ಕೊಟ್ಟೂರಲ್ಲಿ ರೈತರಿಗೆ ಭರವಸೆ ಮೂಡಿಸಿದ ಮಳೆ

| Published : May 22 2024, 12:49 AM IST

ಸಾರಾಂಶ

ಕೊಟ್ಟೂರು ತಾಲೂಕಿನಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಬಾರಿ ಉತ್ತಮ ಬೆಳೆ ಬರಬಹುದು ಎಂಬ ನಿರೀಕ್ಷೆ ಮೂಡಿದೆ.

ಜಿ. ಸೋಮಶೇಖರ

ಕೊಟ್ಟೂರು: ಬಟಾಬಯಲು ಪ್ರದೇಶ, ಮಳೆಯಾಶ್ರಿತ ಪ್ರದೇಶವೆಂದೇ ಗುರ್ತಿಸಿಕೊಂಡಿರುವ ಕೊಟ್ಟೂರು ತಾಲೂಕಿನಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಸುರಿಯುತ್ತಿರುವ ಕೃತಿಕಾ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಕಳೆದ ವರ್ಷದ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಮಳೆ ಹೊಸ ಆಶಾಕಿರಣ ಮೂಡಿಸಿದೆ. ಕೊಟ್ಟೂರು ಪಟ್ಟಣ ಸೇರಿ ತಾಲೂಕಿನ ಎಲ್ಲೆಡೆ ಅತ್ಯುತ್ತಮ ಮಳೆ ಬಿದ್ದಿದೆ. ಕೊಟ್ಟೂರು ಹೋಬಳಿಯಲ್ಲಿ ಮತ್ತಷ್ಟು ಮಳೆ ಬರಬೇಕಿದೆ.

ಮೇ ತಿಂಗಳ ಆರಂಭದಿಂದಲೇ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿ ಮಳೆ ಬರುವ ಮುನ್ಸೂಚನೆ ಸಿಕ್ಕಿತ್ತು. ಈ ತಿಂಗಳ ಎರಡನೇ ವಾರವಾಗುವಷ್ಟರಲ್ಲಿ ಶೇ. 33.4ರಷ್ಟು ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಕಂಡುಬರುತ್ತಿದೆ.

ರಸಗೊಬ್ಬರ ಬೇಡಿಕೆ: ತೋಟಗಾರಿಕೆ ಹೊರತುಪಡಿಸಿ 33,400 ಹೆಕ್ಟೇರ್‌ ಮಳೆಯಾಶ್ರಿತ ಕೃಷಿ ಭೂಮಿ ತಾಲೂಕಿನಲ್ಲಿದ್ದು, ಈ ಪೈಕಿ 32,800 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. 9 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರದ ಬೇಡಿಕೆ ಪಟ್ಟಿ ಮಾಡಿಕೊಂಡು ಕೊರತೆ ಬಾರದಂತೆ 4,355 ಮೆಟ್ರಿಕ್‌ ಟನ್‌ ರಸ ಗೊಬ್ಬರವನ್ನು ಸಂಗ್ರಹಿಸಿಟ್ಟುಕೊಂಡಿದೆ.

