- ಎಸ್. ಜಾನಕಿ ಗೀತ ನಮನ, ಆರ್. ದೇವಾನಂದ್ ಸ್ಮರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆಎಸ್. ಜಾನಕಿ ಅವರು ಭಾರತೀಯ ಸಂಗೀತಾ ಲೋಕದ ಅಪರೂಪದ ರತ್ನ, ಮಧುರ ಕಂಠದ ಗಾಯಕಿ, ದಕ್ಷಿಣ ಭಾರತದ ಕೋಗಿಲೆ ಎಂದು ಪ್ರಸಿದ್ಧರಾಗಿದ್ದರು ಎಂದು ಕಲಾವಿದೆ ಸುನಿತಾ ಕಿರಣ್ ಹೇಳಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕು ಘಟಕ, ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಹಾಗೂ ಇನ್ನರ್ ವೀಲ್ ತಾಲೂಕು ಘಟಕ ತಾಪಂನಲ್ಲಿ ನಡೆದ ಸ್ವರ ಸಾಮ್ರಾಜ್ಞೆ ಎಸ್.ಜಾನಕಿ ಗೀತ ನಮನ ಹಾಗೂ ಆರ್.ದೇವಾನಂದ್ ಸ್ಮರಣೆಯಲ್ಲಿ ಮಾತನಾಡಿ ಎಸ್.ಜಾನಕಿ 1957 ರಿಂದ ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 48,000ಕ್ಕೂ ಅಧಿಕ ಗೀತೆಗಳನ್ನ ಹಾಡಿದ್ದಾರೆ. 17 ಭಾರತೀಯ ಭಾಷೆಗಳಲ್ಲದೆ, ವಿದೇಶಿ ಭಾಷೆಗಳಲ್ಲೂ ಹಾಡಿದ್ದಾರೆ. ಕನ್ನಡದ ಹೆಮ್ಮೆಯ ಕವಿಗಳ ಕವನ ಗಳಿಗೆ ಧ್ವನಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ಸಾಹಿತಿಗಳ ಗೀತೆಯ ಅರ್ಥ ತಿಳಿದು ಹಾಡುತ್ತಿದ್ದರು ಎಂದು ಹೇಳಿದರು.ಇವರ ಹಾಡುಗಳು ಇಂದಿಗೂ ಸಂಗೀತಾಸಕ್ತರ ಹೃದಯದಲ್ಲಿ ಚಿರಸ್ಥಾಯಿ. ಆ ಹಾಡುಗಳು ಕೇವಲ ಸಂಗೀತವಲ್ಲ ಅದು ಬದುಕಿನ ನೆನಪುಗಳನ್ನು ಮತ್ತೆ ಮತ್ತೆ ನಮ್ಮ ಕಣ್ಣ ಮುಂದೆ ತರುತ್ತದೆ. ಅವರ ಪ್ರತಿಯೊಂದು ಹಾಡುಗಳು ಯುಗಯುಗಾಂತರಗಳವರೆಗೂ ನಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ. ದಾದಾಪೀರ್ ಮಾತನಾಡಿ ದೇವಾನಂದ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದರು, ಕೆಲವೊಮ್ಮೆ ಪಕ್ಷದ ಪರಿಧಿ ಮೀರಿ ನಿಂತ ಉದಾಹರಣೆ ಇವೆ. ಮಾನವೀಯ ಮೌಲ್ಯಗಳಿಗೆ ಸದಾ ತುಡಿಯುವ ಮನಸಿನ ಅವರು ಕೋವಿಡ್ ಸಂದರ್ಭದಲ್ಲಿ ಪ್ರಚಾರ ಪಡೆಯದೆ ಉಚಿತ ಮಾಸ್ಕ್ ವಿತರಣೆ, ವಾಹನ ಚಾಲಕರಿಗೆ ಕುಡಿಯಲು ಬಿಸಿ ನೀರು ಕೊಡುವ ಯಂತ್ರ ಅಳವಡಿಸಿದ್ದರು. ಪೆಟ್ರೋಲ್ ಬಂಕ್ ಮಾಲೀಕರಾಗಿದ್ದ ಅವರು ತೈಲ ಬೆಲೆ ಹೆಚ್ಚಳವಾಗುವ ಮುನ್ಸೂಚನೆ ಇದ್ದರೆ ವಾಹನ ಚಾಲಕರಿಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಸಲಹೆ ನೀಡುತ್ತಿದ್ದರು.
