ಆಧುನಿಕ ಜಗತ್ತಿನಲ್ಲಿ ಮಹಿಳೆ ಎಷ್ಟು ಸುರಕ್ಷಿತ, ಸುಖಿ ಎಂಬ ಪ್ರಶ್ನೆ ಕಾಡುತ್ತಿದ್ದು, ಅದೃಶ್ಯ ರಕ್ಕಸರು ಸಾಮಾಜಿಕ ವ್ಯವಸ್ಥೆಯನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ನ್ಯಾಯವಾದಿ ವೀಣಾ ಬ್ಯಾತನಾಳ ಕಿಡಿಕಾರಿದರು.
ಹಾನಗಲ್ಲ: ಆಧುನಿಕ ಜಗತ್ತಿನಲ್ಲಿ ಮಹಿಳೆ ಎಷ್ಟು ಸುರಕ್ಷಿತ, ಸುಖಿ ಎಂಬ ಪ್ರಶ್ನೆ ಕಾಡುತ್ತಿದ್ದು, ಅದೃಶ್ಯ ರಕ್ಕಸರು ಸಾಮಾಜಿಕ ವ್ಯವಸ್ಥೆಯನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ನ್ಯಾಯವಾದಿ ವೀಣಾ ಬ್ಯಾತನಾಳ ಕಿಡಿಕಾರಿದರು.
ಹಾನಗಲ್ಲಿನ ೮೯ನೇ ನಾಡಹಬ್ಬದ ಮಹಿಳಾ ಗೋಷ್ಠಿಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪ್ರೀತಿಯ ನಾಟಕಗಳ ಮೂಲಕ ವಂಚನೆಗಳು ನಡೆಯುತ್ತಿವೆ. ಸಂಪ್ರದಾಯಗಳು ಈಗ ಮಾರಾಟದ ವಸ್ತುಗಳಾಗಿವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಕುಟುಂಬಗಳೂ ವಿಫಲವಾಗುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸಂದೇಶಗಳೆಲ್ಲ ಸತ್ಯವಲ್ಲ. ಹೆಣ್ಣಮಕ್ಕಳನ್ನು ಅಶ್ಲೀಲವಾಗಿ ಬಿಂಬಿಸಿ ಮೋಜು ನೋಡುವ ದುಸ್ಸಾಹಸ ನಡೆಯುತ್ತಿದೆ. ಹೀಗಾಗಿ ಹೆಣ್ಣುಮಕ್ಕಳು ಧೈರ್ಯ ಹಾಗೂ ಎಚ್ಚರಿಕೆಯಿಂದಿರಿ, ಅಗತ್ಯಕ್ಕೆ ಕಾನೂನು ನೆರವು ಪಡೆಯಿರಿ. ಆನ್ಲೈನ್ ಮೋಸದಾಟಕ್ಕೆ ಬಲಿಯಾಗಿ ಮಕ್ಕಳು ಯುವಕ-ಯುವತಿಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಗೃತಿಯೇ ಈಗಿನ ತೀರ ಅಗತ್ಯ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಮಹಿಳೆಯನ್ನು ಅತ್ಯಂತ ಗೌರವದಿಂದ ಕಾಣುವ ಈ ನೆಲದ ಸಂಸ್ಕೃತಿಗೆ ಧಕ್ಕೆ ಬರದಂತೆ ನಡೆದುಕೊಳ್ಳುವ ಅಗತ್ಯವಿದೆ. ಇದು ಮಕ್ಕಳಿರುವಾಗಲೇ ಒಳ್ಳೆಯ ಸಂಸ್ಕಾರದ ಮೂಲಕ ಜಾಗೃತವಾಗಬೇಕಾದ ಸಂಗತಿ. ಬದುಕಿನಲ್ಲಿ ಸಂಘರ್ಷ ಬೇಡ. ಹೊಂದಾಣಿಕೆ ಬೇಕಾಗಿದೆ. ಸಮರಸದ ಜೀವನವೇ ಬದುಕಿನ ನಿಜವಾದ ಯಶಸ್ಸು. ಹಣ, ಅಧಿಕಾರ ಸ್ಥಿರವಲ್ಲ. ಸಂತಸದ ಬದುಕಿಗೆ ನೆಮ್ಮದಿ ವಾತಾವರಣ ಅತ್ಯಂತ ಮುಖ್ಯ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ, ಪುರಸಭೆ ಮಾಜಿ ಅಧ್ಯಕ್ಷರಾದ ವೀಣಾ ಗುಡಿ, ರಾಧಿಕಾ ದೇಶಪಾಂಡೆ, ದಯಾನಂದ ಛಾತ್ರಾಲಯದ ಅಧ್ಯಕ್ಷೆ ರೇಖಾ ಶೆಟ್ಟರ, ಸವಿತಾ ಉದಾಸಿ, ಸುರಕ್ಷಿತ ಶುದ್ಧ ಆಹಾರವೇ ನಮ್ಮ ಆದ್ಯತೆಯಾಗಬೇಕಾಗಿದೆ. ದುರಾಚಾರವನ್ನು ದೂರ ಸರಿಸುವಲ್ಲಿ ಸಮಾಜ ಒಟ್ಟಾಗಿ ಯೋಜಿಸಿ ಮುನ್ನಡೆಯಬೇಕಾಗಿದೆ. ಹಬ್ಬಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕ. ಭಕ್ತಿಯಲ್ಲಿ ಶಕ್ತಿಯಿದೆ. ಇಂತಹ ಹಬ್ಬಗಳು ನಮ್ಮ ಆತ್ಮವಿಶ್ವಾಸವನ್ನು ಜಾಗೃತಗೊಳಿಸುತ್ತವೆ ಎಂದರು.ಇದೇ ಸಂದರ್ಭದಲ್ಲಿ ರಂಗಗ್ರಾಮ ಶೇಷಗಿರಿಯ ಗಜಾನನ ಯುವಕ ಮಂಡಳದ ಹಿರಿಯ ಕಲಾವಿದ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ ಅವರನ್ನು ಗೌರವಿಸಲಾಯಿತು.
ಜಗದೀಶ ಮಡಿವಾಳರ ಸಂಗಡಿಗರು ನಾಡಗೀತೆ, ಭಕ್ತಿ ಗೀತೆಗಳನ್ನು ಹಾಡಿದರು. ವಿದೂಷಿ ಗುತ್ತೆಮ್ಮ ಎಚ್. ಅವರ ತಂಡದಿಂದ ಭರತ ನಾಟ್ಯ ಪ್ರದರ್ಶನ ಆಕರ್ಷಕವಾಗಿತ್ತು. ಸುಜಾತಾ ನಂದೀಶೆಟ್ಟರ ಸಂಗಡಿಗರು ಗೀತೆಗಳನ್ನು ಹಾಡಿದರು.ಶಿಕ್ಷಕಿ ರೂಪಾ ಗೌಳಿ ಸ್ವಾಗತಿಸಿದರು. ಶಿಕ್ಷಕಿ ಸುನಿತಾ ಉಪ್ಪಿನ ಕಾರ್ಯಕ್ರಮ ನಿರೂಪಿಸಿದರು. ಸುಜಾತ ನಂದಿಶೆಟ್ಟರ ವಂದಿಸಿದರು.