ಬಡವರ, ನ್ಯಾಯದ ಪರ ನಿಲ್ಲುವವನೇ ನಿಜವಾದ ರೆಡ್ಡಿ

| Published : Jan 20 2025, 01:30 AM IST

ಸಾರಾಂಶ

ಬಡವ, ಬಲ್ಲಿದರ ನೆರವಿಗೆ ನಿಂತು ನ್ಯಾಯದ ರಕ್ಷಣೆ ಮಾಡುವವನೇ ನಿಜವಾದ ರೆಡ್ಡಿ. ಈ ಸಮುದಾಯದಲ್ಲಿ ಹುಟ್ಟಿದ ಬಳಿಕ ಬಡವರ ರಕ್ಷಣೆ ಮಾಡಬೇಕು.

ಬಳ್ಳಾರಿ: ಬಡವ, ಬಲ್ಲಿದರ ನೆರವಿಗೆ ನಿಂತು ನ್ಯಾಯದ ರಕ್ಷಣೆ ಮಾಡುವವನೇ ನಿಜವಾದ ರೆಡ್ಡಿ. ಈ ಸಮುದಾಯದಲ್ಲಿ ಹುಟ್ಟಿದ ಬಳಿಕ ಬಡವರ ರಕ್ಷಣೆ ಮಾಡಬೇಕು. ನ್ಯಾಯದ ಪರ ನಿಲ್ಲಬೇಕು. ಕಷ್ಟ ಹೇಳಿಕೊಂಡು ಬರುವ ಜನರಿಗೆ ನೆರವು ನೀಡಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ರೆಡ್ಡಿ ಜನ ಸಂಘದಿಂದ ಏರ್ಪಡಿಸಿದ್ದ ಯೋಗಿ ವೇಮನರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜ ಸೇವೆಯ ಬಗ್ಗೆ ಜಯಂತಿಯ ಸಂದರ್ಭದಲ್ಲಿ ಮಾತನಾಡುತ್ತೇವೆ. ಆದರೆ, ದಿನ ಬೆಳಾಗುವುದರಲ್ಲಿ ನಮ್ಮ ಅಭಿಪ್ರಾಯ ಬದಲಾಗಿರುತ್ತದೆ. ನನ್ನ ಕುಟುಂಬ, ನನ್ನ ಆಸ್ತಿ, ನನ್ನ ಪಕ್ಷ ಎಂಬ ಸ್ವಾರ್ಥ ಜಾಗೃತಗೊಳ್ಳುತ್ತದೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದ ಬಳಿಕ ಜನಕಲ್ಯಾಣಕ್ಕಾಗಿ ಶ್ರಮಿಸಬೇಕು. ಸಮಾಜದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕೆಲಸ ಮಾಡಬೇಕು. ರೆಡ್ಡಿ ಸಮಾಜದ ಹಲವು ಮುಖಂಡರು ನಾವು ಬೇರೆ ಪಕ್ಷಗಳಲ್ಲಿ ಇದ್ದರೂ ರೆಡ್ಡಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದು ತಿಳಿಸಿದರು.

ರೆಡ್ಡಿ ಸಮುದಾಯದಲ್ಲಿ ಬಡವರೇ ಇಲ್ಲ ಎಂಬುದು ಸುಳ್ಳು. ನಮ್ಮಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಬಡವರಿದ್ದಾರೆ, ಅಂಥವರ ಕಲ್ಯಾಣಕ್ಕಾಗಿ ಶ್ರಮಿಸೋಣ. ವಿಶೇಷವಾಗಿ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡೋಣ. ನಮ್ಮ ಸಮುದಾಯದ ಯುವ ಜನಾಂಗದ ಅಭಿವೃದ್ಧಿಗಾಗಿ ನಮ್ಮ ಹಿರಿಯರು ಹಲವು ಕನಸು ಕಂಡಿದ್ದಾರೆ. ಅವುಗಳನ್ನು ಸಾಕಾರಗೊಳಿಸೋಣ. ನಗರದ ತಾಳೂರು ರಸ್ತೆಗೆ ಮಹಾಯೋಗಿ ವೇಮನರ ಹೆಸರು ನಾಮಕರಣ ಮಾಡುವ ಕುರಿತು ಈಗಾಗಲೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಆದಷ್ಟು ಶೀಘ್ರವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಬಳ್ಳಾರಿಯಲ್ಲಿ ರೆಡ್ಡಿ ಸಮುದಾಯದ ಹೆಣ್ಣುಮಕ್ಕಳಿಗೆ ವಸತಿ ನಿಲಯ ನಿರ್ಮಿಸಲು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ನಗರದಲ್ಲಿ ರೆಡ್ಡಿ ಭವನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದರು.

ಸಮಾರಂಭದ ಅತಿಥಿಯಾಗಿ ಪಾಲ್ಗೊಂಡಿದ್ದ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, 15ನೇ ಶತಮಾನದ ವಚನಕಾರರಾದ ಮಹಾಯೋಗಿ ವೇಮನ ವಚನಗಳು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿವೆ ಹಾಗೂ ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.

ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂ ಬಾಷಾ ಉಪನ್ಯಾಸ ನೀಡಿದರು.

ಬಳ್ಳಾರಿಯ ಎನ್.ಬಸವರಾಜು ಅವರು ವೇಮನ ಪದ್ಯಗಳನ್ನು ಪ್ರಸ್ತುತ ಪಡಿಸಿದರು.

ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ರೆಡ್ಡಿ ಜನ ಸಂಘದ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ,

ನಾರಾ ಶೈಲಜಾ ಪ್ರತಾಪ್ ರೆಡ್ಡಿ, ಪ್ರಭು ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ, ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಮಹಾಯೋಗಿ ವೇಮನ ಜಯಂತಿಯ ಅಂಗವಾಗಿ ನಗರದಲ್ಲಿ ಸಾಂಸ್ಕೃತಿಕ ಕಲಾತಂಡಗಳಿಂದ ಮೆರವಣಿಗೆ ನಡೆಯಿತು.