ವೃದ್ಧಾಶ್ರಮ ಹಾಗೂ ಮಂತ್ರಾಲಯದಲ್ಲಿ ವಿಶ್ರಾಂತಿ ತಾಣ ನಿರ್ಮಿಸುವ ಬಯಕೆ ಹೊಂದಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸಂದರ್ಭದಲ್ಲಿ ಹೋರಾಟ ನಡೆಸಿ ಮಲೆನಾಡಿನ ರೈತರಿಗೆ ಮಾರಕವಾದ ಸರ್ಫೇಸಿ ಕಾಯ್ದೆ ರದ್ದು ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರು.
ಜಾತಿ, ಪಕ್ಷ, ಧರ್ಮ ಪ್ರೀತಿಸುತ್ತಲೇ ಅದನ್ನು ಮೀರುತ್ತ ಬೆಳೆದಿದ್ದ ದೇವಾನಂದ್ ಉತ್ತಮ ವಾಗ್ಮಿ, ಚಿಂತಕ, ವಿದೇಶಿ ಬೆಳೆಗಳನ್ನು ಬೆಳೆದ ಅಪರೂಪದ ರೈತ. ತೈಲ ಮಾರಾಟಗಾರರ ಸ್ಥಿತಿ ಕುರಿತು ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದ ಅವರು ಅನಾರೋಗ್ಯ ಪೀಡಿತರಾಗಿದ್ದರು ಸಹ ಸಮಾಜ ಶಾಸ್ತ್ರ ವಿಷಯ ಕುರಿತು ಪಿಎಚ್. ಡಿ ಅಧ್ಯಯನ ನಡೆಸುವ ಮೂಲಕ ನಿರಂತರ ವಿದ್ಯಾರ್ಥಿಯಾಗಿದ್ದರು ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಸಿದ್ರಾಮಪ್ಪ ಮಾತನಾಡಿ ಎಸ್. ಜಾನಕಿ ತಮ್ಮ ಹಾಡುಗಳ ಮೂಲಕ ಕನ್ನಡ ಭಾಷೆ ಬಿತ್ತಿದರು. ಆರ್. ದೇವಾನಂದ್ ಪ್ರಸ್ತುತ ಸಮಸ್ಯೆಗಳ ಬಗ್ಗೆ ನಿಷ್ಟುರತೆ ಹೊಂದಿದ್ದರು. ಪತ್ರಕರ್ತರ ಜೊತೆ ಸ್ನೇಹ ಹೊಂದಿದ್ದರು ಎಂದು ಹೇಳಿದರು.
ಕನ್ನಡಶ್ರೀ ಬಿ. ಎಸ್. ಭಗವಾನ್ , ವಕೀಲ ಸುರೇಶ್ ಚಂದ್ರ, ಟಿ. ಜಿ. ಸದಾನಂದ, ಮನಸುಳಿ ಮೋಹನ್, ನಾಗಜ್ಯೋತಿ, ಮಧು ಸೂಧನ್ ಕಕ್ರಿ ಮಾತನಾಡಿದರು. ಲತಾ ಕೃಷ್ಣ ಮೂರ್ತಿ, ರೋಹಿಣಿ ನರಸಿಂಹ ಮೂರ್ತಿ, ವಿಜಯ ಪ್ರಕಾಶ್, ವಿನಯ್. ಗೀತಾ, ನೀಲಾಂಬಿಕೆ, ಸದಾನಂದ್ ಗೀತೆಗಳನ್ನು ಹಾಡಿದರು.-
23ಕೆಟಿಆರ್.ಕೆ.6ಃತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್, ಕಲಾವಿದೆ ಸುನಿತಾ ಕಿರಣ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಅಧ್ಯಕ್ಷ ಎಸ್.ಸಿದ್ರಾಮಪ್ಪ,ವಕೀಲ ಎಸ್.ಸುರೇಶ್ ಚಂದ್ರ, ಕನ್ನಡಶ್ರೀ ಬಿ.ಎಸ್.ಭಗವಾನ್ ಭಾಗವಹಿಸಿದ್ದರು.