ಕರ್ನಾಟಕದ ನಿಜವಾದ ಸಂಸ್ಕೃತಿ ಉತ್ತರ ಕರ್ನಾಟಕದ್ದು: ಚಿರಂಜಿವಿ ಸಿಂಗ್‌

| Published : Dec 02 2024, 01:16 AM IST

ಕರ್ನಾಟಕದ ನಿಜವಾದ ಸಂಸ್ಕೃತಿ ಉತ್ತರ ಕರ್ನಾಟಕದ್ದು: ಚಿರಂಜಿವಿ ಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕದ್ದು ಕರ್ನಾಟಕದ ನಿಜವಾದ ಸಂಸ್ಕೃತಿ. ಈ ಸಂಸ್ಕೃತಿಯ ರಕ್ಷಕರು ವಿದ್ಯಾರ್ಥಿಗಳು. ನಮಗೆ ಎಂಥ ಸಮಾಜ ಇರಬೇಕು ಎಂದು ನಿರ್ಮಿಸಿಕೊಳ್ಳುವ ಶಕ್ತಿ ಅವರಿಗಿದೆ ಎಂದು ವಿಶ್ರಾಂತ ಐಎಎಸ್ ಅಧಿಕಾರಿ ಚಿರಂಜಿವಿ ಸಿಂಗ್ ನುಡಿದರು.

ಧಾರವಾಡ: ಉತ್ತರ ಕರ್ನಾಟಕದ್ದು ಕರ್ನಾಟಕದ ನಿಜವಾದ ಸಂಸ್ಕೃತಿ. ಈ ಸಂಸ್ಕೃತಿಯ ರಕ್ಷಕರು ವಿದ್ಯಾರ್ಥಿಗಳು. ನಮಗೆ ಎಂಥ ಸಮಾಜ ಇರಬೇಕು ಎಂದು ನಿರ್ಮಿಸಿಕೊಳ್ಳುವ ಶಕ್ತಿ ಅವರಿಗಿದೆ ಎಂದು ವಿಶ್ರಾಂತ ಐಎಎಸ್ ಅಧಿಕಾರಿ ಚಿರಂಜಿವಿ ಸಿಂಗ್ ನುಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ `ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ ಅವರು, ದೇಶದ ಪರಂಪರೆಯಲ್ಲಿ ಶ್ರವಣ ಮತ್ತು ಮನನ ಇವುಗಳಿಗೆ ಬಹಳ ಮಹತ್ವ ಇತ್ತು. ಕೇಳುವುದು ಒಂದು ಕಲೆ. ನಾವು ಮಾತನಾಡುತ್ತೇವೆ, ಆದರೆ ಕೇಳುವುದು ಕಷ್ಟ. ಇಂದು ಅದು ಗೌನವಾಗುತ್ತಾ ಸಾಗಿದೆ. ವಿದ್ಯಾರ್ಥಿಗಳಿಗೆ ಈ ಕೇಳುವ ಮತ್ತು ಕೇಳಿದ್ದನ್ನು ಮನನ ಮಾಡಿಕೊಳ್ಳುವ ಸಂಸ್ಕೃತಿ ರೂಢಿಸಿಕೊಳ್ಳುವುದು ಮಹತ್ವವಾಗಿದೆ. ಜೀವನದಲ್ಲಿ ಸಮರಸ ಇರಬೇಕು. ಇಲ್ಲದಿದ್ದರೆ ಜೀವನವೇ ವ್ಯರ್ಥವಾಗುತ್ತದೆ. ಸುಖ, ದುಃಖ, ಮಾನ, ಅಪಮಾನವನ್ನು ಸಮಭಾವದಿಂದ ಸ್ವೀಕರಿಸಬೇಕು. ನಾವು ಏನು ಕಲಿಯಬೇಕಾಗಿದೆ ಎಂದರೆ ಅನುಕಂಪ, ಕರುಣೆ, ದಯೆ ಕಲಿಯಬೇಕು ಎಂದರು.

ನಮ್ಮ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತೇವೆ. ಆದರೀಗ, ನಮ್ಮ ದೇಶ ಯಾವ ದಿಕ್ಕಿನತ್ತ ಹೊರಟಿದೆ ಎಂದು ಯೋಚಿಸಬೇಕಿದೆ. ಬಸವಣ್ಣ ದಯವೇ ಧರ್ಮದ ಮೂಲ ಎಂದರು. ಹದಿನೈದನೇ ಶತಮಾನದ ಗುರುನಾನಕರು ಧರ್ಮ ದಯೆಯ ಸುಪುತ್ರ ಎನ್ನುತ್ತಾರೆ. ದೇಶವು ಬಸವ ಮಾರ್ಗ ವಿರುದ್ಧ ನಡೆಯುತ್ತಿದೆ. ವಚನಗಳು ಈ ಮಣ್ಣಿನ ಭಾಗ. ಕರ್ನಾಟಕದ ಜನತೆ ಮುಂದೆ ದೊಡ್ಡ ಸವಾಲು ಇದೆ. ಬಸವಣ್ಣನವರು ಮನುಷ್ಯನ ಬದುಕಿನ ಚಿಂತನೆ ನೀಡಿದ್ದಾರೆ. ಆದರೆ, ಅದರ ವಿರುದ್ಧ ಯಾಕೆ ಹೋಗುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಮೌಲ್ಯಿಕ ಮಾರ್ಗ ಬಿಟ್ಟು ಅಮೌಲ್ಯಿಕ ಮಾರ್ಗಕ್ಕೆ ಯಾಕೆ ಹೋಗುತ್ತಿರುವುದು ಎಂಬುದರ ಕುರಿತು ಇಂದು ಯುವಕರು, ಚಿಂತಕರು ಆಲೋಚಿಸಬೇಕು ಎಂದರು.

