ಬಿಡುವು ಕೊಟ್ಟ ಮಳೆರಾಯ, ನಿಟ್ಟುಸಿರು ಬಿಟ್ಟ ಅನ್ನದಾತರು

| Published : Oct 20 2024, 01:59 AM IST

ಸಾರಾಂಶ

ಈಗಾಗಲೇ ತಾಲೂಕಿನ ಡಂಬಳ, ಡೋಣಿ, ಪೇಠಾಲೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈರುಳ್ಳಿ ಕಿತ್ತು ಹೆಚ್ಚಿ ಹಾಕಲಾಗಿದೆ

ಶರಣು ಸೊಲಗಿ ಮುಂಡರಗಿ

ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಶನಿವಾರ ಕೊಂಚ ಮಟ್ಟಿಗೆ ಬಿಡುವು ಕೊಡುವ ಮೂಲಕ ಮಳೆಯಿಂದ ಕಂಗಾಲಾಗಿದ್ದ ರೈತರು ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ. ಸತತ ಮಳೆಯಿಂದ ರೈತರ ಬೆಳೆಗಳು ಸಂಪೂರ್ಣವಾಗಿ ನೀರಲ್ಲಿ ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತಾಲೂಕಿನ ಅನೇಕ ಗ್ರಾಮಗಳಲ್ಲಿ ಸೂರ್ಯಕಾಂತಿ, ಈರುಳ್ಳಿ ಬೆಳೆಗಳು ನೀರಲ್ಲಿ ನಿಂತಿವೆ. ಕಟಾವಿಗೆ ಬಂದಿದ್ದ ಸಾವಿರಾರು ಹೆಕ್ಟೇರ್ ಪ್ರದೇಶದ ಮೆಕ್ಕೆ ಜೋಳದ ಒಕ್ಕಲು ಮಾಡಲು ಅತಿಯಾದ ಮಳೆಯಿಂದ ರೈತರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ಮಳೆ ಯಾವಾಗ ನಿಲ್ಲುತ್ತದೆ ಎಂದು ಆಕಾಶದತ್ತ ಮುಖ ಮಾಡಿ ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ. ಬಿಸಿಲು ಬಿದ್ದರೆ ಮಾತ್ರ ರೈತರು ತಮ್ಮೆಲ್ಲ ಫಸಲು ರಾಶಿ ಮಾಡಿಕೊಂಡು ಮಾರಾಟ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ರೈತರು ಬೆಳೆ ಬಂದರೂ ಅದನ್ನು ಒಕ್ಕಲು ಮಾಡಿಕೊಳ್ಳಲು ಆಗದೇ ತೊಂದರೆ ಅನುಭವಿಸಬೇಕಾಗುತ್ತದೆ.

ಈಗಾಗಲೇ ತಾಲೂಕಿನ ಡಂಬಳ, ಡೋಣಿ, ಪೇಠಾಲೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈರುಳ್ಳಿ ಕಿತ್ತು ಹೆಚ್ಚಿ ಹಾಕಲಾಗಿದೆ. ಅತಿಯಾದ ಮಳೆಯಿಂದ ನೀರಲ್ಲಿ ನಿಂತಂತಾಗಿವೆ. ತಾಡಪತ್ರಿ ಅಥವಾ ಗುಡಾರು ಏನಾದರೂ ಹೆಚ್ಚಿ ನೀರು ಬರದಂತೆ ನೋಡಿಕೊಳ್ಳಬೇಕೆಂದರೆ ಈರುಳ್ಳಿ ಕೊಳೆಯುವ ಸಾಧ್ಯತೆ ಇರುವುದರಿಂದ ರೈತರಲ್ಲಿ ಏನು ಮಾಡಬೇಕೆಂದು ಆತಂಕ ಮನೆ ಮಾಡಿದಂತಾಗಿದೆ.

ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆ ಜೋಳದ ಫಸಲು ಬಂದಿದ್ದರಿಂದ ರೈತರಿಗೆ ಅವುಗಳನ್ನು ಒಕ್ಕಲು ಮಾಡುವುದೇ ಬಹು ದೊಡ್ಡ ಸವಾಲಾಗಿದೆ. ಮೊದಲೇ ಒಕ್ಕಲು ಕಣಗಳ ಕೊರತೆ ಇರುವುದರಿಂದ ಮುಂಡರಗಿ ತಾಲೂಕಿನಾದ್ಯಂತ ಎಲ್ಲೆಂದರಲ್ಲಿ ರಸ್ತೆ ಮೇಲೆ ರೈತರು ಮೆಕ್ಕೆಜೋಳ ಹಾಕಿದ್ದಾರೆ. ಅಲ್ಲದೇ ಮುಂಡರಗಿ ಪಟ್ಟಣದ ಹೊಸ ಎಪಿಎಂಸಿ ಆವರಣ, ಡಂಬಳ ಎಪಿಎಂಸಿ ಆವರಣ ಸೇರಿದಂತೆ ಎಲ್ಲ ರಸ್ತೆಗಳು ಮೆಕ್ಕೆ ಜೋಳದಿಂದ ತುಂಬಿ ತುಳುಕುತ್ತಿವೆ. ಡಂಬಳ ತೋಂಟದಾರ್ಯ ಮಠದ ಸುತ್ತಮುತ್ತ ರೈತರು ಈರುಳ್ಳಿ ಹಾಕಿದ್ದು, ಮಳೆಯಿಂದ ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ.

ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಹಮ್ಮಿಗಿ ಹತ್ತಿರದ 10 ಎಕರೆ ಪ್ರದೇಶದಲ್ಲಿ ಬೆಳೆದು ರಾಶಿ ಮಾಡಬೇಕಾದ ಮೆಕ್ಕೆ ಜೋಳದ ಬೆಳೆ ಸಂಪೂರ್ಣವಾಗಿ ನೀರಲ್ಲಿ ನಿಂತಿದೆ. ಈ ಬಾರಿ ಉತ್ತಮವಾದ ಬೆಳೆ ಬಂದಿದ್ದು, ಈ ಕೂಡಲೇ ಮಳೆ ನಿಂತು ಸಂಪೂರ್ಣವಾಗಿ ಬಿಸಿಲು ಬಿದ್ದರೆ ಮಾತ್ರ ರಾಶಿ ಮಾಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಕಲ್ಲು ಹೋಯ್ತು ಕಲ್ಲಿಗೆ ಹತ್ತಿದ ಬೆಲ್ಲಾನೂ ಹೋಯ್ತು ಎಂದಂತಾಗುತ್ತದೆ ರೈತನ ಬದುಕು ಎಂದು ಹಮ್ಮಿಗಿ ಗ್ರಾಮದ ರೈತ ಕೋಟ್ರೇಶ ಬಳ್ಳಾರಿ ತಿಳಿಸಿದ್ದಾರೆ.