ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿ ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್ (ಟಿಎಚ್‌ಇ) ಇಂಪ್ಯಾಕ್ಟ್ ರ‍್ಯಾಂಕಿಂಗ್ಸ್ ಪಟ್ಟಿಯಲ್ಲಿ ಲಿಂಗ ಸಮಾನತೆ ವಿಭಾಗದಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ.
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿ ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್ (ಟಿಎಚ್‌ಇ) ಇಂಪ್ಯಾಕ್ಟ್ ರ‍್ಯಾಂಕಿಂಗ್ಸ್ ಪಟ್ಟಿಯಲ್ಲಿ ಲಿಂಗ ಸಮಾನತೆ ವಿಭಾಗದಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಮಾಹೆ, ಒಟ್ಟಾರೆಯಾಗಿ ಟಿಎಚ್‌ಇ ಜಾಗತಿಕ ರ‍್ಯಾಂಕಿಂಗ್‌ನಲ್ಲಿ 1001 - 200 ರ‍್ಯಾಂಕಿಂಗ್ಸ್ ಬ್ಯಾಂಡ್ ಕಾಯ್ದುಕೊಂಡಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ಸಂಶೋಧನೆ, ಬೋಧನೆ, ಜನಸಂಪರ್ಕ ಮತ್ತು ಸಾಂಸ್ಥಿಕ ಮೇಲ್ವಿಚಾರಣೆಯಲ್ಲಿ ಅತ್ಯುನ್ನತ ಸಾಧನೆ ಮಾಡುವ ತನ್ನ ಬದ್ಧತೆಯನ್ನು ಈ ರ‍್ಯಾಂಕಿಂಗ್ ಎತ್ತಿ ತೋರಿಸಿದೆ ಎಂದು ಮಾಹೆ ಹೆಮ್ಮೆ ವ್ಯಕ್ತಪಡಿಸಿದೆ.
ಲಿಂಗ ಸಮಾನತೆಗಾಗಿ ಕಳೆದ ಬಾರಿ 11ನೇ ಸ್ಥಾನದಲ್ಲಿದ್ದ ಮಾಹೆ ಈ ಬಾರಿ 1ನೇ ಸ್ಥಾನಕ್ಕೇರಿದೆ. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ವಿಭಾಗದಲ್ಲಿ 74ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಗುಣಮಟ್ಟದ ಶಿಕ್ಷಣಕ್ಕೆ 43ರಿಂದ 23ನೇ ಮತ್ತು ಗುರಿಗಳ ಪಾಲುದಾರಿಕೆಯಲ್ಲಿ 601 - 800 ಬ್ಯಾಂಡ್‌ನಲ್ಲಿದ್ದ ಮಾಹೆ ಈಗ ಜಾಗತಿಕವಾಗಿ 93ನೇ ರ‍್ಯಾಂಕ್ ಪಡೆದುಕೊಂಡಿದೆ.ಮಾಹೆಯ ಈ ಸಾಧನೆಯ ಬಗ್ಗೆ ಉಪಕುಲಪತಿ ಡಾ. ಶರತ್ ಕೆ. ರಾವ್ ಅವರು, ಇಂಪ್ಯಾಕ್ಟ್ ರ‍್ಯಾಂಕಿಂಗ್ಸ್ ನಲ್ಲಿ ಈ ಸಾಧನೆಯು ಶಿಕ್ಷಣ, ಸಂಶೋಧನೆ, ಆರೋಗ್ಯ ರಕ್ಷಣೆ ಮತ್ತು ಸಮುದಾಯದ ಒಳಗೊಳ್ಳುವಿಕೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮಾಹೆಗಿರುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಈ ರ‍್ಯಾಂಕಿಂಗ್ ನಮ್ಮ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು, ಆರೋಗ್ಯ ವೃತ್ತಿಪರರು ಮತ್ತು ಪಾಲುದಾರರ ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.