ಇನ್ನೊಬ್ಬ ಧರೆಗೆ ದೊಡ್ಡವರು ಹಿರಿಯ ಸಾಹಿತಿ ಶಶಿಕಲಾ ವಸ್ತ್ರದ ಮಾತನಾಡಿ, ನಮ್ಮ ನಾಡಿನಲ್ಲಿಯೇ ಕನ್ನಡ ಉಳಸಲಿಕ್ಕೆ ಬಡಿದಾಡಬೇಕಾದ ಸ್ಥಿತಿ ಬಂದಿದೆ. ಮಕ್ಕಳಲ್ಲಿ ರಾಜಕೀಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ನಾಗರಿಕ ಪ್ರಜ್ಞೆ ಬೆಳೆಸಬೇಕು. ಸಮಾಜಕ್ಕೆ, ದೇಶಕ್ಕೆ ಏನು ಕೊಟ್ಟಿರಿ ಎನ್ನುವುದು ಮುಖ್ಯವಾಗಬೇಕು. ಎಂಥ ಪದವಿ ತೆಗೆದುಕೊಂಡೆ, ಎಷ್ಟು ಮಾರ್ಕ್ಸ್ ತೆಗೆದುಕೊಂಡೆ ಎಂಬುದು ಮುಖ್ಯವಾಗಬಾರದು. ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮೊಬೈಲ್‌ ಬಿಟ್ಟು ಪುಸ್ತಕ ಹಿಡಿದು ಓದಿದರೆ ಜ್ಞಾನ ವಿಸ್ತರಣೆಯಾಗುತ್ತದೆ. ಮೊಬೈಲ್ ವಿಷ ಎಂದು ಗೊತ್ತಿದ್ದರೂ ಅದನ್ನು ಪ್ರೀತಿಸುವವರಿಗೆ ಭವಿಷ್ಯ ಮಂಕಾಗಿರುತ್ತದೆ. ಮನೆಯಲ್ಲಿ ಪಾಲಕರೇ ಕನ್ನಡವನ್ನು ಅಸಡ್ಡೆಯಿಂದ ನೋಡುತ್ತಾರೆ. ತಮ್ಮ ಮಕ್ಕಳು ಇಂಗ್ಲೀಷ್‌ನಲ್ಲಿ ಮಾತನಾಡಬೇಕು ಎಂದು ಬಯಸುತ್ತಾರೆ ಎಂದರು.

ನಿವೃತ್ತ ಅಧಿಕಾರಿ ಡಾ. ಸದಾಶಿವ ಮರ್ಜಿ, ಪ್ರಾಧ್ಯಾಪಕ ಡಾ. ಅನುಸೂಯಾ ಕಾಂಬಳೆ ಮಾತನಾಡಿದರು. ಶಂಕರ ಹಲಗತ್ತಿ ಇದ್ದರು.

ರಾಣಿಬೆನ್ನೂರು ರಾಜಧಾನಿ ಆಗಬೇಕಿತ್ತು

ಉತ್ತರ ಕರ್ನಾಟಕದ ಅಸಮತೋಲನದ ಹಿನ್ನೆಲೆಯಲ್ಲಿ ರಾಜ್ಯದ ರಾಜಧಾನಿ ರಾಣಿಬೆನ್ನೂರಿನಲ್ಲಿ ಆಗಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರ ಒಪ್ಪಲಿಲ್ಲ. ಶಿಕ್ಷಣ ಮತ್ತು ಆರೋಗ್ಯ ಇಲ್ಲದೇ ಯಾವ ದೇಶವೂ ಅಭಿವೃದ್ಧಿ ಹೊಂದಲಾರದು. ನಮ್ಮ ರಾಜಕಾರಣಿಗಳು ಅಷ್ಟಾಗಿ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರಿಗೆ ನೀವ್ಯಾಕೆ ಶಿಕ್ಷಣಕ್ಕೆ ಆಧ್ಯತೆ ಕೊಡತ್ತಿಲ್ಲ ಎಂದು ಕೇಳಬೇಕಾಗಿದೆ. ಉತ್ತರ ಕರ್ನಾಟಕದ ರಾಜಕಾರಣಿಗಳು ಕಾಳಜಿಯಿಂದ ಇದಕ್ಕೆ ಆಧ್ಯತೆ ನೀಡಬೇಕಿದೆ. ಆಗಲೇ ಹಿಂದುಳಿದ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಮಕ್ಕಳೊಂದಿಗೆ ಸಂವಾದ ಮಾಡುತ್ತ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.