆ ಎಂದು ಹೇಳಿದರು.ಸಾಗರ ತಟದಲ್ಲಿ ಹಲವು ಯೋಜನೆಗಳು ಜಾರಿಯಾಗುತ್ತಿವೆ. ಇವು ದೇಶದ ರಕ್ಷಣೆಗೆ ಆದರೆ ಅದನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೆ ದೇಶ ರಕ್ಷಣೆ ಹೆಸರಲ್ಲಿ ದೇಶದ ಜನರು ಬಲಿಯಾಗುವುದು, ಸಂತ್ರಸ್ತರಾಗುವುದು, ಮನೆ ಮಠ ಕಳೆದುಕೊಳ್ಳುವುದು, ಬೀದಿಗೆ ಬೀಳುವುದನ್ನು ಒಪ್ಪಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆಡಳಿತ ಮತ್ತು ಅಧಿಕಾರದಲ್ಲಿ ನಿಮ್ಮ ಪ್ರಾತಿನಿಧ್ಯ ಬೇಕು. ಇದರಲ್ಲಿ ನೀವು ವಿಫಲರಾದರೆ ಸಮುದಾಯ ಸಂಕಷ್ಟದಲ್ಲೇ ದಿನ ಕಳೆಯಬೇಕು. ಆಡಳಿತ ಮತ್ತು ಅಧಿಕಾರ ನೀವು ಇರಬೇಕಾದರೆ ವಿದ್ಯಾವಂತ ಸಮುದಾಯ ಆಗಬೇಕು. ವಿದ್ಯೆ ಇಲ್ಲದ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರುವುದು ಕಷ್ಟ. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕಾರ್ಯತಂತ್ರ ರೂಪಿಸಿ ಎಂದು ಕರೆ ನೀಡಿದರು.
ಮೀನುಗಾರ ಸಮುದಾಯದ ಜೊತೆ ಈ ಕ್ಷೇತ್ರ ಸದಾ ಇರಲಿದೆ. ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳ ಪರಿಹಾರಕ್ಕೆ ಜನಪ್ರತಿನಿಧಿಗಳು ಮತ್ತು ಸರಕಾರಕ್ಕೆ ಈ ಕ್ಷೇತ್ರದ ಮೂಲಕ ಒತ್ತಡ ಹಾಕಲಾಗುವುದು ಎಂದು ಭರವಸೆ ನೀಡಿದರು.
ಸಾಹಿತಿ ಸಿದ್ದು ಯಾಪಲಪರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಂಕರಾನಂದ ಸರಸ್ವತಿ ಮಹಾ ಸಂಸ್ಥಾನಂನ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಮಹಾಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿದರು. ಹೊನ್ನಾವರ ಪಪಂ ಮಾಜಿ ಅಧ್ಯಕ್ಷ ಶಿವರಾಜ್ ಮೇಸ್ತ, ನಾರಾಯಣ ಅಂಭಿಗ ಹೊನ್ನಾವರ, ಉಮೇಶ್ ಮೇಸ್ತ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಮೀನುಗಾರರ ಸಮಸ್ಯೆ ಹಾಗೂ ಪರಿಹಾರ ಮಾರ್ಗಗಳು ವಿಚಾರಗೋಷ್ಠಿ ನಡೆಯಿತು. ಮಂಜುನಾಥ್ ಸ್ವಾಗತಿಸಿದರು. ಶೈಲೇಶ್ ಮತ್ತು ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.