ಸಾರಾಂಶ
ಚೇತರಿಸಿಕೊಳ್ಳುತ್ತಿರುವ ರಾಗಿ । ಎಮ್ಣೇದೂಡ್ಡಿಯಲ್ಲಿ 19.4 ಸೆ.ಮೀ. ಹೆಚ್ಚಿನ ಪ್ರಮಾಣದಲ್ಲಿ ಮಳೆ । 3 ದಿನಗಳು ಹಳದಿ ಅಲರ್ಟ್
ಕಡೂರು ಕೃಷ್ಣಮೂರ್ತಿಕನ್ನಡಪ್ರಭ ವಾರ್ತೆ, ಕಡೂರು
ಕಳೆದ ಒಂದು ವಾರದಿಂದಲೂ ಕಡೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಬಿಡದಂತೆ ಸುರಿಯುತ್ತಿದೆ. ತಾಲೂಕಿನ ಅನೇಕ ಕಡೆ ನಿರಂತರ ಮಳೆ ಬರುವ ಜೊತೆ ತಾಲೂಕಿನ ಎಮ್ಮೇ ದೊಡ್ಡಿ ಭಾಗ ಮತ್ತು ಸುತ್ತಮುತ್ತಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬರುತ್ತಿದೆ. ಬರಗಾಲ ಪೀಡಿತ ಕಡೂರು ತಾಲೂಕಿನ ಪ್ರದೇಶಗಳಾದ ಸಿಂಗಟಗೆರೆ, ಪಂಚನಹಳ್ಳಿ ಹೋಬಳಿಗಳಲ್ಲಿ ಮಳೆಯಿಲ್ಲದೆ ರಾಗಿ ಬೆಳೆ ಸೊರಗಿತ್ತು. ಅಗತ್ಯವಾಗಿದ್ದ ಮಳೆ ಬಂದಿರುವ ಕಾರಣ ಹಾನಿಯ ಪ್ರಮಾಣ ಕಡಿಮೆಯಾಗಿ ಮಳೆಯಿಂದ ಬಯಲು ಪ್ರದೇಶದ ಪ್ರಮುಖ ಬೆಳೆಯಾದ ರಾಗಿಗೆ ಜೀವಜಲ ದೊರೆತು ನಳನಳಿಸುತ್ತಿದೆ.ಬಿಟ್ಟುಬಿಡದೆ ಮಳೆ ಬರುತ್ತಿದ್ದು ತಾಲೂಕಿನ ಎಮ್ಣೇದೂಡ್ಡಿ ಪ್ರದೇಶದಲ್ಲಿ 19.4 ಸೆ.ಮೀ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಸಿಂಗಟಗೆರೆ ಯಲ್ಲಿ ಅತಿ ಕಡಿಮೆ ಮಳೆಯಾಗಿದೆ. ಕೆರೆ ಕಟ್ಟೆಗಳಿಗೆ ನೀರು ಹರಿವ ಮೂಲಕ ನೀರಿನ ಸಮಸ್ಯೆ ನಿವಾರಣೆ ಆಗಿದೆ. ಕುರುಡನ ಮಳೆ ಎಂದು ಕರೆಯುವ ಈ ಅಡ್ಡ ಮಳೆಗಳು ಈ ಭಾರಿ ಜೋರಾಗಿ ಬರುತ್ತಿವೆ. ಮಳೆ ಬಾರದ ಕಾರಣ 2 ವರ್ಷಗಳ ಹಿಂದೆ ತಾಲೂಕಿನ ಅನೇಕ ಕಡೆ ಮುಂಗಾರಿನಲ್ಲಿ ಹಾಕಿದ್ದ ಹಲಸಂದೆ, ಹೆಸರು, ಉದ್ದು,ಸೂರ್ಯ ಕಾಂತಿ, ಹುರುಳಿ ಮತ್ತಿತರ ಕಾಳಿನ ಬೆಳೆಗಳು ಬಾರದೆ ರೈತರು ನಷ್ಟಕ್ಕೆ ಈಡಾಗಿದ್ದರು. ಈ ಬಾರಿ ಹೇಳಿ ಕೊಳ್ಳುವ ಪ್ರಮಾಣದಲ್ಲಿ ಬೆಳೆಗಳು ಬಾರದೆ ಇದ್ದರೂ ರಾಗಿಗೆ ಅಗತ್ಯವಾದ ನೀರು ಹಾಗೂ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಿದಂತಾಗಿ ರೈತರಲ್ಲಿ ಮಂದಹಾಸ ಮೂಡಿಸಿದೆ.
