ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರಸ್ತೆಗಳನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಚಿಕ್ಕಮಗಳೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹಾಗಾಗಿ ತಾಲೂಕಿನ ಅನೇಕ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇವುಗಳ ದುರಸ್ತಿಗೊಳಿಸಬೇಕು ಜತೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಹೊಸ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ಬರುವ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದರು.ತಾಲ್ಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಕಾಫಿ, ಭತ್ತ, ಬಾಳೆ ಸೇರಿದಂತೆ ಬೆಳೆದು ನಿಂತಿರುವ ಅನೇಕ ಬೆಳೆಗಳು ನಾಶವಾಗುತ್ತಿವೆ. ಜೊತೆಗೆ ಸಾರ್ವಜನಿಕರು ಭಯದ ವಾತಾವರಣದಲ್ಲಿ ಓಡಾಡುತ್ತಿದ್ದಾರೆ. ಅಧಿಕಾರಿಗಳು ಆನೆ ಬೀಡು ಬಿಟ್ಟಿರುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಕಾಡಿಗೆ ಅಟ್ಟಬೇಕು ಹಾಗೂ ಆನೆ ಹಾವಳಿಯಿಂದ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.
ತಾಲೂಕಿನ ಅನೇಕ ಸಾರ್ವಜನಿಕರಿಗೆ ಮನೆ ಹಕ್ಕು ಪತ್ರ ಒದಗಿಸುವಲ್ಲಿ ವಿಳಂಬವಾಗುತ್ತಿದೆ. ಹಕ್ಕು ಪತ್ರ ವಿತರಣೆಗೆ ಇರುವ ತಾಂತ್ರಿಕ ಹಾಗೂ ಇತರೆ ದೋಷಗಳನ್ನು ಗಮನಿಸಿ ಸರಿಪಡಿಸಬೇಕು ಹಾಗೂ ನಿವೇಶನ ರಹಿತ ಅರ್ಹರಿಗೆ ನಿವೇಶನ ಒದಗಿಸಿ ಕೊಡಬೇಕು ಮತ್ತು ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಜಾಗ ಗುರುತಿಸಿ ನೀಡುವಂತೆ ತಿಳಿಸಿದರು. ಕೆಆರ್‌ಐಡಿಎಲ್ ಅಧಿಕಾರಿ ಮಾತನಾಡಿ, ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾರ್ಯವು ಪ್ರಗತಿಯಲ್ಲಿದೆ ಹಾಗೂ ಹೊಸ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿ ಗುಣಮಟ್ಟದ ರಸ್ತೆ ನಿರ್ಮಿಸಿ ಈ ಆರ್ಥಿಕ ವರ್ಷಾಂತ್ಯದೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ನೇಮಿಸಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಕೊಠಡಿ ದುರಸ್ತಿಯಲ್ಲಿದ್ದರೆ ದುರಸ್ತಿಗೊಳಿಸಿ ಬೋಧನ ಕೊಠಡಿಗಳನ್ನು ವ್ಯವಸ್ಥಿತವಾಗಿರಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಚಿಕ್ಕಮಗಳೂರು ತಾಲ್ಲೂಕು ತಹಶೀಲ್ದಾರ್ ಡಾ. ಸುಮಂತ್, ಕಡೂರು ತಾಲ್ಲೂಕು ತಹಸೀಲ್ದಾರ್ ಪೂರ್ಣಿಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ ವಿಜಯಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹಾಗೂ ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಮಂಜುನಾಥ್, ಕಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಹಾಗೂ ತಾಲ್ಲೂಕು ಕೆಡಿಪಿ ಸಭೆಯ ನಾಮ ನಿರ್ದೇಶಿತ ಸದಸ್ಯರು ಹಾಗೂ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಕಾಡಾನೆ ಹಾವಳಿ ಬಗ್ಗೆ ಕ್ರಮವಹಿಸಿ: ಸಿ.ಟಿ. ರವಿವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಾಡಾನೆ ಹಾವಳಿಯು ಪ್ರತಿ ವರ್ಷ ಈ ಸಮಯದಲ್ಲಿ ಇರುತ್ತದೆ. ಇದರ ಕುರಿತು ಅಧಿಕಾರಿಗಳು ಪೂರ್ವ ನಿಯೋಜಿತವಾಗಿ ಅಗತ್ಯ ಕ್ರಮ ವಹಿಸಬೇಕು. ಆಹಾರ ಅರಸಿಯೇ ನಾಡಿಗೆ ಬರುತ್ತಿವೆ. ಹಾಗಾಗಿ ಅರಣ್ಯಗಳಲ್ಲಿ ಹೆಚ್ಚು ಹಲಸು, ನೇರಳೆ, ಬಾಳೆ, ಬೈನೆ, ಬಿದಿರುಗಳಂತಹ ಇತರೆ ಹಣ್ಣಿನ ಸಸಿಗಳನ್ನು ಬೆಳೆಸಿ ಅವುಗಳಿಗೆ ಆಹಾರ ಕೊರತೆಯಾಗದಂತೆ ಗಮನ ಹರಿಸಬೇಕು. ರಸ್ತೆ ಬದಿಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುವಂತ ಹಾಗೂ ಪರಿಸರ ಸ್ನೇಹಿ ಸಸಿಗಳನ್ನು ನೆಡಬೇಕು ಎಂದರು.