ಸಾರಾಂಶ
ಸಾಗರ: ಸಂಗೀತ ಕಲೆ ಬದುಕಿನ ಸಂಸ್ಕಾರವನ್ನು ಧಾರೆ ಎರೆದುಕೊಡುವ ಅಪರೂಪದ ಶಿಕ್ಷಣ ಪದ್ಧತಿ ಎಂದು ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಸಾಗರ: ಸಂಗೀತ ಕಲೆ ಬದುಕಿನ ಸಂಸ್ಕಾರವನ್ನು ಧಾರೆ ಎರೆದುಕೊಡುವ ಅಪರೂಪದ ಶಿಕ್ಷಣ ಪದ್ಧತಿ ಎಂದು ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಇಲ್ಲಿನ ವೇದನಾದ ಪ್ರತಿಷ್ಠಾನ ಮತ್ತು ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದಿಂದ ನಡೆಯುತ್ತಿರುವ ೨೫ನೇ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ವಿವಿಧ ಸಂಗೀತ ಮಾದರಿಗಳು ಭಕ್ತಿಯ ಸಮರ್ಪಣೆಯ ಮಾರ್ಗಗಳಲ್ಲ. ಮನರಂಜನೆಯ ಮಾರ್ಗವಾಗಿಯಷ್ಟೇ ಕಾಣುವುದಿಲ್ಲ. ಸಂಗೀತದ ವ್ಯಾಪ್ತಿ ವಿಸ್ತಾರವಾದುದು ಎಂದರು.ಆಧುನಿಕ ತಂತ್ರಜ್ಞಾನ ನಮ್ಮ ಸಂಸ್ಕೃತಿ, ಪರಂಪರೆಯ ಮೇಲೆ ಗಾಢ ಪರಿಣಾಮಗಳನ್ನು ಬೀರಿ ಪಲ್ಲಟಗಳಿಗೆ ಕಾರಣವಾಗಿದೆ. ಇಂತಹ ಹೊತ್ತಿನಲ್ಲಿ ಸಂಗೀತ ನಮ್ಮ ಪಾರಂಪರಿಕ ನಡಾವಳಿಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ರಜತ ಸಾರಂಗಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಸಾಹಿತಿ ಗಜಾನನ ಶರ್ಮ ಹುಕ್ಕಲು ಮಾತನಾಡಿ, ಸ್ಮರಣ ಸಂಚಿಕೆಗಳಲ್ಲಿನ ಸದ್ಗುರು ಹಿಂದೂಸ್ತಾನಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಬರಹಗಳನ್ನು ಓದುವವರು ಅಲ್ಲಿ ಅವರು ಪಡೆದ ನೈತಿಕ ಸಂಸ್ಕಾರಗಳಿಂದ ಗಾಢ ಪ್ರಭಾವಕ್ಕೊಳಗಾಗುವುದು ನಿಶ್ಚಿತ. ಉಳಿದೆಲ್ಲ ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮದ ಮೌಲ್ಯಗಳ ಹಿನ್ನೆಲೆಯಲ್ಲಿಯೇ ಸ್ಮರಣ ಸಂಚಿಕೆಗಳು ಇವತ್ತಿಗೂ ಪ್ರಚಲಿತದಲ್ಲಿವೆ ಎಂದರು.
ಶ್ರೀಧರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಪುಸ್ತಕಾಲಯದ ವೈ.ಎ.ದಂತಿ, ಸಂಗೀತೋತ್ಸವ ಸಮಿತಿ ಗೌರವಾಧ್ಯಕ್ಷ ವಿ.ಗಣೇಶ್, ಮಾ.ವೆಂ.ಸ.ಪ್ರಸಾದ್ ಇನ್ನಿತರರು ಹಾಜರಿದ್ದರು.