-- ಬಾಕ್ಸ್ --ತಾಲೂಕಲ್ಲಿ 41,505 ಹೆಕ್ಟೇರ್ ನಲ್ಲಿ ರಾಗಿ ಬಿತ್ತನೆ
ಈ ಭಾರಿ ಕಡೂರು ತಾಲೂಕಿನಲ್ಲಿ 41,505 ಹೆಕ್ಟೇರ್ ನಲ್ಲಿ ರಾಗಿ ಬಿತ್ತನೆ ಆಗಿದೆ. ಆದರೆ ಮಳೆ ಇಲ್ಲದ ಕಾರಣ ರಾಗಿ ಸೊರಗಿತ್ತು. ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಬರುತ್ತಿರುವ ಹಿನ್ನಲೆಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿವೆ. ಗಡಿ ಭಾಗಗಳಾದ ಪಂಚನಹಳ್ಳಿ ಮತ್ತಿತರ ಕಡೆ ಕಡಿಮೆ ಮಳೆ ಬರುತ್ತಿದ್ದು, ಆದರೂ ಗಟ್ಟಿ ಬೆಳೆಯಾದ ರಾಗಿ ಸುಧಾರಿಸಿಕೊಳ್ಳುತ್ತಿದೆ. ಕೃಷಿ ಇಲಾಖೆಯಿಂದಲೂ ರಾಗಿ ಬೆಳೆ ಸಮೀಕ್ಷೆ ಮಾಡಿಸುತ್ತಿದ್ದು ಅ. 25 ಕೊನೆಯ ದಿನಾಂಕವಾಗಿದೆ.--- ಅಶೋಕ್ ಎಂ,
ಕೃಷಿ ಸಹಾಯಕ ನಿರ್ದೇಶಕರು.--
ಜಿಲ್ಲೆಯಲ್ಲಿ ಮುಂದುವರೆದ ಮಳೆ: 3 ದಿನಗಳು ಹಳದಿ ಅಲರ್ಟ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಸೋಮವಾರ ಮಳೆ ಗುಡುಗು ಸಹಿತ ಮುಂದುವರಿದಿದ್ದು, ಆದರೆ, ಆರ್ಭಟ ಕಡಿಮೆಯಾಗಿತ್ತು.
ಭಾನುವಾರ ರಾತ್ರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಡುವು ನೀಡಿತ್ತು. ಆದರೆ, ಶೃಂಗೇರಿ ಸೇರಿದಂತೆ ಕೆಲವೆಡೆ ಗುಡುಗು ಸಹಿತ ಮಳೆ ಮುಂದುವರೆದಿದೆ.ತರೀಕೆರೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಆದರೆ, 3 ಗಂಟೆಯ ವೇಳೆಗೆ ಸಾಧಾರಣ ಮಳೆ ಬಂದು ನಂತರ ಬಿಡುವು ನೀಡಿ ಸಂಜೆ 5 ಗಂಟೆಗೆ ಮತ್ತೆ ಪ್ರಾರಂಭಗೊಂಡಿತು.ಕಡೂರು ಹಾಗೂ ಬೀರೂರು ಪಟ್ಟಣಗಳಲ್ಲಿ ಸಂಜೆ ನಂತರ ಗುಡುಗು ಸಹಿತ ಮಳೆ ಬಂದಿತು. ಎನ್.ಆರ್.ಪುರದಲ್ಲಿ ಭಾನುವಾರ ರಾತ್ರಿ ಧಾರಾಕಾರ ವಾಗಿ ಸುರಿದ ಮಳೆ ಸೋಮವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ತುಂತುರು ಮಳೆ ಮುಂದುವರೆದಿತ್ತು. ಕೊಪ್ಪ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಾಧಾರಣ ಮಳೆ ಬಂದಿದ್ದು, ನಗರ ಪ್ರದೇಶದಲ್ಲಿ ಸಂಜೆಯವರೆಗೆ ಬಿಡುವು ನೀಡಿತ್ತು.-- ಬಾಕ್ಸ್--
ಪ್ರವಾಸಿಗರಿಗೆ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚನೆಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 3 ದಿನಗಳು ಹಳದಿ ಅಲರ್ಟ್ ಇದ್ದು, ಜಿಲ್ಲೆಯಲ್ಲಿನ ಹಳ್ಳಿ, ಕೆರೆ, ನದಿಗಳು ತುಂಬಿ ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿದೆ. ಹಲವೆಡೆ ಭೂಕುಸಿತ ಸಹ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮುಂದಿನ ಒಂದು ವಾರದವರೆಗೆ ಅಥವಾ ಮಳೆ ಕಡಿಮೆಯಾಗುವವರೆಗೆ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಲಾಗಿದೆ.ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸಬೇಕು. ಸಾರ್ವಜನಿಕರು ಜಾನುವಾರು ಗಳನ್ನು ಶುಚಿಗೊಳಿಸಲು ಅಥವಾ ಬಟ್ಟೆಗಳನ್ನು ತೊಳೆಯಲು ಹಳ್ಳಿ, ಕೆರೆ ಕಟ್ಟೆಗಳಿಗೆ ತೆರಳಬಾರದು. ಅತಿಯಾದ ಮಳೆಯಿಂದ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಚಾರಣಿಗರು ಹಾಗೂ ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಅನ್ನು ಒಂದು ವಾರ ಸ್ಥಗಿತಗೊಳಿಸಿ ಮುಂದೂಡಬೇಕು.
ರಾಜ್ಯದ ವಿವಿಧ ಸ್ಥಳಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ವನ್ನು ಒಂದು ವಾರ ಮುಂದೂಡಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.ಕಡೂರು. 21ಕೆಕೆಡಿಯು1.
ಮಳೆಯಿಂದ ಚೇತರಿಸಿಕೊಂಡಿರುವ ಸಿಂಗಟಗೆರೆ ಹೋಬಳಿಯ ವಿ ಯರದಕೆರೆ ಜಮೀನುಗಳಲ್ಲಿನ ರಾಗಿ ಬೆಳೆ.