ಇದೀಗ ಬಂದ ಮಳೆ ಹೆಸರು, ಔಡಲ, ಬಿತ್ತನೆಗೆ ಪೂರಕವಾಗಿದ್ದು, ಮತ್ತಷ್ಟು ಮಳೆಯಾದ ಕೂಡಲೆ ರೈತರು ಬಿತ್ತನೆ ಆರಂಭಿಸಲಿದ್ದಾರೆ. ಅರೆ ಬರೆ ಅಲ್ಪಸ್ವಲ್ಪ ಮಳೆ ಬಂದ ಕೂಡಲೇ ಬಿತ್ತನೆ ಮಾಡಲು ಮುಂದಾದರೆ ಮೊಳಕೆ ಪ್ರಮಾಣ ಕಡಿಮೆಯಾಗಿ ಬೀಜ ಹುಟ್ಟುವುದಿಲ್ಲ. ಈ ಕುರಿತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಸಲಹೆ ಪಡೆಯಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ರೈತರಿಗೆ ಸಲಹೆ: ಬೀಜೋಪಚಾರ ಮಾಡಿ ಬಿತ್ತದರೆ ಮೊಳಕೆ ಪ್ರಮಾಣ ಹೆಚ್ಚಾಗಿ ಉತ್ತಮ ಬೆಳೆ ಬರುತ್ತದೆ. ಈ ಬೀಜಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ರೈತರು ಈಗಾಗಲೇ ಹೊಲದಲ್ಲಿ ಕೊಟ್ಟಿಗೆ ಗೊಬ್ಬರ ಚೆಲ್ಲಿದ್ದಾರೆ. ಸಾವಯವ ಗೊಬ್ಬರ ಬಳಸದ ರೈತರು ಮಳೆ ಬಂದಾಗ ಸಾಮಾನ್ಯವಾಗಿ ಡಿಎಪಿ ಮೊರೆಹೋಗುತ್ತಾರೆ. 20:20 ರಸ ಗೊಬ್ಬರದಲ್ಲಿ ಮೂರು ಬಗೆಯ ಅಂಶಗಳು ಇದ್ದು, ಈ ರಸಗೊಬ್ಬರ ಬಳಸುವುದು ಸೂಕ್ತ ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡುತ್ತಿದ್ದಾರೆ.

ಮೆಕ್ಕೆಜೋಳ, ರಾಗಿ, ಸಜ್ಜೆ , ಜೋಳ, ಬಿತ್ತನೆಗೆ ಮುಂಬರುವ ಭರಣಿ ಮಳೆ ಸಮಯ ಸೂಕ್ತವಾಗಿದೆ. ಒಟ್ಟಾರೆ ರೈತರು ಈ ವರ್ಷ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದು, ತಮ್ಮ ಕೃಷಿ ಜಮೀನುಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.

ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆಯುವತ್ತ ಮುಂದಾಗಬೇಕು. ಕೃಷಿ ಪದ್ಧತಿ ಬದಲಾಯಿಸಿಕೊಂಡು ಸಾವಯವ ಗೊಬ್ಬರ ಬಳಕೆ ಮಾಡಿದರೆ ಭೂಮಿ ಫಲವತ್ತತೆ ಹೆಚ್ಚುತ್ತದೆ. ಮಳೆ ಬಂದಾಗ ಸಂಪೂರ್ಣ ಭೂಮಿ ಹದವಿರುವುದನ್ನು ಅರಿತು ಕೂಡಲೇ ಬಿತ್ತನೆ ಮಾಡಬೇಕು. ಮುಂದೊಮ್ಮೆ ಕಡಿಮೆ ಮಳೆಯಾದರೂ ಉತ್ತಮ ಬೆಳೆಕೊಡುವ ಸಾಧ್ಯತೆ ಇದೆ ಎಂದು ಕೊಟ್ಟೂರು ಕೃಷಿ ಅಧಿಕಾರಿ ಶ್ಯಾಮಸುಂದರ್‌ ಹೇಳುತ್ತಾರೆ.ಕೊಟ್ಟೂರು ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ಬಾರಿ ಉತ್ತಮ ಬೆಳೆ ಬರುವ ವಿಶ್ವಾಸವಿದೆ. ಈ ಕಾರಣಕ್ಕಾಗಿ ಕೃಷಿ ಚಟುವಟಿಕೆಯನ್ನು ಈಗಿನಿಂದಲೇ ಕೈಗೊಂಡಿದ್ದೇವೆ. ಈ ಬಾರಿ ಇದು ಭರವಸೆಯಾಗದೆ ಫಲ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ರೈತ ಕೊಟ್ರಪ್ಪ ಹೇಳುತ್ತಾರೆ.