ಸಾರಾಂಶ
ಯಾದಗಿರಿ : ಕಳೆದ ನಾಲ್ಕು ದಿನಗಳಿಂದ ಯಾದಗಿರಿ ಜಿಲ್ಲೆಯ ವಿವಿಧೆಡೆ ಸುರಿಯುತ್ತಿದ್ದ ಭಾರಿ ಮಳೆ ಬುಧವಾರ ತಗ್ಗಿದ್ದು, ಸತತ ಮಳೆಯಿಂದಾಗಿ ತತ್ತರಿಸಿದ್ದ ಜನಜೀವನ ಇದರಿಂದ ನಿಟ್ಟುಸಿರು ಬಿಟ್ಟಂತಾಗಿದೆ.
ಶುಕ್ರವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳಗಳು ಭರ್ತಿಯಾಗಿವೆ. ತೆಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ, ಅಸ್ತವಸ್ಯಕ್ಕೆ ಕಾರಣವಾಗಿತ್ತು. ಜಿಲ್ಲೆಯ ಆರು ತಾಲೂಕುಗಳಲ್ಲಿ 688 ಹೆ. ಅಂದಾಜು ಬೆಳೆಹಾನಿ ಅಂದಾಜಿಸಲಾಗಿದೆ. 269 ಮನೆಗಳು ಭಾಗಶ: ಕುಸಿದಿವೆ. ಶೇ.20 ರಷ್ಟು ಹೆಚ್ಚು ಮಳೆ ಸುರಿದಿದೆ, ಜೂನ್1 ರಿಂದ ವಾಡಿಕೆ ಮಳೆ 428 ಮಿ.ಮೀ. ಆಗಬೇಕಿದ್ದರೆ, ಈವರೆಗೆ (ಸೆ.4) 497 ಮಿ.ಮೀ. ಮಳೆ ಸುರಿದಿದೆ. ಸುರಪುರ ಹಾಗೂ ವಡಗೇರಾ ತಾಲೂಕಿನಲ್ಲಿ ಹೆಚ್ಚು ಬೆಳೆಹಾನಿಯಾಗಿದೆ.
ಹತ್ತಿ 393 ಹೆ. ಹಾಗೂ ಭತ್ತ 271 ಹೆ. ಪ್ರದೇಶದಲ್ಲಿ ಹಾನಿ ಅಂದಾಜಿಸಲಾಗಿದೆ.
ಜಿಲ್ಲೆಯ ಹತ್ತಿಕುಣಿ ಜಲಾಶಯ ಭರ್ತಿಯಾಗಿದ್ದು, ಕಾಲುವೆಗಳಿಗೆ ನೀರು ಹೊರಬಿಡಲಾಗಿದೆ. ಭೀಮಾ ನದಿ ಪಾತ್ರದಲ್ಲಿ ಅಬ್ಬರ ಇನ್ನೂ ಕಮ್ಮಿಯಾಗಿಲ್ಲ. ಸತತ ಮಳೆಯಿಂದಾಗಿ ನದಿಪಾತ್ರದಲ್ಲಿ ಪ್ರವಾಹ ಭೀತಿ ಆವರಿಸಿತ್ತು. ಕಳೆದ ನಾಲ್ಕೈದು ದಿನಗಳಿಂದ ಮೋಡಗಳ ಮಧ್ಯೆ ಮರೆಯಾಗಿದ್ದ ಸೂರ್ಯ ಬುಧವಾರ (ಸೆ.4) ಕೊಂಚ ಇಣುಕಿದ್ದನಾದರೂ, ಸಂಜೆ ಮತ್ತು ರಾತ್ರಿ ಕೆಲವೆಡೆ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಸುರಿದಿದೆ.