ಸಾರಾಂಶ
ಬೇಸಿಗೆ ಆರಂಭ ಆದಾಗಿನಿಂದ ಮಳೆ ಇಲ್ಲದೇ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ಉತ್ತಮ ಮಳೆ ಆಗುತ್ತಿದ್ದು, ತಾಲೂಕಿನ ಬಹುತೇಕ ಎಲ್ಲ ನದಿ-ತೊರೆಗಳು ಮೈದಳೆಯುತ್ತಿವೆ.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸತತವಾಗಿ ಉತ್ತಮ ಮಳೆ ಆಗುತ್ತಿದೆ. ಇದರಿಂದಾಗಿ ವಾತಾವರಣ ತಂಪಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಲ್ಲಿ ಕೊಂಚ ಸಮಾಧಾನ ವ್ಯಕ್ತವಾಗುತ್ತಿದೆ. ಶನಿವಾರ ಇಡೀ ದಿನ ತಾಲೂಕಿನಲ್ಲಿ ಮಳೆಗಾಲದ ಛಾಯೆ ಕಂಡುಬಂದಿದೆ. ಬೇಸಿಗೆ ಆರಂಭ ಆದಾಗಿನಿಂದ ಮಳೆ ಇಲ್ಲದೇ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತಾಲೂಕಿನ ಬಹುತೇಕ ಎಲ್ಲ ನದಿ-ತೊರೆಗಳು ನೀರಿನ ಕೊರತೆಯಿಂದ ಒಣಗಿದ್ದವು. ತೆರೆದ ಬಾವಿಗಳು ಮಾತ್ರವಲ್ಲದೇ, ಕೊಳವೆ ಬಾವಿಗಳಲ್ಲೂ ನೀರಿನ ಕೊರತೆ ಉಂಟಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ತಾಲೂಕಿನ ಕೆಲವು ಭಾಗದಲ್ಲಿ ಕುಡಿಯುವ ನೀರಿಗೂ ಕೊರತೆ ಉಂಟಾಗಿದ್ದು ಕೃಷಿಭೂಮಿಗೂ ನೀರಿಲ್ಲದೇ ಅಡಕೆ ತೋಟಗಳು ಒಣಗುವ ಸ್ಥಿತಿ ನಿರ್ಮಾಣವಾಗಿ ರೈತರ ಸಂಕಷ್ಟಕ್ಕೂ ಕಾರಣವಾಗಿತ್ತು.ಎರಡು ಮೂರು ದಿನ ಸತತವಾಗಿ ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿದೆ. ಮಾತ್ರವಲ್ಲ, ನೀರಿಲ್ಲದೇ ಹರಿವನ್ನೇ ನಿಲ್ಲಿಸಿದ್ದ ತುಂಗಾ, ಮಾಲತಿ ಮುಂತಾದ ನದಿಗಳಲ್ಲಿ ನಿಧಾನವಾಗಿ ನೀರು ಹರಿಯುವುದಕ್ಕೂ ಪ್ರಾರಂಭವಾಗಿದೆ. ಶುಕ್ರವಾರ ಮಧ್ಯರಾತ್ರಿ ಆರಂಭವಾದ ಮಳೆ ತಾಲೂಕಿನಾದ್ಯಂತ ಶನಿವಾರ ಬೆಳಗಿನ ತನಕ ಸುಮಾರು 5 ಗಂಟೆ ಗುಡುಗಿನಿಂದ ಕೂಡಿದ ಮಳೆಯಾಗಿದೆ.
ಮಳೆ ಕೊರತೆಯಿಂದ ಕಂಗಾಲಾಗಿದ್ದ ತಾಲೂಕಿನ ರೈತರ ಮುಖದಲ್ಲಿ ಸಂತಸ ಮೂಡಿದೆ. ತಾಲೂಕಿನ ದೇಮ್ಲಾಪುರದಲ್ಲಿ ಮರ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆಯನ್ನು ಹೊರತುಪಡಿಸಿ, ಈ ವರ್ಷ ತಾಲೂಕಿನಲ್ಲಿ ಗಾಳಿ-ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸದಿರುವುದು ಸಂತಸದ ಸಂಗತಿಯಾಗಿದೆ. ಸತತ ಮಳೆ ಆಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಒಂದಿಷ್ಟು ಬಗೆಹರಿಯುವ ಸಾಧ್ಯತೆಯೊಂದಿಗೆ ಜಾನುವಾರುಗಳಿಗೆ ಮೇವು ದೊರೆಯುವ ಆಶಾಭಾವನೆಯೂ ಇದೆ.